ಕನಸುಗಾರ ಕವಿ ನಾಡಿಗರಿಗೆ ಮತ್ತೊಂದು ಪ್ರಶಸ್ತಿಯ ಪುಚ್ಛ
ಕನ್ನಡಕ್ಕೆ ‘ದಾಂಪತ್ಯ ಗೀತೆ’, ‘ಪಂಚಭೂತ’ದಂಥ ಮಹತ್ವಪೂರ್ಣ ಕಾವ್ಯಕೃತಿಗಳನ್ನಿತ್ತಿರುವ ಸುಮತೀಂದ್ರ ನಾಡಿಗರಿಗೆ ಈಗ ಎಂಬತ್ತೊಂದರ ಅಜ್ಜನ ಪ್ರಾಯ. ನಲವತ್ತರ ಪ್ರಾಯದ ಅಸುಪಾಸಿನಲ್ಲೇ ಧವಳಕೇಶಿ ಆದ ಸುಮತೀಂದ್ರ ನಾಡಿಗರು ಆಗಲೇ ಮಕ್ಕಳ ಕಣ್ಣಿಗೆ ಅಜ್ಜನಾಗಿದ್ದರು. ಈ ಅಜ್ಜನನ್ನು ಕಂಡರೆ ಮಕ್ಕಳಿಗೆ ಬಲು ಇಷ್ಟ. ಮಾಸ್ತಿ ಅಜ್ಜನಂತೆ ಇವರು ಸದಾ ಜೇಬಲ್ಲಿ ಚಾಕಲೇಟು/ಪೆಪ್ಪರಮೆಂಟ್ ಇಟ್ಟುಕೊಂಡು ಮಕ್ಕಳಿಗೆ ಪ್ರೀತಿಯ ಅಜ್ಜನಾಗಿದ್ದಾರೋ ಇಲ್ಲವೋ ತಿಳಿಯದು. ಆದರೆ ನಾಡಿಗರ ‘ಗಾಳಿಪಟ’, ‘ಇಲಿ ಮದುವೆ’, ‘ಡಿಡಿಲಕ್ ಡಿಡಿಲಕ್’, ‘ಗೂಬೆಯ ಕಥೆ’, ‘ಮನುಷ್ಯನಿಗೆ ಬಾಲ’ ಮೊದಲಾದ ಪದ್ಯಗಳು-ಕಥೆ ಕಾದಂಬರಿಗಳು ಮಕ್ಕಳಿಗೆ ಸವಿಸವಿ/ಸಿಹಿಸಿಹಿ ಪೆಪ್ಪರಮೆಂಟು ಚಾಕಲೇಟುಗಳಾಗಿದ್ದವು. ಎಂದೇ ಕನ್ನಡದ ಮಕ್ಕಳಿಗೆ ಚಂದದ ಕಥೆ ಹೇಳುವ ನಾಡಿಗ ‘ಅಜ್ಜ’ನೆಂದರೆ ಬಲು ಪ್ರೀತಿ ಅಕ್ಕರೆ. ಈ ಮಕ್ಕಳಾದಿಯಾಗಿ ಕನ್ನಡಿಗರೆಲ್ಲ ಸಂಭ್ರಮಪಡಬೆಕಾದ ಸಿಹಿಸುದ್ದಿಯೆಂದರೆ ನಾಡಿಗರಿಗೆ ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ -ಶಿಶು ಸಾಹಿತ್ಯ ಪುರಸ್ಕಾರ ಗೌರವ-ಬಂದಿರುವುದು. ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮೊದಲ್ಗೊಂಡು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸುಮತೀಂದ್ರ ನಾಡಿಗರು ‘ಮಲೆ’ನಾಡಿಗರು. ಅವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ, 1935ರ ಮೇ 4ರಂದು. ತಂದೆ ರಾಘವೇಂದ್ರ ರಾವ್, ತಾಯಿ ಶ್ರೀಮತಿ ಸುಬ್ಬಮ್ಮನವರು. ತಂದೆಗೆ ವರ್ಗವಾದಂತೆಲ್ಲ ವಿವಿಧ ಊರುಗಳಲ್ಲಿ ನಾಡಿಗರ ವಿದ್ಯಾಭ್ಯಾಸ ಸಾಗಿತು. ಬಿ.