ಮಂಗಳೂರು: ʼಲಿಟ್ ಫೆಸ್ಟ್ 2023ʼ ಚಾಲನೆ; ಪುಸ್ತಕ ಕುರಿತು ಸಂವಾದ
ಮಂಗಳೂರು, ಫೆ.18: ಮಂಗಳೂರು ಲಿಟ್ ಫೆಸ್ಟ್ 2023 ಐದನೇ ಆವೃತ್ತಿಯು ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ಶನಿವಾರದಂದು ವಿದ್ಯುಕ್ತವಾಗಿ ಆರಂಭಗೊಂಡಿತು.
ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಲಿಟ್ ಫೆಸ್ಟ್ ಮೂಲಕ ವರ್ತಮಾನದ ದೇಶ, ಭಾಷೆ, ಕಲೆ, ಸಂಸ್ಕೃತಿಯ ಅನಾವರಣವಾಗುತ್ತದೆ. ಲಿಟರೇಚರ್ ರಿಫ್ಲೆಕ್ಟ್ಸ್ ಏಜ್ ಆ್ಯಂಡ್ ಕಲ್ಚರ್ ಆಫ್ ದಿ ನೇಶನ್- ಸಾಹಿತ್ಯವು ದೇಶದ ಸಂಸ್ಕೃತಿ ಮತ್ತು ಕಾಲವನ್ನು ಪ್ರತಿಬಿಂಬಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಉಪಕುಲಪತಿ ವಿನಯ್ ಹೆಗ್ಡೆ ಅವರು ಮಾತನಾಡಿ ಮಂಗಳೂರು ನಗರವು ವಿದ್ಯಾ ಕ್ಷೇತ್ರ, ಆರೋಗ್ಯ ಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಭಾರತ್ ಫೌಂಡೇಶನ್ ಮೂಲಕ ಆಯೋಜಿಸಲಾದ ಈ ಲಿಟ್ ಫೆಸ್ಟ್ ಕಾರ್ಯಕ್ರಮವು ಮಾರ್ಗದರ್ಶಿಯಾಗಿದೆ ಎಂದರು.
ಮಂಗಳೂರು ಪ್ರದೇಶವು ಧಾರ್ಮಿಕವಾಗಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಬಹಳ ಎತ್ತರಕ್ಕೆ ಏರಿದ ಸ್ಥಳವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿಯೇ ಮಂಗಳೂರು ಪ್ರದೇಶಕ್ಕೆ ವಿಶೇಷ ಸ್ಥಾನವಿತ್ತು. ಭೌಗೋಳಿಕ ವಾಗಿಯೂ ಶ್ರೀಮಂತಿಕೆ ಹೊಂದಿರುವ ಈ ಪ್ರದೇಶದಲ್ಲಿ ಆಯೋಜಿಸಲಾದ ಲಿಟ್ ಫೆಸ್ಟ್ ವಿಶ್ವಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಲಿಟ್ ಫೆಸ್ಟ್ 2023 ಉದ್ಘಾಟನಾ ಕಾರ್ಯಕ್ರಮದಲ್ಲಿ ಜಾನಪದ, ಇತಿಹಾಸ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕಾಧ್ಯಕ್ಷ ಡಾ. ತುಕಾರಾಮ್ ಪೂಜಾರಿ ಅವರಿಗೆ ಲಿಟ್ ಫೆಸ್ಟ್ 2023ರ ಜೀವಮಾನದ ಶ್ರೇಷ್ಠ್ಠ ಸಾಧನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸ್ವರಾಜ್ಯ ಪತ್ರಿಕೆಯ ಸಂಪಾದಕೀಯ ಮಂಡಳಿ ನಿರ್ದೇಶಕ ಆರ್.ಜಗನ್ನಾಥನ್ ಮಾತನಾಡಿ , ಚಾಣಕ್ಯ ಸೂತ್ರದಲ್ಲಿ ತಿಳಿಸಿರುವ ಸುಖಸ್ಯ ಮೂಲಂ ಧರ್ಮ:, ಧರ್ಮಸ್ಯ ಮೂಲಂ ಅರ್ಥ:, ಆರ್ಥಸ್ಯ ಮೂಲಂ ರಾಜ್ಯ:ಎಂಬ ಸಂಸ್ಕೃತ ಉಕ್ತಿಯನ್ನು ಉಲ್ಲೇಖಿಸಿದ ಅವರು ದೇಶ ಸುಭೀಕ್ಷೆಯಲ್ಲಿರಬೇಕೆಂಬುದರ ಮೂಲ ಧರ್ಮವೇ ಆಗಿದೆ. ನಂತರದಲ್ಲಿ ಉತ್ತಮ ಆರ್ಥಿಕ ನೀತಿಯು ದೇಶವನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ ಎಂದರು.
ಜೀವಮಾನ ಸಾಧಕ ಪ್ರಶಸ್ತಿ ಸ್ವೀಕರಿಸಿದ ತುಕಾರಾಮ್ ಪೂಜಾರಿ ಮಾತನಾಡಿ ನಮ್ಮ ಪೂರ್ವಜರಿಗೆ ಅಕ್ಷರ ಜ್ಞಾನ ಇಲ್ಲದಿದ್ದರೂ ಪ್ರಕೃತಿ ಮತ್ತು ಸಂಸ್ಕೃತಿಯ ಜ್ಞಾನ ಉತ್ತಮವಾಗಿತ್ತು. ಅವರಿಂದಲೇ ನಮ್ಮ ಸಂಸ್ಕೃತಿಯು ಈ ತನಕ ಹರಿದು ಬಂದಿದೆ. ಅದಕ್ಕೆ ನಾವು ಋಣಿಯಾಗಿರಬೇಕಿದೆ ಎಂದರು.
