ಕಾಂಗ್ರೆಸ್ ನ ಒಬಿಸಿ ಸಮಿತಿಯಲ್ಲಿ ಕಂಚ ಐಲಯ್ಯ ಶೆಫರ್ಡ್ ಹೆಸರು!

ಡಾ.ಕಂಚ ಐಲಯ್ಯ ಶೆಫರ್ಡ್
ಹೈದರಾಬಾದ್,ಆ.24: ಕಾಂಗ್ರೆಸ್ ಪಕ್ಷದ ಒಬಿಸಿ ಸೈದ್ಧಾಂತಿಕ ಸಲಹಾ ಸಮಿತಿಯಲ್ಲಿ ತನ್ನ ಹೆಸರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಮುಖ ದಲಿತ ಹಕ್ಕುಗಳ ಹೋರಾಟಗಾರ ಹಾಗೂ ಲೇಖಕ ಡಾ.ಕಂಚ ಐಲಯ್ಯ ಶೆಫರ್ಡ್ ಅವರು ತಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದನ್ನು ನಿರಾಕರಿಸಿದ್ದಾರೆ.
ತಾನು ಕಾಂಗ್ರೆಸ್ ಗೆ ಸೇರಿದ್ದೇನೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಉಸ್ಮಾನಿಯಾ ವಿವಿಯ ಮಾಜಿ ರಾಜಕೀಯ ವಿಜ್ಞಾನ ಪ್ರಾಧ್ಯಾಪಕರೂ ಆಗಿರುವ ಐಲಯ್ಯ,ತಾನು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದಿಲ್ಲ ಮತ್ತು ಒಬಿಸಿ ಸಮಿತಿಯೊಂದಿಗೆ ತನ್ನ ಸಂಬಂಧವು ಸಂಪೂರ್ಣವಾಗಿ ಸೈದ್ಧಾಂತಿಕವಾಗಿದೆ ಎಂದು ಸ್ಪಷ್ಟಪಡಿಸಿದರು.
‘ನಾನು ಕಾಂಗ್ರೆಸ್ ಗೆ ಸೇರಿದ್ದೇನೆ ಎಂದು ಅವರು ವದಂತಿಗಳನ್ನು ಹರಡುತ್ತಿದ್ದಾರೆ. ನಾನು ಕಾಂಗ್ರೆಸ್ ಗೆ ಸೇರಿಲ್ಲ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಐಲಯ್ಯ ತಿಳಿಸಿದರು.
ಬಿಜೆಪಿ ಮತ್ತು ಆರೆಸ್ಸೆಸ್ ನ ಸುಳ್ಳು ನಿರೂಪಣೆಗಳನ್ನು ಬಯಲಿಗೆಳೆಯುವ ಮತ್ತು ಅವರು ಹೇಗೆ ಶೂದ್ರ, ಒಬಿಸಿ ಸಮುದಾಯಗಳನ್ನು ವಿಮೋಚನೆಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸುವ ಅಗತ್ಯವಿದೆ ಎಂದು ತಾನು ಭಾವಿಸಿದ್ದರಿಂದ ಒಬಿಸಿ ಸಮಿತಿಯ ಸದಸ್ಯತ್ವವನ್ನು ಸ್ವೀಕರಿಸಿದ್ದೇನೆ ಎಂದು ಅವರು ತಿಳಿಸಿದರು.
ಐಲಯ್ಯ ಅವರು ಹಲವಾರು ವರ್ಷಗಳಿಂದ ಜಾತಿ ಗಣತಿಗಾಗಿ ಅಭಿಯಾನ ನಡೆಸುತ್ತಿದ್ದು, ಇದು ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಕೈಗೆತ್ತಿಕೊಂಡಿರುವ ಪ್ರಮುಖ ರಾಜಕೀಯ ಹೋರಾಟಗಳಲ್ಲಿ ಒಂದಾಗಿದೆ. ಐಲಯ್ಯ ಇತ್ತೀಚಿಗೆ ತೆಲಂಗಾಣ ಸಾಮಾಜಿಕ - ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಜಾತಿ ಸಮೀಕ್ಷೆ ಕುರಿತು ವಿವರವಾದ ವರದಿಯನ್ನು ಸಲ್ಲಿಸಿರುವ ಐಡಬ್ಲ್ಯುಜಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.