ಎ.ನಂತರ ಮೈಸೂರಿನಲ್ಲಿ ಎಂ.ಎ. ಮುಗಿಸಿ ಕಾಲೇಜು ಪ್ರಾಧ್ಯಾಪಕರಾದರು. ಅಮೆರಿಕದ ಮೋಹಿನಿ ಕೈಬೀಸಿ ಕರೆದಾಗ ಅಲ್ಲಿಗೆ ತೆರಳಿ, ಫಿಲಿಡೆಲ್ಫಿಯಾದ ಟೆಂಪಲ್ ವಿಶ್ವವಿದ್ಯಾನಿಲಯದಲ್ಲಿ ಮತ್ತೊಂದು ಇಂಗ್ಲಿಷ್ ಎಂ.ಎ., ಮುಡಿಗೇರಿಸಿಕೊಂಡರು. ವರಕವಿ ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು ಮಹಾಪ್ರಬಂಧಕ್ಕೆ ಪಿಎಚ್‌ಡಿ ಪಡೆದು ಡಾಕ್ಟರೂ ಆದರು. ಪ್ರಾಧ್ಯಾಪಕರಾಗಿ ಬೆಳಗಾವಿ, ಗೋವಾ, ಬೆಂಗಳೂರು, ಅಮೆರಿಕ ಅಂತ ನಾಡಾಡಿಯಾಗಿ ಅಲೆದಾಡಿದರು. ದೇಶ ಸುತ್ತಿ, ಕೋಶ ಓದಿ ಕೊನೆಗೊಮ್ಮೆ ಬೆಂಗಳೂರಿನಲ್ಲಿ ನೆಲೆನಿಂತರು. ನಿರುದ್ಯೋಗಿಯಾಗಿದ್ದಾಗೊಂದಷ್ಟು ಕಾಲ ಗಾಂಧೀ ಬಝಾರಿನಲ್ಲಿ ಪುಸ್ತಕದ ಅಂಗಡಿ ತೆರೆದು ಸಾಹಿತ್ಯ ಪ್ರಿಯರ ಹರಟೆಗೆ ಒಂದು ಜಾಗಮಾಡಿ ಕೊಟ್ಟರು, ಸಾಹಿತ್ಯ ಪರಿಚಾರಕರಾದರು. ಈ ಪಯಣದುದ್ದಕ್ಕೂ ಸಾಹಿತ್ಯ ನಾಡಿಗರ ಆತ್ಮ ಸಂಗಾತಿ. ನಾಡಿಗರಾಗಿ, ಕೆಲವೊಮ್ಮೆ ನಳಿನಿ ದೇಶಪಾಂಡೆಯಾಗಿ, ಇನ್ನು ಕೆಲವೊಮ್ಮೆ ಲೀಲಾ ರಾವ್ ಅಗಿ ಕವನಗಳನ್ನು ಬರೆಯುತ್ತಾ ಕಾವ್ಯಪ್ರಿಯರನ್ನು ಬೆರಗುಗೊಳಿಸಿದರು. ಒಳಗೊಳಗೆ ತಾವೂ ಪುಳಕಗೊಳ್ಳುತ್ತಾ ಬೆಳೆದರು. ಮಧ್ಯೆಮಧ್ಯೆ ಕೃತಿಚೌರ್ಯದ ಬಗ್ಗೆ ಸಾಹಿತ್ಯಕ ಪತ್ತೇದಾರಿ ಮಾಡುತ್ತ ಸಾಹಿತ್ಯ ವಲಯದಲ್ಲಿ ಗಾಳಿ ಎಬ್ಬಿಸಿ ಚರ್ಚೆಗೆ ಚಾಲನೆ ಕೊಡುತ್ತಿದ್ದುದೂ ಉಂಟು. ಇದನ್ನು ಕವಿಮಿತ್ರ ದಿವಂಗತ ದೇಶಕುಲಕರ್ಣಿ ‘ಕನ್ನಡ ಸಾಂಸ್ಕೃತಿಕ ಲೋಕದ ಪತ್ತೇದಾರಿ’ ಎಂದು ಕರೆದದ್ದುಂಟು.
