ಇಬ್ಬರು ಚಿರಸ್ಮರಣೀಯರು
ಇತ್ತೀಚೆಗೆ ಬೆಂಗಳೂರಿನ ನರಸಿಂಹರಾಜ ಕಾಲನಿಯಲ್ಲಿರುವ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಒಂದು ವಿಶೇಷ ಉಪನ್ಯಾಸ ನಡೆಯಿತು. ಉಪನ್ಯಾಸ ನೀಡಿದವರು: ಸುನೀಲ್ ಗೋಖಲೆ.ವಿಷಯ: ‘ಇಂದಿನ ಭಾರತದಲ್ಲಿ ಗೋಖಲೆಯವರ ಪ್ರಸ್ತುತತೆ.’ ಈ ಉಪನ್ಯಾಸ ಕರ್ನಾಟಕದ ಪತ್ರಿಕೆಗಳಲ್ಲಿ ವರದಿಯಾದಂತಿಲ್ಲ. ಬಹುಶ: ಇಂದಿನ ಪತ್ರಕರ್ತರಿಗೆ ಇದು ಗಮನಾರ್ಹ ಅನ್ನಿಸಿರಲಿಕ್ಕಿಲ್ಲ.
ಯಾರು ಈ ಗೋಪಾಲಕೃಷ್ಣ ಗೋಖಲೆ? ಹಿರಿಯರಾದ ಎಚ್.ಎಸ್.ದೊರೆಸ್ವಾಮಿಯವರು ಮತ್ತು ನನ್ನ ತಲೆಮಾರಿನ ಕೆಲವರ ನೆನಪಿನ ಕೋಶದಲ್ಲಿ ಅಡಗಿರಬಹುದಾದ ಈ ಹೆಸರು ಇಂದಿನವರಿಗೆ ತಿಳಿಯದಿದ್ದರೆ ಅದರಲ್ಲಿ ಅಚ್ಚರಿ ಏನಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯ ಚಳವಳಿಗಳ ಆದ್ಯಪ್ರವರ್ತಕರಲ್ಲಿ ಒಬ್ಬರಾದ ಗೋಪಾಲಕೃಷ್ಣ ಗೋಖಲೆಯವರ ಜನನವಾದದ್ದು 1866ರ ಮೇ 9ರಂದು ಬಾಂಬೆ ಪ್ರಾಂತದ ರತ್ನಗಿರಿ ಜಿಲ್ಲೆಯ ಕಟ್ಲುಕ್ ಎಂಬ ಹಳ್ಳಿಯಲ್ಲಿ. ತಂದೆ ಕೃಷ್ಣ ರಾವ್ ಸರಕಾರದ ಸಣ್ಣ ಉದ್ಯೋಗದಲ್ಲಿದ್ದರು. ಕಾಲೇಜು ಶಿಕ್ಷಣ ಪಡೆದ ಮೊದಲ ಪೀಳಿಗೆಯ ಭಾರತೀಯರಾದ ಗೋಖಲೆಯವರು ಪ್ರಪ್ರಥಮವಾಗಿ ಸಾರ್ವಜನಿಕ ಜೀವನದಲ್ಲಿ ಹೆಜ್ಜೆ ಇರಿಸಿದ್ದು 1886ರಲ್ಲ್ಲಿ, ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಉಪನ್ಯಾಸದ ಮೂಲಕ. ಅದೊಂದು ಅತ್ಯಂತ ಪ್ರಭಾವಶಾಲಿ ಭಾಷಣವಾಗಿದ್ದು ಸಾರ್ವಜನಿಕರ ಮುಕ್ತ ಪ್ರಶಂಸೆಗೆ ಪಾತ್ರವಾಗಿತ್ತು. ಉಗ್ರ ಸ್ವಾತಂತ್ರ್ಯವಾದಿ ಬಾಲಗಂಗಾಧರ ತಿಲಕರ ‘ಮರಾಠ’ ಪತ್ರಿಕೆಗೆ ನಿಯತವಾಗಿ ಲೇಖನಗಳನ್ನು ಬರೆಯುತ್ತಿದ್ದ ಅವರು 1895ರಲ್ಲಿ ಪುಣೆಯಲ್ಲಿ ಭಾರತ ರಾಷ್ಟೀಯ ಕಾಂಗ್ರೆಸ್‌ನ ರಾಷ್ಟ್ರೀಯ ಅಧಿವೇಶನ ನಡೆದಾಗ ಅದರ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಪುಣೆ ಪುರಸಭೆೆಗೆ ಎರಡು ಬಾರಿ ಚುನಾಯಿತರಾಗಿದ್ದ ಗೋಖಲೆಯವರು ಆಗಿನ ಬಾಂಬೆ ಶಾಸನ ಸಭೆಯ ಸದಸ್ಯರೂ ಆಗಿದ್ದರು. ಸಾರ್ವಜನಿಕ ಜೀವನದಂತೆ ಬ್ರಿಟಿಷ್ ಆಡಳಿತಗಾರರ ವಲಯದಲ್ಲೂ ಪ್ರಭಾವಶಾಲಿಯಾಗಿದ್ದ ಗೋಖಲೆಯವರದು ತಿಲಕರಿಗೆ ವಿರುದ್ಧವಾದ ಸೌಮ್ಯ ಪ್ರವೃತ್ತಿ. ಬ್ರಿಟಿಷರ ದಬ್ಬಾಳಿಕೆ ಮತ್ತು ಭಾರತೀಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಮ್ಮ ಕಳವಳವನ್ನು ಸಿಂಹಾಸನಾಧೀಶರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಅವರು ಎರಡು ಸಲ ಇಂಗ್ಲೆಂಡಿಗೆ ಭೇಟಿಕೊಟ್ಟಿದ್ದರು. ನಲವತ್ತೊಂಬತ್ತು ದಿನಗಳ ಈ ಭೇಟಿ ಕಾಲದಲ್ಲಿ ನಲವತ್ತೇಳಕ್ಕೂ ಹೆಚ್ಚು ಸಭೆಗಳನ್ನುದ್ದೇಶಿಸಿ ಮಾತನಾಡಿ ಬ್ರಿಟಿಷರು ನಡೆಸುತ್ತಿರುವ ಅನ್ಯಾಯಗಳನ್ನು ವಿವರಿಸಿದ್ದರು. ಆಡಳಿತದಲ್ಲಿ ಸುಧಾರಣೆಗಳನ್ನು ಜಾರಿಗೆ ತಂದು ಆಖೈರಾಗಿ ಆ ಸುಧಾರಣೆಗಳು ಸ್ವರಾಜ್ಯವಾಗಿ ಪರಿವರ್ತನೆ ಹೊಂದಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. 1909ರಲ್ಲಿ ಜಾರಿಗೆ ಬಂದ ಮಿಂಟೊಮಾರ್ಲೋ ಸುಧಾರಣೆಗಳಿಗೆ ಕಾರಣಪುರುಷರಾದ ಗೋಖಲೆಯವರು ಮಹಾತ್ಮ ಗಾಂಧಿಯವರ ರಾಜಕೀಯ ಗುರುಗಳೆಂದೇ ಪ್ರಸಿದ್ಧರು.
1910ರ ವೇಳೆಗೇ ಗೋಖಲೆಯವರು ಗಾಂಧಿಯವರೊಳಗಿದ್ದ ನಾಯಕತ್ವಗುಣವನ್ನು ಗುರುತಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ಮತ್ತು ಏಷ್ಯಾ ಕರಾರು ಕೂಲಿಗಳ ಶೋಷಣೆ ವಿರುದ್ಧ ಬಂಡೆದ್ದು ಸಮಾನತೆ-ಸ್ವಾತಂತ್ರ್ಯಗಳಿಗಾಗಿ ಅಲ್ಲಿ ಗಾಂಧಿ ನಡೆಸಿದ್ದ ಹೋರಾಟವನ್ನು ಗಮನಿಸಿದ್ದರು. ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಲು ಮೋಹನದಾಸ್ ಕರಮ್‌ಚಂದ್ ಗಾಂಧಿ ಯೋಗ್ಯರೆಂದು ಅವರು ಭಾವಿಸಿದ್ದರು. 