ಈ ಸಂದರ್ಭ ಭಾರತ್ ಫೌಂಡೇಶನ್ ಟ್ರಸ್ಟಿಗಳಾದ ಕ್ಯಾ.ಬೃಜೇಶ್ ಚೌಟ, ಸುನಿಲ್ ಕುಲಕರ್ಣಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಲ್ಲಕ್ಕಿಯ ಮೂಲಕ ಪುಸ್ತಕಗಳ ಮೆರವಣಿಗೆಯು ಲಿಟ್ ಫೆಸ್ಟ್ ನಡೆಯುವ ಟಿ.ಎಂ.ಎ ಪೈ ಸಭಾಂಗಣದವರೆಗೂ ನಡೆಯಿತು. ಹಿರಿಯ ಜಾನಪದ ಕಲಾವಿದೆ ಭವಾನಿ ಅಮ್ಮ ಪೆರ್ಗಡೆ ಅವರು ಪಾಡ್ದನ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ವಾಗತಿಸಿದರು.
ಬಹುವಚನಕ್ಕೊಂದೇ ತತ್ವ : ಡಾ. ಅಜಕ್ಕಳ ಗಿರೀಶ್ ಭಟ್ ಮತ್ತು ರೋಹಿತ್ ಚಕ್ರತೀರ್ಥ ಅವರು ಬಹುವಚನಕ್ಕೊಂದೇ ತತ್ವ ಪುಸ್ತಕದ ಕುರಿತು ಸಂವಾದ ನಡೆಸಿದರು.
ಡಾ. ಅಜಕ್ಕಳ ಗಿರೀಶ್ ಭಟ್ ಅವರು ಮಾತನಾಡಿ, ಹಿಂದುತ್ವ ಎಂಬುದು ಜೀವನ ಪದ್ಧತಿ ಎಂಬುದನ್ನು ಸರ್ವೋಚ್ಛ ನ್ಯಾಯಾಲಯ ಹೇಳಿದ್ದನ್ನು ಒಪ್ಪಿಕೊಂಡಿದ್ದೇವೆ. ಏಕತ್ವ-ಬಹುತ್ವದ ಸಂಗಮ ಹಿಂದುತ್ವ. ಹಿಂದುತ್ವ ಭಾರತೀಯತ್ವದ ಅನುಭವ. ದಲಿತರಿಂದ ಬ್ರಾಹ್ಮಣರವರೆಗೆ ಸಮಾನವಾಗಿರುವ ಅಂಶಗಳು ಹಿಂದುತ್ವದಲ್ಲಿ ಇದೆ. ದೇವರನ್ನು ಮನುಷ್ಯರಾಗಿ, ಮನುಷ್ಯರನ್ನು ದೇವರಾಗಿ ಕಾಣುವುದು, ದೇವರೆ ಇಲ್ಲ ಎಂಬ ವಾದ, ಭೂಮಿಯ ಪ್ರತಿಯೊಂದು ಅಂಶವನ್ನೂ ದೇವರಾಗಿ ಕಾಣುವುದು, ಪುರಾಣಗಳ ಸೃಷ್ಟಿ, ವಿಮರ್ಶೆಗಳು ಎಲ್ಲಾ ಹಿಂದೂಗಳಿಗೆ ಸಮಾನವಾಗಿದೆ. ಇದು ಬಹುತ್ವಕ್ಕೆ ಆಸ್ಪದ ನೀಡಿದ ಅಂಶಗಳು. ತೆರೆದ ಮನಸ್ಸಿನಿಂದ ಬಹುತ್ವವೇ ಹಿಂದುತ್ವ ಎಂಬುದನ್ನು ಒಪ್ಪಿಕೊಳ್ಳಲೇಬೇಕು ಎಂದರು.
ಹಿಂದೂ ಇದ್ದಾಗ ಹಿಂದುತ್ವ ಇದ್ದೇ ಇರುತ್ತದೆ : ಆರ್. ಜಗನ್ನಾಥ್, ಅರವಿಂದನ್ ನೀಲಕಂದನ್ ಮತ್ತು ಜಯದೀಪ್ ಶೆಣೈ ಅವರು ಸಂವಾದ ನಡೆಸಿದರು.
ಆರ್. ಜಗನ್ನಾಥ್ ಅವರು ಮಾತನಾಡಿ, ಹಿಂದೂ ಇದ್ದಾಗ ಹಿಂದುತ್ವ ಇದ್ದೇ ಇರುತ್ತದೆ. ನಮ್ಮದು ಧಾರ್ಮಿಕ ರಾಷ್ಟ್ರ. ಸಿಸಿಎ ಬಗೆಗಿನ ಸಂದರ್ಭದಲ್ಲಿ ಕೆಲವೊಂದು ಸಂಗತಿಗಳು ನಮಗೆ ಅರಿವಿಗೆ ಬಂತು. ಅದೇನೆಂದರೆ ಹಿಂದೂವಾಗಿ ನೀವು ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನ್ನಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುವಂತಿಲ್ಲ. ಆದರೆ ಪ್ಯಾಲೆಸ್ತೇನ್ ಬಗ್ಗೆ ಮಾತನಾಡಬಹುದು. ಧರ್ಮವೆಂದರೆ ಇದ್ದ ಅವಕಾಶಗಳಲ್ಲಿ ಸೂಕ್ತವಾದ, ಸರಿಯಾದ ಅವಕಾಶವನ್ನು ಬಳಸಿಕೊಳ್ಳುವುದು, ಸರಿಯಾದುದನ್ನು ಮಾಡುವುದು. ರಾಜಧರ್ಮ ಕೂಡ ಸರಿಯಾದ ಕಾರ್ಯ ಮಾಡುವುದೇ ಆಗಿದೆ ಎಂದರು.