ಚಿಕ್ಕಂದಿನಲ್ಲಿ ಸುಮತೀಂದ್ರ ನಾಡಿಗರಿಗೆ ಕುವೆಂಪು ಕವನಗಳೆಂದರೆ ಬಲು ಪ್ರಿಯ. ಅಷ್ಟೇ ಪ್ರಿಯವಾದದ್ದು ಮಲೆನಾಡಿನ ಪ್ರಕೃತಿ. ನಾಡಿಗರೊಳಗಣ ಕವಿ ಬಹುಶ: ಬಾಲ್ಯದ ಈ ಪ್ರಭಾವಗಳಿಂದಲೇ ಮೂಡಿರಬೇಕು. ಬೆಳೆದಂತೆಲ್ಲ ಮನಸ್ಸು ವೈಚಾರಿಕತೆಯಲ್ಲಿ ಮಾಗಿದಂತೆ ಕುವೆಂಪು, ಬೇಂದ್ರೆ, ಅಡಿಗ ಮೊದಲಾದವರ ಕಾವ್ಯಾಧ್ಯಯನದಿಂದ ಅವರಿಗೆ ಕಾವ್ಯ ಕಟ್ಟುವ ಗುಟ್ಟುಗಳೂ ಅರಿವಿಗೆ ಬಂದಂತೆ ತೋರುತ್ತದೆ. ಅವರೇ ಹೇಳಿರುವಂತೆ ಕವಿತೆ ಎನ್ನುವುದು ಬೇಂದ್ರೆಯವರು ಹೇಳಿರುವ ಹಾಗೆ ಹುಟ್ಟು ಹಾಡು ಅದು, ಅಡಿಗರು ಹೇಳುವ ಹಾಗೆ ‘ತುಂಬಿ ನವಮಾಸ ಬರುವ ಜೀವಪವಾಡ’. ಛಂದಸ್ಸಿನ ಕೋಶದಲ್ಲಿ ಅದು ಬೆಳೆಯುತ್ತದೆ.ಅದನ್ನು ಬೆಳೆಸುವ ತಾಳ್ಮೆ ನಮಗೆ ಬೇಕು, ಇಂಥ ತಾಳ್ಮೆ ಮತ್ತು ಕನಸುಗಾರಿಕೆಯಿಂದ ಯಥಾಸಾವಕಾಶ ಕಾವ್ಯಕಟ್ಟುವ ಕಸುಬಿನಲ್ಲಿ ತೊಡಗಿಸಿಕೊಂಡವರು ನಾಡಿಗರು. ಕೇವಲ ಕನಸುಗಾರರಲ್ಲ, ಕುದಿಯುವ ಕನಸುಗಾರ.
ಕೆಳಗಿನ ಸಾಲುಗಳನ್ನು ನೋಡಿ:
‘ಮಾನವನ ಹುಟ್ಟುಗುಣ ವೈಚಾರಿಕತೆ’ ಎಂದು
ಅರಿಸ್ಟಾಟಲನು ಹಿಂದೆ ಹೇಳಿ ಹೋದ,
ಅಂಥದೇ ನಂಬಿಕೆಯು ಎಂಎನ್ ರಾಯ್‌ಗೂ ಇತ್ತು,
ಆತನೂ ಇನ್ನೊಬ್ಬ ಕನಸುಗಾರ;
ಯಾರೂ ಆಳದೇ ಇರುವ ರಾಜ್ಯವನು ಕನಸಿದ್ದ
ಆ ಮಾರ್ಕ್ಸು ಇನ್ನೊಬ್ಬ ಕನಸುಗಾರ,
ಕನಸು ಕಾಣುವುದಷ್ಟೆ ನಮ್ಮ ಹಣೆಬರಹವೇ
ಎಂದು ಕುದಿಯುವ ನಾನು ಕನಸುಗಾರ.