1910ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷತೆಗೆ ಗಾಂಧಿಯವರನ್ನು ಆಯ್ಕೆಮಾಡಬೇಕೆಂಬುದು ಅವರ ಇರಾದೆಯಾಗಿತ್ತು. ಭಾರತಕ್ಕೆ ಮರಳಿ ಸ್ವಾತಂತ್ರ್ಯ ಚಳವಳಿಯ ನಾಯಕತ್ವ ವಹಿಸಿಕೊಳ್ಳುವಂತೆ ಆಗ್ರಹಪೂರ್ವಕವಾಗಿ ತಿಳಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಹೋರಾಟ ಯಶಸ್ಸು ಕಾಣುವವರೆಗೆ ಅದು ಸಾಧ್ಯವಿಲ್ಲವೆಂದ ಗಾಂಧಿಯವರು, ದಕ್ಷಿಣ ಆಫ್ರಿಕಾಗೆ ಭೇಟಿಕೊಟ್ಟು ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಒಪ್ಪಿದ ಗೋಖಲೆಯವರು ಅಲ್ಲಿಗೆ ಭೇಟಿಕೊಟ್ಟು, ಭಾರತೀಯರ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅವುಗಳ ಪರಿಹಾರಕ್ಕೆ ಬ್ರಿಟಿಷ್ ಅಧಿಕಾರಿಗಳ ಮನಒಲಿಸುವುದರಲ್ಲಿ ಸಾಕಷ್ಟು ಯಶಸ್ವಿಯಾದರು. ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರನ್ನು ಗುಲಾಮಗಿರಿಯಿಂದ ಪಾರುಮಾಡಿದ ನಂತರ ಗಾಂಧಿ 1915ರಲ್ಲಿ ಭಾರತಕ್ಕೆ ಹಿಂದಿರುಗಿದರು. ಅದೇ ವರ್ಷ ಗೋಖಲೆಯವರು ಅನಾರೋಗ್ಯದಿಂದ ನಿಧನಹೊಂದಿದರು. ಗೋಖಲೆಯವರಿಗೆ ಇತಿಹಾಸದಲ್ಲಿ ಶಾಶ್ವತ ಸ್ಥಾನ ಕಲ್ಪಿಸಿದ ಅವರ ಇನ್ನೊಂದು ಸಾಧನೆ, ಸರ್ವೆಂಟ್ಸ್ ಆಫ್ ಇಂಡಿಯಾ ಸೇವಾ ಸಂಸ್ಥೆ ಸ್ಥಾಪನೆ. ಮಾನವನ ಮೂಲಭೂತ ಹಕ್ಕಾದ ಸ್ವಾತಂತ್ರ್ಯದ ಬಗ್ಗೆ ತಿಳಿವಳಿಕೆ ಮತ್ತು ಸಾರ್ವಜನಿಕ ಜೀವನದ ಮಹತ್ವ, ಸಾರ್ವಜನಿಕ ಜೀವನದಲ್ಲಿ ಶೀಲ ಮತ್ತು ಸ್ವಚ್ಛತೆಗಳ ಪಾತ್ರ ಈ ವಿಷಯಗಳಲ್ಲಿ ಜನತೆಗೆ ಬೋಧಿಸುವುದು, ಜನಜಾಗೃತಿಯುಂಟುಮಾಡುವುದು ಗೋಖಲೆಯವರ ಮುಖ್ಯ ಕಾಳಜಿಯಾಗಿತ್ತು. ಸರ್ವೆಂಟ್ಸ್ ಆಫ್ ಇಂಡಿಯಾ ಅಂಗರಚನೆಯಲ್ಲಿ ಇದು ಸ್ಪಷ್ಟವಾಗಿದೆ. ಈ ಮಹಾನ್ ಧ್ಯೇಯೋದ್ದೇಶಗಳಿಂದ ಅವರು 1905ರಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯನ್ನು ಹುಟ್ಟುಹಾಕಿದರು. ಸಾರ್ವಜನಿಕರನ್ನು ಪ್ರಜ್ಞಾವಂತರನ್ನಾಗಿ ಮಾಡುವ ಕಾಯಕದಲ್ಲಿ, ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿ, ಪಂಡಿತ ಮದನಮೋಹನ ಮಾಳವೀಯ, ಡಾ.