ಅರವಿಂದನ್ ನೀಲಕಂದನ್ ಅವರು ಮಾತನಾಡಿ, ಹಿಂದೂಗಳು ಕೇವಲ ಧಾರ್ಮಿಕ ಬಹುಸಂಖ್ಯಾತರು, ರಾಜಕೀಯ ಬಹುಸಂಖ್ಯಾತರಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತಿಲ್ಲ. ಪ್ರಸ್ತುತ ಹಿಂದೂಗಳು ಅಪಾಯದಲ್ಲಿದ್ದಾರೆ. ಬಾಂಗ್ಲಾ, ಪಾಕಿಸ್ಥಾನದಲ್ಲಿ ಹಿಂದೂಗಳು ಅಳಿವಿನಂಚಿನಲ್ಲಿದ್ದಾರೆ ಎಂದರು.
ಸಾಹಿತ್ಯ: ಒಳನೋಟ - ಹೊರನೋಟ : ಕೆ. ಎನ್. ಗಣೇಶಯ್ಯ ಮತ್ತು ಡಾ. ಸುಧೀಂದ್ರ ಅವರು ಸಂವಾದ ನಡೆಸಿದರು.
ಡಾ. ಸುಧೀಂದ್ರ ಅವರು ಮಾತನಾಡಿ, ನಿಮ್ಮ ಬಾಲ್ಯದಲ್ಲಿ ಮತ್ತು ಬೆಳವಣಿಗೆಯ ಹಂತದಲ್ಲಿ ನಿಮ್ಮ ತಂದೆಯವರ ಪ್ರಭಾವ ಇತ್ತು ಅಂತ ಹೇಳಿದಿರಿ. ನಿಮ್ಮ ಬರವಣಿಗೆಯ ಮೇಲೆ ಅವರ ಪ್ರಭಾವ ಇದೆಯೇ? ಎಳವೆಯಲ್ಲಿ ಬರವಣಿಗೆ ಪ್ರಾರಂಭಿಸಿ ಮಾಗುವುದಕ್ಕೂ, ಮಾಗಿದ ಮೇಲೆ ಬರವಣಿಗೆ ಪ್ರಾರಂಭಿಸುವುದಕ್ಕೂ ವ್ಯತ್ಯಾಸ ಇದೆಯಾ ಎಂದರು.
ಕೆ. ಎನ್. ಗಣೇಶಯ್ಯ ಅವರು ಮಾತನಾಡಿ, ವ್ಯತ್ಯಾಸದ ಬಗ್ಗೆ ಹೇಳಲಾರೆ. ಯಾಕಂದ್ರೆ ನಾನು 50 ವರ್ಷ ಆದ ಮೇಲೆ ಬರೆಯಲು ಪ್ರಾರಂಭಿಸಿದ್ದು. ಅಲ್ಲಿವರೆಗೂ ನಾನು ಬರೆಯಬಲ್ಲೆ ಎಂಬ ಅರಿವೇ ಇರಲಿಲ್ಲ. ಹೌದು, ನನ್ನ ಬರವಣಿಗೆಗಳ ಮೇಲೆ ನನ್ನ ತಂದೆಯವರ ಪ್ರಭಾವ ಇದೆ. ಅವರು ತಮ್ಮ ತೋಳಿನ ಮೇಲೆ ಮಲಗಿಸಿಕೊಂಡು ಜೈಮಿನಿಭಾರತ ಓದುತ್ತಾ ಇದ್ದರು. ರಜೆಯ ಸಂದರ್ಭದಲ್ಲಿ ತಂದೆ ತಂದುಕೊಟ್ಟ ಪುಸ್ತಕಗಳನ್ನು ಓದುತ್ತಾ ಇದ್ದೆ ಎಂದರು.
ಡಾ. ಸುಧೀಂದ್ರ ಅವರು ನಿಮ್ಮ ಕಥೆ ಕಾದಂಬರಿಗಳಲ್ಲಿ ಅನೇಕ ವಸ್ತು ವೈವಿಧ್ಯತೆಗಳಿರುತ್ತವೆ. ಒಂದು ವಸ್ತು ಸಿಕ್ಕಾಗ, ಅದು ಕಥೆಯಾಗಬೇಕೊ, ಕಾದಂಬರಿಯಾಗಬೇಕೊ ಅಂತ ಹೇಗೆ ನಿರ್ಧರಿಸ್ತೀರಿ ಎಂದರು.