-ಇಂಥ ಕುದಿತದಿಂದಲೇ ಅಮೃತಕ್ಕೆ ಕೈಚಾಚುವ ಈ ಕನಸುಗಾರ ಕವಿ ಮೊದಲು ಪ್ರಕಾಶಗೊಂಡದ್ದು ‘ನಿಮ್ಮ ಪ್ರೇಮಕುಮಾರಿಯ ಜಾತಕ’ದಲ್ಲಿ-1964. ನಂತರ ‘ಕಪ್ಪುದೇವತೆ’ಯ ಆಗಮನವಾಯಿತು(1970). ಈ ಎರಡು ಸಂಕಲನಗಳಿಂದ ಕಾವ್ಯಪ್ರೇಮಿಗಳ ಗಮನಸೆಳೆದ ನಾಡಿಗರು ಕಾವ್ಯಕೃಷಿಯಲ್ಲಿ ಸತತ ಸೃಜನಶೀಲರಾಗಿ ಕವನ ಸಂಕಲನಗಳನ್ನು ಪ್ರಕಟಿಸುತ್ತಾ ವಿಮರ್ಶಕರ ಗಮನ ಸೆಳೆದರು. ಕವಿಯಾಗಿ ಬೆಳೆದರು. ಹತ್ತಕ್ಕೂ ಹೆಚ್ಚು ಕವನ ಸಂಕಲನಗಳ ಈ ಕವಿಯ ಸಮಗ್ರ ಕಾವ್ಯ ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ. ನವ್ಯದ ಕಾಲಘಟ್ಟದಲ್ಲೇ ಅದೇ ಜಾಡಿನಲ್ಲಿ ಕಾವ್ಯ ರಚನೆ ಆರಂಭಿಸಿದರಾದರೂ ನಾಡಿಗರು ನವ್ಯ ಕಾವ್ಯದ ಪ್ರಧಾನ ಲಕ್ಷಣಗಳೆಂದು ಗುರುತಿಸಲಾದ ಆತ್ಮರತಿ, ಅತಿವ್ಯಂಗ್ಯಗಳಿಂದ ಮುಕ್ತರು. ನವೋದಯದ ಭಾವಗೀತೆಯ ಛಂದೋಬದ್ಧ ಮಾರ್ಗವೇ ಅವರಿಗೆ ಮಾದರಿಯಾಗಿರುವಂತೆ ತೋರುತ್ತದೆ. ವಿಮರ್ಶಕರು ಗುರುತಿಸಿರುವಂತೆ ‘ಉದ್ಘಾಟನೆ’, ‘ಭಾವಲೋಕ’, ‘ನಟರಾಜ ಕಂಡ ಕಾಮನ ಬಿಲ್ಲು’ ಈ ಮಾರ್ಗದ ಗಮನಾರ್ಹ ಕೃತಿಗಳು.‘ದಾಂಪತ್ಯಗೀತೆ’ ಮತ್ತು ‘ಪಂಚಭೂತ’ ಕೃತಿಗಳು, ಜೀವನದರ್ಶನ ಮತ್ತು ಕಾವ್ಯಮಾರ್ಗ ಎರಡೂ ದೃಷ್ಟಿಯಿದಲೂ ನಾಡಿಗರ ಕಾವ್ಯಸಿದ್ಧಿಯ ಶೃಂಗ.
