2100ರ ಹೊತ್ತಿಗೆ ಸಮುದ್ರ ಮಟ್ಟ 2 ಮೀಟರ್ ಏರಿಕೆ: ಹಿಮ ವಿಜ್ಞಾನಿಗಳ ಆಘಾತಕಾರಿ ವರದಿ
ವಾಶಿಂಗ್ಟನ್, ಮೇ 22: ಈ ಶತಮಾನದ ಕೊನೆಯ ಹೊತ್ತಿಗೆ ಸಮುದ್ರ ನೀರಿನ ಮಟ್ಟವು ಎರಡು ಮೀಟರ್‌ಗಳಷ್ಟು ಏರಬಹುದು ಹಾಗೂ ಕೋಟ್ಯಂತರ ಜನರನ್ನು ನಿರ್ವಸಿತಗೊಳಿಸಬಹುದು ಎಂಬುದಾಗಿ ಜಗತ್ತಿನ ಪ್ರಮುಖ ಹಿಮ ವಿಜ್ಞಾನಿಗಳು ಈ ವಾರ ಬಿಡುಗಡೆಗೊಳಿಸಿದ ಅಧ್ಯಯನ ವರದಿಯೊಂದು ಹೇಳಿದೆ.
ಇದು ವಿಶ್ವಸಂಸ್ಥೆಯು ಇದೇ ಅವಧಿಗೆ ನೀಡಿದ ಎಚ್ಚರಿಕೆಗಿಂತ ದುಪ್ಪಟ್ಟಾಗಿದೆ.
ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಕ್ಟಿಕಗಳಲ್ಲಿ ಜಗತ್ತಿನ ಸಾಗರಗಳ ನೀರಿನ ಮಟ್ಟವನ್ನು ಡಝನ್‌ಗಟ್ಟಳೆ ಮೀಟರ್‌ಗೆ ಎತ್ತರಿಸಬಲ್ಲಷ್ಟು ಘನೀಕೃತ ನೀರಿದೆ. ಸಾಗರಗಳು ಬಿಸಿಗೊಳ್ಳುತ್ತಿದ್ದು, ನೀರಿನ ಹಿಗ್ಗುವಿಕೆಯಿಂದಲೂ ಸಮುದ್ರ ನೀರಿನ ಮಟ್ಟ ಹೆಚ್ಚುತ್ತದೆ.
ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಅಂತರ್‌ಸರಕಾರೀಯ ನಿಯೋಗ (ಐಪಿಸಿಸಿ)ವು 2013ರಲ್ಲಿ ನೀಡಿದ ಐದನೇ ಅಂದಾಜು ವರದಿಯಲ್ಲಿ, ಹಾಲಿ ಮಾಲಿನ್ಯ ಸ್ಥಿತಿಗತಿಗಳ ಆಧಾರದಲ್ಲಿ ಸಾಗರಗಳ ನೀರಿನ ಮಟ್ಟವು 2100ರ ವೇಳೆಗೆ ಒಂದು ಮೀಟರ್‌ನಷ್ಟು ಹೆಚ್ಚುತ್ತದೆ ಎಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಈಗ ಹಿಮ ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಸಾಗರ ಮಟ್ಟ ಏರಿಕೆಯಿಂದಾಗಿ ಸಮುದ್ರ ಆಪೋಶನ ತೆಗೆದುಕೊಳ್ಳುವ ಭೂಮಿಯ ಪ್ರಮಾಣ ಫ್ರಾನ್ಸ್, ಜರ್ಮನಿ ಮತ್ತು ಬ್ರಿಟನ್‌ನಗಳ ಒಟ್ಟು ವಿಸ್ತೀರ್ಣಕ್ಕೆ ಸಮವಾಗುತ್ತದೆ ಹಾಗೂ 18 ಕೋಟಿಗೂ ಅಧಿಕ ಜನರು ನಿರ್ವಸಿತರಾಗುತ್ತಾರೆ.