ಕೆ. ಎನ್. ಗಣೇಶಯ್ಯ ಅವರು ಕಾದಂಬರಿ ಅಥವಾ ಕಥೆ ಬರೆಯಬೇಕಾದ್ರೆ, ವಸ್ತುವಿನ ಸುತ್ತ ಬಹಳಷ್ಟು ವಿಷಯಗಳನ್ನು ಸಂಗ್ರಹಿಸಿರುತ್ತೇನೆ. ಆದರೆ, ಬರೆಯುವಾಗ ಅದೆಲ್ಲವನ್ನೂ ಹೇಳಲು ಸಾಧ್ಯವಿಲ್ಲ. ‘ಹಾತೆ ಜತೆ ಕಥೆ’ ಎಂಬ ಒಂದು ಸಣ್ಣ ಪ್ರಯತ್ನ ಮಾಡಿದೆ. ಈಗಿನ ಕಾಲದಲ್ಲಿ ಪೋಷಕರು ಮಕ್ಕಳ ಜೊತೆ ಕೂತು ಕಥೆ ಹೇಳುವ ಪರಿಪಾಟ ಇಲ್ಲದೇ ಆಗಿದೆ. ಅದಕ್ಕೋಸ್ಕರ ಈ ಪ್ರಯೋಗ. ಕೀಟಗಳಲ್ಲಿ ಬರುವ ಪರಾವಲಂಬಿಗಳು ಹೇಗೆ ಅದರ ವರ್ತನೆಯನ್ನೇ ಬದಲಾಯಿಸುತ್ತವೆ ಎಂಬುದನ್ನು ಗಮನಿಸಿ, ಒಂದು ಕಥೆ ಬರೆದೆ. ಆಮೇಲೆ ವಿಷಯ ವ್ಯಾಪ್ತಿ ದೊಡ್ಡದಿದೆ ಅಂತ ಕಾದಂಬರಿ ಮಾಡಿದೆ. ಹಾಗಾಗಿ ವಿಷಯ ವ್ಯಾಪ್ತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ ಎಂದರು.
ಮರಾಠ ಕಾದಂಬರಿ : ಡಾ. ಸಂದೀಪ್ ಮಹಿಂದ್ ಮತ್ತು ಆಜಯ್ ಅವರು ಮರಾಠ ಕಾದಂಬರಿ ಪೋರ್ಸ್ ಕುರಿತು ಸಂವಾದ ನಡೆಸಿದರು.
ಅಜಯ್ ಅವರು ಮಾತನಾಡಿ, ಶಿವಾಜಿ ಮಹಾರಾಜರ ಬಗ್ಗೆ ನಾವು ಭಾರತದ ವಿಚಾರದಲ್ಲಿ ವಾಸ್ತವ ಇತಿಹಾಸ ಏನಿತ್ತು ಎಂದು ಪ್ರಶ್ನಿಸಿದರು.
ಡಾ. ಸಂದೀಪ್ ಮಹಿಂದ್ ಅವರು ಮಾತನಾಡಿ, ಅಮೃತಮಹೋತ್ಸವದ ಸಂದರ್ಭದಲ್ಲಿ ನಮ್ಮ ನಿಜವಾದ ಇತಿಹಾಸವನ್ನು ಅರಿಯುವುದು ಬಹಳ ಮುಖ್ಯ. ಇತಿಹಾಸವನ್ನು ಅಧ್ಯಯನ ಮಾಡಲು ಒಂದು ಗ್ರಂಥವನ್ನು ಅವಲಂಬಿಸುವುದು ತಪ್ಪು ಎಂದರು.
ಬಸ್ರೂರು ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ಮಹಿಂದ್ ಅವರು, ಯಾರು ಇತಿಹಾಸವನ್ನು ಮರೆಯುತ್ತಾರೋ ಅವರು ಉನ್ನತಿ ಹೊಂದಲು ಸಾಧ್ಯವಿಲ್ಲ. ನಾವು ಎಂದಿಗೂ ನಮ್ಮ ಇತಿಹಾಸವನ್ನು ಮರೆಯಬಾರದು. ನಾವು ನಮ್ಮ ಇತಿಹಾಸವನ್ನು, ನಮ್ಮ ಮಹಾಪುರುಷರನ್ನು, ಪರಂಪರೆಯನ್ನು ನೆನಪಿಸಿ ಗೌರವಿಸದೇ ಇದ್ದರೆ ನಾವು ಮುಂದುವರಿಯಲು ಸಾಧ್ಯವಿಲ್ಲ. ನೈಜ ಇತಿಹಾಸವನ್ನು ಅಧ್ಯಯನ ಮಾಡಿ ಅರಿತುಕೊಂಡು ಸ್ಮರಿಸಿಕೊಳ್ಳಬೇಕು.
ಯಾವುದೇ ಮಹಾಪುರುಷರನ್ನು ಒಂದು ಪ್ರದೇಶಕ್ಕೆ ಅಥವಾ ಭಾಷೆಗೆ ಸೀಮಿತವಾಗಿಸಬಾರದು. ಎಲ್ಲಾ ಮಹಾಪುರುಷರೂ ಹಿಂದೂಸ್ತಾನದವರು ಎಂದು ಗರ್ವದಿಂದ ಹೇಳಿಕೊಳ್ಳಬೇಕು. ನಾವು ಭಾರತೀಯರು ಎಂಬ ಭಾವನೆ ಇರಬೇಕಾದದ್ದು ಮುಖ್ಯ. ತಾಯಿ ಭಾರತಿಯನ್ನು ವಿಶ್ವಗುರುವಿನ ಸ್ಥಾನದಲ್ಲಿ ನೋಡುವ ದಿನ ಖಂಡಿತ ಬಂದೇ ಬರುತ್ತದೆ ಎಂದರು.
ಅತ್ಯುನ್ನತ ತತ್ವ : ದುರ್ಬಲ ಸಮಾಜ- ವಿರೋಧಾಭಾಸದ ಒಳನೋಟ : ಲಕ್ಷ್ಮೀಶ ತೋಳ್ಪಾಡಿ ಮತ್ತು ಪ್ರೊ. ನಂದನ್ ಪ್ರಭು ಅವರು ಅತ್ಯುನ್ನತ ತತ್ವ: ದುರ್ಬಲ ಸಮಾಜ -ವಿರೋಧಾಭಾಸದ ಒಳನೋಟ ಕುರಿತು ಸಂವಾದ ನಡೆಸಿದರು.