ಬೇಂದ್ರೆಯವರ ‘ಸಖೀಗೀತ’ದ ನಂತರ, ಸ್ತ್ರೀಪುರುಷ ಸಂಬಂಧಗಳ ಪಾವಿತ್ರ್ಯ ಮತ್ತು ಶ್ರೇಷ್ಠತೆಯನ್ನು ವೇದಕಾಲೀನ ಜ್ಞಾನದ ಹಿನ್ನೆಲೆಯಲ್ಲಿ ಬಿಂಬಿಸುವ ಮಹತ್ವದ ಕೃತಿ ಎಂದು ಕನ್ನಡ ವಿಮರ್ಶೆ ಪರಿಗಣಿಸಿರುವ ‘ದಾಂಪತ್ಯಗೀತೆ’, ಕಾಮಕ್ಕಿಂತ ಒಲವು, ಪ್ರೀತಿವಾತ್ಸಲ್ಯಗಳ ಸಹಬಾಳ್ವೆ ಮುಖ್ಯ ಎಂಬುದನ್ನು ಪ್ರತಿಪಾದಿಸುವ ಖಂಡ ಕಾವ್ಯ. ‘ಪಂಚಭೂತಗಳು’ ಪ್ರಕೃತಿಯ ಮಹತ್ ಶಕ್ತಿಗಳನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಪರಿಭಾವಿಸುವ, ವಿಶ್ಲೇಷಿಸುವ ನೀಳ್ಗವನ. ಡಾ.ಜಿ.ಬಿ ಹರೀಶ್‌ಅವರು ಅಭಿಪ್ರಾಯಪಟ್ಟಿರುವಂತೆ-
‘‘ಕಾವ್ಯ ಹೃದಯದ ದಾರಿ, ರಸದ ದಾರಿ. ನಾಡಿಗರು ಈ ಕಾವ್ಯದಲ್ಲಿ ಐದು ಪ್ರಕೃತಿ ತತ್ವಗಳ ಒಳಗೆ ಅಡಗಿರುವ ಪ್ರಾಣಿಲೋಕ, ಸಸ್ಯಲೋಕ, ಮನುಷ್ಯಲೋಕಗಳನ್ನು ಅನಾವರಣ ಮಾಡಿದ್ದಾರೆ. ಮನುಷ್ಯರಿಗೂ ನಿಸರ್ಗಕ್ಕೂ ಇರುವ ಅವಿನಾಭಾವವನ್ನು ಈ ಕಾವ್ಯ ನೆನಪಿಸಿಕೊಡುತ್ತದೆ. ಉಪನಿಷತ್ತಿನಲ್ಲೇ ವ್ಯಕ್ತವಾದ ಈ ರೂಪಕವನ್ನು ರೂಪಾಂತರಿಸಿ ಈ ಕಾಲಕ್ಕೂ ಪ್ರಸ್ತುತಗೊಳಿಸುವ ರಸಾತ್ಮಕ ಕೆಲಸವನ್ನು ‘ಪಂಚಭೂತ’ ಮಾಡಿದೆ.’’ ಭಾರತೀಯ ಸಾಹಿತ್ಯದ ವಿಮರ್ಶಕರ ಪಂಕ್ತಿಯಲ್ಲಿ ಎದ್ದುಕಾಣುವ ಪ್ರಸಿದ್ಧ ವಿಮರ್ಶಕ ಶಿಬ ನಾರಾಯಣ ರೇ ಅವರು, ‘‘ದಾಂಪತ್ಯಗೀತೆ ಮತ್ತು ಪಂಚಭೂತ ನಿಸ್ಸಂದೇಹವಾಗಿ ಮಹತ್ವದ ಕೃತಿಗಳಾಗಿದ್ದು ಆಧುನಿಕ ಭಾರತೀಯ ಸಾಹಿತ್ಯಕ್ಕೆ ಮಹತ್ವಪೂರ್ಣವಾದ ಸ್ವೋಪಜ್ಞ ಕೊಡುಗೆಗಳಾಗಿವೆ’’ ಎಂದು ಹೇಳಿರುವುದು ನಾಡಿಗರಿಗಷ್ಟೇ ಅಲ್ಲದೆ ಕನ್ನಡ ಕಾವ್ಯಕ್ಕೂ ಸಂದ ಗೌರವವಾಗಿದೆ. ಮತ್ತೊಬ್ಬ ಕವಿ ಅಯ್ಯಪ್ಪಫಣಿಕ್ಕರ್ ‘ಪಂಚಭೂತ’ ಕಾವ್ಯವನ್ನು ನಾಡಿಗೋಪನಿಷತ್‌ಎಂದು ಬಣ್ಣಿಸಿದ್ದಾರೆ. ‘‘ಪ್ರಾಚೀನತೆಯ ಹಿನ್ನೆಲೆಯಲ್ಲಿ ವರ್ತಮಾನವನ್ನು ಗ್ರಹಿಸುವ, ವರ್ತಮಾನದ ಬೆಳಕಿನಲ್ಲಿ ಪ್ರಾಚೀನತೆಯೊಂದಿಗೆ ಅನುಸಂಧಾನ ನಡೆಯಿಸುವ ನಾಡಿಗರ ಈ ಕೃತಿ(ಪಂಚಭೂತ) ಅವರ ಮಹತ್ವಾಕಾಂಕ್ಷೆಯ ಒಂದು ಅಪರೂಪದ ಪ್ರಯೋಗ ವಾಗಿದೆ’’ ಎನ್ನುತ್ತಾರೆ ಜಿ.ಎಸ್.ಶಿವರುದ್ರಪ್ಪನವರು. ಇವೆಲ್ಲ ನಾಡಿಗರ ಕಾವ್ಯ ಪ್ರವೇಶಕ್ಕೆ ಉತ್ತಮ ಕೈಮರಗಳಾಗಬಲ್ಲವು. ಸುಮತೀಂದ್ರ ನಾಡಿಗರು ‘ಕಾರ್ಕೋಟಕ’(1975), ‘ಗಿಳಿ ಮತ್ತು ದುಂಬಿ’(1985) ಮತ್ತು ‘ಸ್ಥಿತಪ್ರಜ್ಞ’(1996) ಕಥಾಸಂಕಲನಗಳನ್ನು ಹೊರತಂದಿದ್ದಾರೆ. 2009ರಲ್ಲಿ ಅವರ ಸಮಗ್ರ ಕಥೆಗಳು ಪ್ರಕಟವಾಯಿತು.‘ಹಂಚಿಕೆ’ ಮತ್ತು ‘ಸುಟ್ಟ ಬೆರಳು’ ವಿಮರ್ಶಕರ ಗಮನ ಸೆಳೆಯುವು ದರಲ್ಲಿ ಯಶಸ್ವಿಯಾಗಿರುವ ಮುಖ್ಯ ಕತೆಗಳು. ಸಾಹಿತ್ಯ ವಿಮರ್ಶೆಯಲ್ಲೂ ನಾಡಿಗರ ಚಿಂತನಮಂಥನ ಜಿಜ್ಞಾಸೆಗಳು ತೀವ್ರವಾಗಿ ತೊಡಗಿಕೊಂಡಿರುವುದನ್ನು ನಾವು ಅವರ ವಿಮರ್ಶಾ ಕೃತಿಗಳಲ್ಲಿ ಕಾಣುತ್ತೇವೆ. ಅವರ ವಿಮರ್ಶಾ ಕೃತಿಗಳ ಸಂಖ್ಯೆ ಎರಡು ಕೈಬೆರಳುಗಳ ಎಣಿಕೆಯನ್ನು ದಾಟುತ್ತದೆ. ‘ಕಾವ್ಯ ಎಂದರೇನು?’