ಎಚ್.ಎನ್.ಖಜ್ರು ಮೊದಲಾದ ಸಾರ್ವಜನಿಕ ಸೇವಾತತ್ಪರರ ಪಡೆಯನ್ನೇ ಸಜ್ಜುಗೊಳಿಸಿದರು. ಭಾರತದ ಸ್ವಾತಂತ್ರ್ಯಕ್ಕೂ ಪ್ರಗತಿಗೂ ಇಂಥ ತತ್ವಾದರ್ಶ ಗಳ ಆಧಾರದ ಮೇಲೆ ಹೋರಾಟ ನಡೆಸುತ್ತಿದ್ದ ಗೋಪಾಲಕೃಷ್ಣ ಗೋಖಲೆಯವರು ಕನ್ನಡದ ಕವಿ, ಪತ್ರಕರ್ತ ಡಿ.ವಿ.ಗುಂಡಪ್ಪನವರಿಗೆ ಸರ್ವೋತ್ಕೃಷ್ಟ ಮಾರ್ಗದರ್ಶಕರಾಗಿ ಕಂಡುಬಂದಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಗೋಖಲೆಯವರಿಂದ ಪ್ರಭಾವಿತರಾದ ಕವಿ, ದಾರ್ಶನಿಕ ಡಿ.ವಿ.ಜಿ.ಯವರು ಸರ್ವೆಂಟ್ಸ್ ಆಫ್ ಇಂಡಿಯಾ ಮಾದರಿಯಲ್ಲೇ 1915ನೆ ಇಸವಿಯಲ್ಲಿ ‘‘ಮೈಸೂರು ಸೋಶಿಯಲ್ ಲೀಗ್’’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅದು ಗೋಖಲೆಯವರು ವಿಧಿವಶರಾದ ವರ್ಷ. ಆಗ ದಕ್ಷಿಣ ಭಾರತದಲ್ಲಿ ಪ್ರವಾಸಮಾಡುತ್ತಿದ್ದ ಮಹಾತ್ಮ ಗಾಂಧಿಯವರು ಸರ್.ಎಂ.ವಿಶ್ವೇಶ್ವರಯ್ಯ ಮೊದಲಾದವರ ಮನವಿಗೆ ಓಗೊಟ್ಟು ಬೆಂಗಳೂರಿಗೆ ಬಂದು 8-5-1915ರಂದು ಸಂಸ್ಥೆಯ ಆವರಣದಲ್ಲಿ ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರವನ್ನು ಅನಾವರಣಮಾಡಿದರು. ಆಗ ಮಹಾತ್ಮರು ಆಡಿದ ಈ ಕೆಳಗಿನ ಮಾತುಗಳು ಇಂದಿಗೂ ಮನನೀಯವಾದುದು ಎಂದರೆ ಉತ್ಪ್ರೇಕ್ಷೆಯಾಗದು:
‘‘ತಾನು ದೇಶಪ್ರೇಮಿಯೆಂದು ಭಾವಿಸಿರುವ ಪ್ರತಿಯೊಬ್ಬ ಭಾರತೀಯನೂ ರಾಜಕೀಯ ಕ್ಷೇತ್ರದಲ್ಲಿ ದುಡಿಯುವ ಕನಸು ಕಾಣಬೇಕು ಎಂದು ಗೋಖಲೆಯವರು ನನಗೆ ಹೇಳಿಕೊಟ್ಟರು. ದೇಶದ ರಾಜಕೀಯ ಜೀವನವನ್ನು ದಾರ್ಶನಿಕವನ್ನಾಗಿ ಮಾಡಿ ದೇಶದ ಎಲ್ಲಾ ರಾಜಕೀಯ ಸಂಸ್ಥೆಗಳನ್ನು ಆಧ್ಯಾತ್ಮಿಕ ಆಧಾರದ ಮೇಲೆ ಕಾರ್ಯಮುಖವಾಗಿರುವಂತೆ ಮಾಡಬೇಕು. ನನ್ನ ಜೀವನಕ್ಕೆ ಅವರು ಸ್ಫೂರ್ತಿದಾತರು. ಈಗಲೂ ನನಗೆ ಸ್ಫೂರ್ತಿಯನ್ನು ನೀಡುತ್ತಿದ್ದಾರೆ.’’
(ಡಿ.ವಿ.ಗುಂಡಪ್ಪ, ಲೇ:ಜಿ.ವೆಂಕಟಸುಬ್ಬಯ್ಯ ಪು-111). ಮೈಸೂರು ಸೋಷಿಯಲ್ ಸರ್ವಿಸ್ ಲೀಗ್ 1945ರಲ್ಲಿ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೆೇರ್ಸ್ ಆಗಿ ಪರಿವರ್ತನೆ ಹೊಂದಿತು. ಹೀಗೆ ವಿಧ್ಯುಕ್ತವಾಗಿ ಒಂದು ಸೇವಾ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದ ಗೋಖಲೆ ಸಾರ್ವಜನಿಕ ಸಂಸ್ಥೆಯ ಮುಖ್ಯ ಗುರಿ: ಪ್ರಜೆಯಾದವನು ತನ್ನ ಹಕ್ಕನ್ನು ಚಲಾಯಿಸುವ ಮೊದಲು ‘ಕರ್ತವ್ಯ’ ಏನೆಂಬ ಅರಿವನ್ನು ಜನತೆಯಲ್ಲಿ ಮೂಡಿಸುವುದೇ ಅಗಿತ್ತು. ರಾಷ್ಟ್ರೀಯ ಭಾವನೆ, ಅಂತಾರಾಷ್ಟ್ರೀಯ ದೃಷ್ಟಿ, ಕರ್ನಾಟಕ ಮತ್ತು ಒಟ್ಟು ಭಾರತದ ಪ್ರಗತಿ ಇವುಗಳನ್ನು ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ಅಧ್ಯಯನಮಾಡುವುದನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವೆಂದು ಅಂಗರಚನೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಜೊತೆಗೆ ದೇಶದ ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಗಳ ಅತ್ಯುತ್ತಮ ಪ್ರಯೋಜನವನ್ನು ಪಡೆಯುವ ದೃಷ್ಟಿಯಿಂದ ಪ್ರಜಾತತ್ವಕ್ಕೆ ತಕ್ಕ ರೀತಿಯಲ್ಲಿ ಸಾರ್ವಜನಿಕರು ಸ್ವತಂತ್ರವಾದ, ತಿಳಿವಳಿಕೆಯಿಂದ ಕೂಡಿದ ಮತ್ತು ಮನ:ಪೂರ್ವಕವಾದ ವ್ಯವಹಾರವನ್ನು ನಡೆಸುವುದನ್ನು ಸುಲಭಸಾಧ್ಯವಾಗಿ ಮಾಡುವುದು. ಅಲ್ಲದೆ ಭಾರತದೆಲ್ಲ ಘಟಕಗಳಿಗೂ ಪ್ರಜಾಸತ್ತಾತ್ಮಕವಾದ ಸರಕಾರದ ಸೌಕರ್ಯವುಳ್ಳ ದಾಸ್ಯವಿಮುಕ್ತಿಯನ್ನೂ ಸ್ವಾತಂತ್ರ್ಯದ ಪ್ರಗತಿಯನ್ನೂ ಪಡೆಯಲು ಸಹಾಯಮಾಡುವುದು.
ಈ ಸಾರ್ವಜನಿಕ ಸೇವಾ ಸಂಸ್ಥೆಗೆ ಗೋಖಲೆಯವರ ಹೆಸರನ್ನೇ ಇಡಲು ವಿಶೇಷ ಕಾರಣವೇನಾದರೂ ಉಂಟೆ? ಅದನ್ನು ಸ್ವತ: ಡಿವಿಜಿಯವರ ಮಾತುಗಳಲ್ಲೇ ಕೇಳೋಣ:
‘‘ರಾಜಕೀಯ ಕ್ಷೇತ್ರದಲ್ಲಿ ನಿಸ್ವಾರ್ಥವಾದ ಸೇವೆಯನ್ನು ಸಲ್ಲಿಸಲು ಅಂಥ ಬಾಳಿಗೆ ಬೇಕಾದ ವ್ಯವವಸ್ಥಿತವಾದ ವ್ಯಾಸಂಗ, ಸ್ವಶಿಕ್ಷೆ, ಸ್ವಸಿದ್ಧತೆ-ಇವುಗಳನ್ನು ಕೈಗೊಂಡ ಮೊದಲ ದೃಷ್ಟಾಂತವಾಗಿ ಗೋಖಲೆಯವರು ನನಗೆ ಗೋಚರಿಸಿದರು.’’