ಲಕ್ಷ್ಮೀಶ ತೋಳ್ಪಾಡಿ ಅವರು ಮಾತನಾಡಿ, ವೇದೋಪನಿಷದ್ ಹುಟ್ಟಿದ್ದು ಮನಸ್ಸಿನಲ್ಲಿ, ಜನರ ಜಾಗೃತ ಅರಿವಿನಲ್ಲಿ. ದುರ್ಬಲ ಸಮಾಜದ ಒಡಲಿನ ಆಳದಿಂದ ಶ್ರದ್ಧೆ ಹುಟ್ಟಿತು. ಸಮಾಜ ದುರ್ಬಲವಾಗಿದ್ದಾಗ ತತ್ವತ ಔನ್ನತ್ಯ ಕೂಡ ಬರುತ್ತದೆ. ವಿರೋಧಾಭಾಸ ಎಂಬುದು ಎಲ್ಲಾ ಕಡೆಯೂ ಇರುತ್ತದೆ. ಆಲೋಚನೆಗಳು ವ್ಯವಸ್ಥಿವಾಗಿರಬೇಕು ಎಂದು ಬಯಸುತ್ತೇವೆ. ಆದರೆ ವ್ಯವಸ್ಥಿತ ಆಲೋಚನೆಗಳಂತೆ ಎಲ್ಲವೂ ಸಂಭವಿಸಲು ಸಾಧ್ಯವಿಲ್ಲ ಎಂದರು.
ಮಾಧ್ಯಮ ಭೂದೃಶ್ಯ ಬದಲಾವಣೆ: ಸ್ಮಿತಾ ಪ್ರಕಾಶ್ ಮತ್ತು ಹರ್ಷ ಭಟ್ ಅವರು ಮಾಧ್ಯಮ ಭೂದೃಶ್ಯ ಬದಲಾವಣೆ ಕುರಿತು ಮಾತನಾಡಿದರು.
ಸ್ಮಿತಾ ಪ್ರಕಾಶ್ ಅವರು ಮಾತನಾಡಿ, 2003 ಅಥವಾ 2014 ಇರಲಿ ಮಾಧ್ಯಮಗಳಲ್ಲಿ ಅಷ್ಟೇನು ಬದಲಾವಣೆಗಳು ಆಗಿಲ್ಲ. ಸುದ್ದಿ ನೀಡುವುದನ್ನು ಅವುಗಳು ಮುಂದುವರೆಸಿವೆ. ಸಿದ್ಧಾಂತ ಆಧಾರಿತ ಮಾಧ್ಯಮಗಳು ಈಗ ಮುನ್ನಲೆಗೆ ಬರುತ್ತಿವೆ. ಖಾಸಗಿ, ಪ್ರಾದೇಶಿಕ ಮಾಧ್ಯಮಗಳ ಸಂಖ್ಯೆ ಏರುತ್ತಿದೆ. ಸಾಮಾಜಿಕ ಮಾಧ್ಯಮಗಳು ಹೆಚ್ಚು ಪ್ರಭಾವಶಾಲಿಯಾಗುತ್ತಿದ್ದು, ಸಮಾಜದಲ್ಲಿ ಬದಲಾವಣೆ ತರಲು ಬಯಸುತ್ತಿರುವವರು ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳ ವರದಿಗೆ ಜನರ ಪ್ರತಿಕ್ರಿಯೆಯಲ್ಲಿ ಬದಲಾವಣೆಗಳು ಕಾಣುತ್ತಿವೆ. ಸುಡೋ ಮೀಡಿಯಾ, ಸೋನಿಯಾ ಮೀಡಿಯಾ, ಗೋಧಿ ಮೀಡಿಯಾ, ಭಕ್ತ್ ಮೀಡಿಯಾ ಹೀಗೆಲ್ಲಾ ಹೆಸರು ಬಳಸಿ ಮಾಧ್ಯಮಗಳನ್ನು ಟ್ರೋಲ್ ಮಾಡಲಾಗುತ್ತಿದೆ. ಆದರೆ ಇಂತಹ ಟ್ರೋಲ್ ಗಳಿಂದ ಯಾವುದೇ ಬದಲಾವಣೆ ಬರಲು ಸಾಧ್ಯವಿಲ್ಲ. ಮಾಧ್ಯಮಗಳು ಇವುಗಳ ಬಗ್ಗೆ ತಲೆಕಡೆಸಿಕೊಳ್ಳುವುದಿಲ್ಲ ಎಂದರು.
ರಾಷ್ಟ್ರಕವಿ ಗೋವಿಂದ ಪೈ - ಒಂದು ಸ್ಮರಣೆ: ರಾಷ್ಟ್ರಕವಿ ಗೋವಿಂದ ಪೈ - ಒಂದು ಸ್ಮರಣೆ ಸಂವಾದದಲ್ಲಿ ಡಾ. ವರದರಾಜ ಚಂದ್ರಗಿರಿ ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್ ಅವರು ಮಾತನಾಡಿದರು.