(1994) ಪ್ರಶ್ನೆಯೊಂದಿಗೇ ಅವರ ವಿಮರ್ಶೆ ಶುರುವಾಗುತ್ತದೆ. ನಾಡಿಗರ ಸಾಹಿತ್ಯ ವಿಮರ್ಶೆ, ಆರು ಸಾಹಿತ್ಯ ಚರಿತ್ರೆಗಳಲ್ಲಿ ಮತ್ತು ‘ಅಡಿಗರು ಮತ್ಯ ನವ್ಯ ಕಾವ್ಯ’, ‘ಬೇಂದ್ರೆ ಕಾವ್ಯ ವಿಭಿನ್ನ ನೆಲೆಗಳು’ ಈ ವಿಸ್ತಾರದಲ್ಲಿ ಚಾಚಿಕೊಂಡಿವೆ. ‘ವಿಮರ್ಶೆಯ ದಾರಿಯಲ್ಲಿ’ ನಾಡಿಗರ ತೌಲನಿಕ ವಿಮರ್ಶೆಗೆ ಒಂದು ಉತ್ತಮ ನಿದರ್ಶನವಾದೀತು. ಇದರಲ್ಲಿ ಅನಂತ ಮೂರ್ತಿ ಮತು ಭೈರಪ್ಪ, ಪುತಿನ ಮತ್ತು ಗೋವಿಂದ ಪೈ ಮೊದಲಾದ ಕನ್ನಡದ ಪ್ರಮುಖ ಲೇಖಕರ ನಿರ್ದಿಷ್ಟ ಕೃತಿಗಳ ತೌಲನಿಕ ವಿವೇಚನೆಯನ್ನು ಕಾಣಬಹುದು. ಗೋಪಾಲಕೃಷ್ಣ ಆಡಿಗ ಮತ್ತು ನರಸಿಂಹಸ್ವಾಮಿಯವರ ಕಾವ್ಯ ಕುರಿತ ಅಧ್ಯಯನ ನಾಡಿಗರ ಪ್ರಖರ ವಿಮರ್ಶಾ ಪ್ರಜ್ಞೆ ಮತು ವಿವೇಕಗಳಿಗೆ ಮತ್ತೊಂದು ನಿದರ್ಶನ.
ಆರು ಸಂಪುಟಗಳಲ್ಲಿ ಪ್ರಕಟವಾಗಿರುವ ನಾಡಿಗರ ಸಾಹಿತ್ಯ ಚರಿತ್ರೆ ವಿಮರ್ಶೆಯ ಪ್ರಕಾರದೊಳಗೇ ಸಲ್ಲುವ ವಿಶಿಷ್ಟ ರೀತಿಯ ಬರಹ. ಸಾಹಿತಿಗಳ ಪತ್ರಗಳು, ಅಭಿಪ್ರಾಯಗಳು, ನೆನಪುಗಳು, ಸಂದರ್ಶನಗಳು, ಹೇಳಿಕೆಗಳು, ಸಂದರ್ಭವೊಂದರ ವಿಶ್ಲೇಷಣೆ ಇತ್ಯಾದಿ ಹಲವು ಮೂಲಗಳಿಂದ ಸಂಗ್ರಹಿಸಿದ ಸಾಹಿತ್ಯ ದ್ರವ್ಯವನ್ನು ಬಳಸಿಕೊಂಡು ನೇಯ್ದಿರುವ ವಿಶಿಷ್ಟ ಪ್ರಯೋಗದ ಸಾಹಿತ್ಯ ಚರಿತ್ರೆ ಇದು.