ಇಂಥ ಘನವಾದ ಧ್ಯೇಯೋದ್ದೇಶಗಳಿಂದ ಅಸ್ತಿತ್ವಕ್ಕೆ ಬಂದ ಗೋಖಲೆ ಸಾರ್ವಜನಿಕ ಸಂಸ್ಥೆ ಇದೀಗ ನೂರು ಸಾರ್ಥಕ ವಸಂತಗಳನ್ನು ಪೂರೈಸಿ ನೂರೊಂದಕ್ಕೆ ಪಾದಾರ್ಪಣ ಮಾಡಿದೆ. ಈ ನೂರು ವರ್ಷಗಳಲ್ಲಿ ಡಿವಿಜಿಯವರು ತಮ್ಮ ಆಯುಷ್ಯದ ಬಹುಭಾಗವನ್ನು ಧಾರೆಯೆರೆದು, ಹಡೆದ ತಾಯಿಯಂತೆ ಆರೈಕೆ ಮಾಡಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಈ ನೂರು ವರ್ಷಗಳಲ್ಲಿ ಇದರ ಸಾಧನೆಯ ಯಾದಿ ಈ ಅಂಕಣದ ಮಿತಿಗೆ ಮೀರಿದ್ದು. ಗೋಷ್ವಾರೆಯಾಗಿ ಅಲ್ಲಿನ ಗ್ರಂಥ ಭಂಡಾರ ಮತ್ತು ಕಾರ್ಯಕ್ರಮಗಳನ್ನು ನೋಡಿದಾಗ, ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರಕ್ಕೆ ಅದರ ಕೊಡುಗೆ ಎಷ್ಟು ಮಹತ್ವಪೂರ್ಣವಾದದ್ದು ಎಂಬುದು ಸ್ಪಷ್ಟವಾಗುತ್ತದೆ.
ಜಿ. ವೆಂಕಟಸುಬ್ಬಯ್ಯನವರ ಮಾತುಗಳಲ್ಲೇ ಹೇಳುವುದಾದರೆ, ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿರುವ ಪುಸ್ತಕ ಭಂಡಾರ ಕರ್ನಾಟಕದಲ್ಲಿರುವ ಭಂಡಾರಗಳಲ್ಲಿ ಬಹು ಪ್ರಧಾನವಾದ ಸ್ಥಾನವನ್ನು ಹೊಂದಿರುತ್ತದೆ. ಅನೇಕ ಅನುಪಲಬ್ಧವಾಗಿರುವ ಗ್ರಂಥಗಳು ಈಗಲೂ ಅಲ್ಲಿ ಸಿಗುತ್ತವೆ. ಸಾಹಿತ್ಯ, ವೇದಾಂತ, ಚರಿತ್ರೆ, ಅರ್ಥ ಶಾಸ್ತ್ರ, ರಾಜ್ಯ ಶಾಸ್ತ್ರ, ಸ್ವಾತಂತ್ರ್ಯ ಸಂಗ್ರಾಮದ ದಾಖಲೆಗಳು, ಸರಕಾರಿ ವರದಿಗಳು, ಹಿಂದಿನ ಪತ್ರಿಕೆಗಳು, -ಹೀಗೆ ಬೃಹತ್ಪ್ರಮಾಣದ ಗ್ರಂಥ ರಾಶಿಯೇ ಅಲ್ಲಿ ಸಂಗ್ರಹವಾಗಿದೆ. ಸರ್.ಎಂ.ವಿ, ಪ್ರೊ.ಎ.ಅರ್.ಕೃಷ್ಣ ಶಾಸ್ತ್ರಿ, ಕೆ.ವಿ.ರಾಘವಾಚಾರ್ಯ, ಜಿ.ಪಿ.ರಾಜರತ್ನಂ ಮುಂತಾದ ಪ್ರಸಿದ್ಧ-ಸುಪ್ರಸಿದ್ಧರ ಪುಸ್ತಕ ಸಂಗ್ರಹಗಳೆಲ್ಲ ಇಲ್ಲಿಗೆ ಹರಿದುಬಂದಿವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಇದೊಂದು ಆಕರ ಕೋಶಾಗಾರ.