ಡಾ. ವರದರಾಜ ಚಂದ್ರಗಿರಿ ಅವರು ಮಾತನಾಡುತ್ತಾ ರಾಷ್ಟ್ರಕವಿ ಗೋವಿಂದ ಪೈ ಅವರು ಬಹುಭಾಷಾ ಪಂಡಿತರಾಗಿದ್ದರು. ಕನ್ನಡ ಪದ್ಯ, ಗದ್ಯ ಸಹಿತ ಸಂಶೋಧನೆಯಲ್ಲಿ ಸಾಧನೆ ಮಾಡಿದ ವ್ಯಕ್ತಿತ್ವ ಗೋವಿಂದ ಪೈ ಅವರದ್ದು ಎಂದರು. ಆ ಕಾಲದ ಆಧುನೀಕರಣಕ್ಕೆ ತೆರೆದುಕೊಂಡ ಪ್ರದೇಶದ ದಕ್ಷಿಣ ಕನ್ನಡ ಜಿಲ್ಲೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿರದೆ, ಪ್ರಾಧ್ಯಾಪಕರಾಗಿರದೆ ಕನ್ನಡ ಪಂಡಿತರಾಗಿದ್ದವರು ಗೋವಿಂದ ಪೈ. ಮೌಲ್ಯವೇ ಸಾಹಿತ್ಯದ ಪರಿಭಾಷೆ. ಗೋವಿಂದ ಪೈ ಅವರ ಸಾಹಿತ್ಯದಲ್ಲಿ ಸ್ಥಳೀಯತೆ ಮತ್ತು ದೇಶಭಕ್ತಿಯ ಹರಿವಿತ್ತು. ಅವರ ಕೃತಿಯಲ್ಲೂ ತೌಳವ ಮಾತೆಯ ಉಲ್ಲೇಖವಿದೆ. ಕನ್ನಡ ಮಾತೆಯ ಹರಿವೂ ಅವರ ಕೃತಿಗಳಲ್ಲಿತ್ತು.
ಡಾ. ಪಾದೆಕಲ್ಲು ವಿಷ್ಣು ಭಟ್ ಅವರು ಮಾತನಾಡಿ, ಗೋವಿಂದ ಪೈ ಅವರಿದ್ದ ಕಾಲ ಭಾರತ ಅಖಂಡವಾಗಿದ್ದ ಕಾಲ, ಸ್ವಾತಂತ್ರ್ಯಪೂರ್ವದ ಕಾಲ, ಪುಸ್ತಕಗಳು ಮುದ್ರಿಸಲ್ಪಡುತ್ತಿದ್ದ ಕಾಲವಾಗಿತ್ತು.
ನಮ್ಮ ನರೆಯ ಭಾಷೆಗಳು ಮಾತ್ರವಲ್ಲದೆ ಗ್ರೀಕ್, ಲ್ಯಾಟಿನ್ ಮತ್ತು ಜಪಾನಿ ಭಾಷೆಯನ್ನು ಅಭ್ಯಸಿಸಿದ್ದರು. ಗೋವಿಂದ ಪೈ ಗುಜರಾತಿನ ನವಸಾರಿಯಲ್ಲಿದ್ದಾಗ ಅಲ್ಲಿನ ಕಚೇರಿಯಲ್ಲಿದ್ದಾಗ ಕನ್ನಡದಲ್ಲಿ ಪ್ರಾಸರಹಿತ ಪದ್ಯಗಳನ್ನು ಬರೆಯಬೇಕು ಎಂಬ ಹಂಬಲವನ್ನು ಹೊಂದಿದರು. ಆದಾದ ಮೇಲೆ ಪ್ರಥಮವಾಗಿ ಬರೆದ ಕೃತಿಯೇ ಹೊಲೆಯರು ಯಾರು ಎಂಬ ಪದ್ಯ. ಬುದ್ಧ, ಮಹಾವೀರರ ಕಾಲಮಾನ ಯಾವುದು, ಮಧ್ವಾಚಾರ್ಯರ ಕಾಲ ಯಾವುದು ಎಂಬುದರ ಬಗ್ಗೆ ಪ್ರಥಮವಾಗಿ ಅಧ್ಯಯನ ನಡೆಸಿ ಸಂಶೋಧನಾ ಲೇಖನಗಳನ್ನು ಬರೆದವರು ಗೋವಿಂದ ಪೈ. ಪೈಗಳ ಕಾವ್ಯ ಮಾರ್ಗದಲ್ಲೂ, ಸಂಶೋಧನೆಯ ಮಾರ್ಗದಲ್ಲೂ ಅಗ್ರಮಾನ್ಯರಾಗಿದ್ದಾರೆ, ಇಂದಿಗೂ ಗೋವಿಂದ ಪೈಗಳನ್ನು ಪೂಜ್ಯಭಾವದಿಂದ ಕಂಡು ಮುನ್ನಡೆಯಬೇಕಿದೆ. ಅಖಿಲ ಭಾರತೀಯ ದೃಷ್ಠಿಕೋನ ಹೊಂದಿದ್ದ ಇವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು.
ರಂಗಭೂಮಿ, ಪ್ರಯೋಗ ಮತ್ತು ಪ್ರಭಾವ : ರಂಗಭೂಮಿ, ಪ್ರಯೋಗ ಮತ್ತು ಪ್ರಭಾವ ಕುರಿತು ಅಡ್ಡಂಡ ಕಾರ್ಯಪ್ಪ, ಬಸುಮ ಕೊಡಗು ಮತ್ತು ಪ್ರಕಾಶ್ ಮಲ್ಪೆ ಅವರು ಸಂವಾದ ನಡೆಸಿದರು.