ಅನುವಾದ ಕಾರ್ಯದಲ್ಲೂ ಸುಮತೀಂದ್ರ ನಾಡಿಗರು ಹಿಂದೆ ಬಿದ್ದಿಲ್ಲ. ಕನ್ನಡ ರಂಗಭೂಮಿ ಹೊಸ ಸಂವೇದನೆಯ ನಾಟಕಗಳಿಗಾಗಿ ಪಶ್ಚಿಮದತ್ತ ನೋಡಿದಾಗ ನಾಡಿಗರು ಅಯನೆಸ್ಕೋನ ‘ದಿ ಬಾಲ್ ಪ್ರಿಮಾ ದೊನ್ನಾ’ ನಾಟಕವನ್ನು ‘ಬೊಕ್ಕತಲೆಯ ನರ್ತಕಿ’ ಹೆಸರಿನಲ್ಲಿ ಅನುವಾದಿಸಿ, ಅಸಂಗತ ನಾಟಕಗಳಿಗೆ ನಾಂದಿ ಹಾಡಿದರು. ಬೆಂಗಳೂರಿನಲ್ಲಿ ಪ್ರದರ್ಶನಕಂಡ ಮೊದಲ ಅಸಂಗತ ನಾಟಕ ಇದು. ಗೋಪಾಲಕೃಷ್ಣ ಅಡಿಗ, ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪಇವರ ಕವನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿರುವುದು ಹಾಗೂ ಬಂಗಾಳಿ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸಿರುವುದು ನಾಡಿಗರ ಅನುವಾದ ಕಾರ್ಯದ ಒಂದು ಹೆಗ್ಗಳಿಕೆ. ನಾಡಿಗರು ಕೆಲವು ವರ್ಷಗಳ ಕಾಲ ಕೊಲ್ಕತ್ತಾದಲ್ಲಿದ್ದು ಬಂಗಾಳಿ ಕಲಿತು, ಬಂಗಾಳಿ ಸಾಹಿತ್ಯವನ್ನು ಅಧ್ಯಯನ ಮಾಡಿದವರು. ರವೀಂದ್ರನಾಥ ಠಾಕೂರರ ‘ತಿನ್ ಸಂಗಿ’, ನಿರೇಂದ್ರನಾಥ ಚಕ್ರವರ್ತಿಯವರ ‘ಉಲಂಗರ ರಾಜ’ ಹಾಗೂ ಆಯ್ದ ಬಂಗಾಳಿ ಕವನಗಳು ನಾಡಿಗರು ಬಂಗಾಳಿಯಿಂದ ಕನ್ನಡಕ್ಕೆ ತಂದಿರುವ ಕೆಲವು ಮುಖ್ಯ ಕೃತಿಗಳು.
ಸರಿಸುಮಾರು ಅರ್ಧ ಶತಕದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿರುವ ನಾಡಿಗರನ್ನು ಹಲವಾರು ಪ್ರಶಸ್ತಿಪುರಸ್ಕಾರಗಳು ಅರಸಿ ಬಂದಿವೆ. ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವಿ.ಎಂ.ಇನಾಂದಾರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಿವರಾಮ ಕಾರಂತ ಬಾಲ ಸಾಹಿತ್ಯ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಮೊದಲಾದವು. ಈಗ ಇವೆಲ್ಲದಕ್ಕೂ ಶಿಖರಪ್ರಾಯವಾಗಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ-ಶಿಶು ಸಾಹಿತ್ಯಕ್ಕಾಗಿ ಸಂದಿರುವ ಪುರಸ್ಕಾರ. ಇದು ಸುಮತೀಂದ್ರ ನಾಡಿಗರ ಸಮಗ್ರ ಸಾಹಿತ್ಯಕ್ಕೆ ದೊರೆತಿರುವ ಗೌರವ ಎಂದು ಸಹೃದಯರು ಭಾವಿಸಿದಲ್ಲಿ ಅದು ಅತ್ಯಂತ ಸಮರ್ಥನೀಯವಾದದ್ದು. ಭರತ ವಾಕ್ಯ: ಹೇಳೋಣ ನಾಡಿಗರಿಗೆ ಅಭಿನಂದನೆಗಳ
ಸ್ವಸ್ತಿ ಸ್ವಸ್ತಿ ಸ್ವಸ್ತಿ.