ವ್ಯಾಸಂಗ ಗೋಷ್ಠಿ ಇದರ ಒಂದು ವಿಶೇಷ ವಿನ್ಯಾಸ. ಇದು ಡಿ.ವಿ.ಜಿ.ಯವರ ಪ್ರೀತಿಯ ಅಂಗವಾಗಿ ನಡೆಯುತ್ತಿದೆ. ವಿಶ್ವದ ಮಹಾಮಹಿಮರ ಗ್ರಂಥಗಳ ವ್ಯಾಸಂಗ ಸ್ವತ: ಡಿವಿಜಿಯವರ ಆಚಾರ್ಯತೆಯಲ್ಲಿ ನಡೆಯುತ್ತಿತ್ತು. ಗ್ಲಾಡ್ಸ್ಟನ್, ಮಿಲ್, ಪ್ಲೇಟೊ, ಮಾರ್ಲೆ ಅವರಿಂದ ಹಿಡಿದು ಮಹಾನ್ ಲೇಖಕರ ಕೃತಿಗಳ ಚಿಂತನ-ಮಂಥನವೇ ಈ ವ್ಯಾಸಂಗ ಗೋಷ್ಠಿ. ಜೊತೆಗೆ ಕೇಂದ್ರ-ರಾಜ್ಯಗಳ ಬಜೆಟ್‌ಗಳ ಪರಾಮರ್ಶೆ-ವಿಮರ್ಶೆ, ಬೆಲೆ ಏರಿಕೆ ಬಗ್ಗೆ ಜಿಜ್ಞಾಸೆ,-ಹೀಗೆ ಹಲವಾರು ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಚರ್ಚೆ, ಸಂವಾದಗಳು, ಉಪನ್ಯಾಸ, ಸಂಗೀತ, ತಾಳಮದ್ದಲೆ ಈ ಬಗೆಯ ಬೋಧರಂಜನೀಯ ನಿತ್ಯೋತ್ಸವಗಳು ಪ್ರತಿದಿನ ಉಂಟು. ಮಕ್ಕಳಿಗೆ ಚಿತ್ರಕಲೆಯಲ್ಲಿ ತರಬೇತಿ ಇದೆ. ತಿಲಕರ ಜನ್ಮ ಶತಾಬ್ದಿ, ಲಾಲಾ ಲಜಪತರಾಯ್ ಜನ್ಮ ಶತಾಬ್ದಿ, ಸರ್.ಎಂ.ವಿ. ಮತ್ತು ರವೀಂದ್ರನಾಥ ಠಾಕೂರರ 150ನೆ ಜನ್ಮದಿನೋತ್ಸವ, ಸಂವಿಧಾನ ಮತ್ತು ಗಣರಾಜ್ಯೋತ್ಸವದ ವಜ್ರ ಮಹೋತ್ಸವ-ಹಿಗೆ ಹಲವಾರು ಮೈಲಿಗಲ್ಲುಗಳನ್ನು ಇಲ್ಲಿ ಕಾಣಬಹುದು. ಜಾಗತೀಕರಣ, ವಾಣಿಜ್ಯೀಕರಣ, ಮಾಹಿತಿ ತಂತ್ರಜ್ಞಾನ, ಅನ್ಯಭಾಷಿಕರ ಲಗ್ಗೆ-ಹೀಗೆ ಹಲವಾರು ಅವಾಂತರ, ಆಟಾಟೋಪಗಳ ಮಧ್ಯೆಯೂ ಬೆಂಗಳೂರು ಮಹಾನಗರದಲ್ಲಿ ಸ್ಥಿರವಾಗಿ ನಿಂತಿರುವ ಈ ಜ್ಞಾನಸತ್ರದ ಇಂದಿನ ಅಧ್ಯಕ್ಷರು, ಹಿರಿಯ ಪತ್ರಕರ್ತ ಶ್ರೀ ಎಸ್.ಆರ್.ರಾಮಸ್ವಾಮಿ. ಡಿವಿಜಿ ವ್ಯಾಸಂಗ ಗೋಷ್ಠಿಯ ಪೈಲ್ವಾನರು, ಈಗ ಉಸ್ತಾದರು.
ಭರತ ವಾಕ್ಯ:
ಗಾಂಧಿಯವರ ಅವತಾರ ಕಾರ್ಯ ಸಮಾಪ್ತವಾಯಿತು: ಗೋಖಲೆಯವರ ಅವತಾರ ಕಾರ್ಯ ಉಳಿದಿದೆ.ಗಾಂಧಿಯವರದು ಒಂದು ಯುಗಕ್ಕೆ ಒಂದು ಸಾರಿ ಒದಗಿಕೊಳ್ಳುವ ಕಾರ್ಯ-ಕ್ವಚಿತ್ಕಾಲದ ಕಾರ್ಯ. ಗೋಖಲೆಯವರದು ನಿರಂತರವಾಗಿ ನಡೆಯಬೇಕಾದ ಕಾರ್ಯ, ನಿತ್ಯಜೀವನದ ಕಾರ್ಯ.
(ಡಿವಿಜಿ-ಗೋಪಾಲಕೃಷ್ಣ ಗೋಖಲೆ ಜೀವನ ಚರಿತ್ರೆ ಗ್ರಂಥದಲ್ಲಿ).