ಪ್ರಕಾಶ್ ಮಲ್ಪೆ ಅವರು ಮಾತನಾಡಿ, ಕನ್ನಡ ರಂಗಭೂಮಿ ಎಷ್ಟು ಪ್ರಾಚೀನವಾದದ್ದು ಎಂಬುದಕ್ಕೆ ದಾಖಲೆಗಳೇ ಸಿಗುವುದಿಲ್ಲ. ಅಷ್ಟು ಪುರಾತನವಾದದ್ದು. ಇಂಥ ಅಪೂರ್ವ ಕ್ಷೇತ್ರದ ಬಗ್ಗೆ ನಾವಿವತ್ತು ಸಂವಾದ ಮಾಡಲಿದ್ದೇವೆ. ಸಾಹಿತ್ಯ ಅಥವಾ ನಾಟಕ ಕೃತಿ ಮತ್ತು ರಂಗಭೂಮಿ ಇವೆರಡೂ ಪೂರಕವೇ? ಎಂದರು.
ಬಸುಮ ಕೊಡಗು ಅವರು ಮಾತನಾಡಿ, ಸಾಹಿತ್ಯ ಕೃತಿ ಮತ್ತು ರಂಗಕೃತಿ ಬೇರೆಬೇರೆಯೇ. ರಂಗಕೃತಿ ಉದ್ದೇಶಪೂರ್ವಕವಾಗಿ ರಂಗಕ್ಕಾಗಿಯೇ ಬರೆದಿದ್ದು. ಆದ್ರೆ, ಸಾಮಾನ್ಯವಾಗಿ ಸಾಹಿತ್ಯ ಇಲ್ಲದೆ ರಂಗಕೃತಿಯಿಲ್ಲ ಎಂದರು.
ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿ, ಕಾದಂಬರಿಯನ್ನು ರಂಗಕ್ಕೆ ತಂದ್ರೆ, ಅದು ರಂಗಕೃತಿಯಾಗುತ್ತದೆ. ಉದಾಹರಣೆಗೆ ಪರ್ವ ಕಾದಂಬರಿಯನ್ನು ರಂಗಕೃತಿ ಮಾಡಿದಾಗ ಅದು ಅಷ್ಟೇ ಪರಿಣಾಮಕಾರಿಯಾಯ್ತು. ಹಾಗಾಗಿ ಪೂರ್ಣಪ್ರಮಾಣದಲ್ಲಿ ಸಾಹಿತ್ಯ ಕೃತಿ ಮತ್ತು ರಂಗಕೃತಿ ಬೇರೆ ಬೇರೆಯೇ ಅಂತ ಹೇಳಲಾಗದು ಎಂದರು.
ಥಿಯೇಟರ್ ಎಂಬುದೂ ಒಂದು ಥೆರಪಿ. ಈಗ ತಲೆಹಣ್ಣಾದವರು ಮಾತ್ರ ಅಲ್ಲ ಅರುವತ್ತು ಶೇಕಡ ಯುವಕರು ಬರ್ತಿದ್ದಾರೆ ಎಂದು ಬಸುವ ಕೊಡಗು ಹೇಳಿದರು.
ಒಬ್ಬ ರಂಗಕರ್ಮಿ ಯೋಗ್ಯ ಎನಿಸಿಕೊಳ್ಳಲು ಆತ ಎಲ್ಲಾ ‘ಇಸಮ್’ಗಳಿಂದ ದೂರ ಇರಬೇಕು. ರಂಗಭೂಮಿ ಎಂಬುದು ಅನುಭವಿಸಿ ಪ್ರದರ್ಶಿಸುವ ಕಲೆ. ಯೋಚನೆಗಳು ಮಾಡುವುದು ಅನುಭವಗಳ ಹಿನ್ನೆಲೆಯಲ್ಲಿ. ಸಿದ್ಧಾಂತಗಳು ಅಡ್ಡ ಬರಬಾರದು ಎಂದರು.
ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿ, ಗಿರೀಶ್ ಕಾರ್ನಾಡ್ ತುಘಲಕ್ ನಾಟಕ. ಇತಿಹಾಸಕ್ಕೆ ನಿಷ್ಟನಾಗಿ ಬರೀಬೇಕು. ಕೃತಿಯೇ ಬೇರೆ ಎಂದರು.
ಪುರಾಣ ಕಥೆ ಹೊಸ ರೂಪ ಹೊಸ ದೃಷ್ಟಿ : ಡಾ. ಗಜಾನನ ಶರ್ಮ, ವಿದ್ವಾನ್ ಜಗದೀಶ ಶರ್ಮ ಸಂಪ ಮತ್ತು ಡಾ. ವಿಜಯ ಸರಸ್ವತಿ ಬಿ. ಇವರು ಪುರಾಣ ಕಥೆ ಹೊಸ ರೂಪ ಹೊಸ ದೃಷ್ಟಿ ಕುರಿತು ಗೋಷ್ಠಿ ನಡೆಸಿದರು.
ವಿಜಯ ಸರಸ್ವತಿ ಅವರು ಮಾತನಾಡಿ, ಇದು ಮುಖ್ಯವಾಗಿ ಕಾದಂಬರಿ ಆಧಾರಿತ ಸಂವಾದ. ಲೇಖಕರ ಒಂದೊಂದು ಕಾದಂಬರಿಗಳನ್ನು ಪರಿಗಣಿಸಿದ್ದೇವೆ. ಮೊದಲನೆಯದಾಗಿ, ಗಜಾನನ ಶರ್ಮ ಅವರ ಚೆನ್ನಭೈರಾದೇವಿ ಕಾದಂಬರಿ. ತಮ್ಮ ಕಾದಂಬರಿಯಲ್ಲಿ ಅನೇಕ ಸವಾಲುಗಳು, ಸಾಧ್ಯತೆಗಳನ್ನು ತೆರೆದಿಟ್ಟಿದ್ದೀರಿ. ಯಾಕೆ ಈ ಕಥೆಯನ್ನು ಬರೆಯುವ ಯೋಚನೆ ಬಂತು ಎಂದು ಡಾ. ಗಜಾನನ ಶರ್ಮ ಅವರನ್ನು ಕೇಳಿದರು.
ಡಾ. ಗಜಾನನ ಶರ್ಮ ಅವರು ಮಾತನಾಡಿ, ಚೆನ್ನಭೈರಾದೇವಿ ಸುದೀರ್ಘವಾಗಿ ರಾಜ್ಯವನ್ನಾಳಿದವಳು. ಅಂಥ ರಾಣಿಯ ಚರಿತ್ರೆ ಯಾಕೆ ಇತಿಹಾಸದಲ್ಲಿ ದಾಖಲಾಗಿಲ್ಲ ಎಂಬುದು ಆಶ್ಚರ್ಯ. ಇವತ್ತಿಗೂ ರಸ್ತೆಯಿರದ ಊರಿನಲ್ಲಿ ಆ ಕಾಲದಲ್ಲಿ ಹೆದ್ದಾರಿಯಿತ್ತು. ಸಾವಿರಾರು ಬಾವಿಗಳು, ಭಗ್ನಾವಶೇಷಗಳು ಇವೆ. ಆದ್ರೆ ಆಕೆಯ ಚರಿತ್ರೆ ದಾಖಲಾಗಿಲ್ಲ. ಆಕೆಯ ವಿರೋಧಿಗಳು ಮಾತ್ರ ಆಕೆಯ ಕುರಿತಾಗಿ ಕಳಂಕಿತ ಮಾತುಗಳನ್ನಾಡಿದ್ದು ಹೊರತು ಬೇರೆ ಯಾರೂ ಆ ರೀತಿ ಬರೆದಿಲ್ಲ. ಹಾಗಾಗಿ ನನ್ನ ಮಿತಿಗೆ ಒಳಪಟ್ಟು ಸಂಶೋಧನೆ ಮಾಡಿ ಕಾದಂಬರಿ ಬರೆದೆ ಎಂದರು.
ಸಂಶೋಧನಾ ಹಿನ್ನೆಲೆಯಲ್ಲಿ ಇಂದಿನ ಕಾಲಘಟ್ಟದಲ್ಲಿ ಪುರಾಣಗಳನ್ನು ಯಾವ ನೆಲೆಯಲ್ಲಿ ಕಟ್ಕೊಳ್ಭುದು? ಎಂಬ ಪ್ರಶ್ನೆಗೆ ಜಗದೀಶ್ ಶರ್ಮ ಅವರು, ವಿದುರನೂ ಸೂತ. ಪುರಾಣ ಎಂಬುದು ಕಲ್ಪಿತ ಅಲ್ಲ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಮೊದ್ಲು ಹರಪ್ಪ ಮೊಹೆಂಜಾದಾರೋ ಮಾತ್ರ ಅಗೆದರು. ಈಗ ಎಲ್ಲಾ ಕಡೇ ನೋಡ್ತಿದ್ದಾರೆ. ಸಂಶೋಧನೆಗಳು ನಡೆದರೆ, ಪಠ್ಯಪುಸ್ತಕಗಳಲ್ಲಿ ನಮ್ಮ ಪುರಾಣವನ್ನು ಕಾಣುವ ಸಮಯ ಬಂದೀತು ಎಂದರು.
ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ : ಎರಡನೇ ಗೋಷ್ಠಿಯು ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಕುರಿತಾಗಿ ನಡೆಯಿತು. ಇದನ್ನು ಅರವಿಂದ ಚೊಕ್ಕಾಡಿ ಮತ್ತು ಶೈಲೇಶ್ ಕುಲಕರ್ಣಿ ಅವರು ನಡೆಸಿಕೊಟ್ಟರು.
ಅರವಿಂದ್ ಚೊಕ್ಕಾಡಿ ಅವರು ಮಾತನಾಡಿ, ರಾಷ್ಟ್ರೀಯತೆಯ ವಿಷಯ ಬಂದರೆ ರಾಜಕೀಯ ಬಂದೇ ಬರುತ್ತದೆ. ರಾಜಕೀಯ ಬಾರದ ಸಂಗತಿ ಜಗತ್ತಿನಲ್ಲಿ ಇಲ್ಲ. ಆದರೆ ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯ. ಭಾಷೆ ಎಂಬುದು ಪ್ರಧಾನವಾದ ಒಂದುಗೂಡಿಸುವ ಶಕ್ತಿ. ಭಾಷೆಯ ಮೇಲೆ ದೇಶ ವಿಂಗಡನೆಯನ್ನು ಸಂವಿಧಾನ ಹೇಳಿಲ್ಲ. ಆಡಳಿತಾತ್ಮಕವಾಗಿ ರಾಜ್ಯಗಳನ್ನು ವಿಂಗಡಿಸುವ ಅಧಿಕಾರವನ್ನು ಅದು ಸಂಸತ್ತಿಗೆ ನೀಡಿತು. ಆದರೆ ಭಾಷವಾರು ಒತ್ತಡ, ಚಳುವಳಿಗಳಿಂದ ಭಾಷಾವಾರು ಪ್ರಾಂತ್ಯ ಸೃಷ್ಟಿಯಾಯಿತು ಎಂದು ಹೇಳಿದರು.