ವಿಲಾಸಿ ಕಾರು, ಉಚಿತ ವಿಮಾನ ಟಿಕೆಟ್ ಆಮಿಷ ಒಡ್ಡುವ ಫೇಸ್ ಬುಕ್ ಪೋಸ್ಟ್ ಗೆ ಮರುಳಾಗುವ ಮುನ್ನ ಇದನ್ನು ಓದಿಕೊಳ್ಳಿ...
ದುಬೈ, ಸೆ. 3 : ದುಬೈ ಮೂಲದ ವಿಮಾನ ಯಾನ ಸಂಸ್ಥೆಯ ಹೆಸರಲ್ಲಿ ಫರ್ಸ್ಟ್ ಕ್ಲಾಸ್ ಉಚಿತ ವಿಮಾನ ಟಿಕೆಟ್ ಗಳನ್ನು ವರ್ಷವಿಡೀ ನೀಡಲಾಗುವುದು ಎಂಬ ಫೇಸ್ ಬುಕ್ ಪೋಸ್ಟ್ ಅನ್ನು ನೀವು ಲೈಕ್ ಅಥವಾ ಶೇರ್ ಮಾಡಿದ್ದರೆ ನೀವು ಯಾವುದೇ ಉಡುಗೊರೆಯನ್ನು ನಿರೀಕ್ಷಿಸಬೇಡಿ ! ಏಕೆಂದರೆ ಯಾವುದೇ ವಿಮಾನ ಯಾನ ಸಂಸ್ಥೆ ಅಂತಹ ಯಾವುದೇ ಉಚಿತ ಟಿಕೆಟ್ ನೀಡುತ್ತಿಲ್ಲ.
ಅದು ನಿಮ್ಮ ಮಾಹಿತಿ ಕದಿಯಲು ಹಾಗು ಮಾಲ್ವೇರ್ ಗಳನ್ನು ಹರಡಲು ಸೈಬರ್ ಕಳ್ಳರು ಹೂಡಿರುವ ಹೊಸ ಉಪಾಯ.
ಪ್ರತಿಷ್ಠಿತ ಎಮಿರೇಟ್ಸ್ ಹೆಸರು ಹಾಗು ಅದರ ಫ್ಲೈ ಎಮಿರೇಟ್ಸ್ ಲೋಗೋ ಬಳಸಿ ಈ ಸೈಬರ್ ಕಳ್ಳರು ಫೇಸ್ ಬುಕ್ ಬಳಕೆದಾರರನ್ನು ಆಮಿಷ ಒಡ್ಡಿ ಲೈಕ್ ಅಥವಾ ಶೇರ್ ಮಾಡುವಂತೆ ಮಾಡುತ್ತಾರೆ. " 2,000 ಅದೃಷ್ಟವಂತರಿಗೆ ವರ್ಷವಿಡೀ ಉಚಿತ ಏರ್ ಟಿಕೆಟ್ ನೀಡಲಾಗುವುದು " ಇತ್ಯಾದಿ ಆಕರ್ಷಕ ಕೊಡುಗೆಗಳ ಆಮಿಷ ಒಡ್ಡುತ್ತಾರೆ. ಈಗಾಗಲೇ ಇದಕ್ಕೆ ಸಾವಿರಾರು ಮಂದಿ ಶೇರ್, ಲೈಕ್ ಮಾಡಿದ್ದಾರೆ.
ಆದರೆ ಅಂತಹ ಯಾವುದೇ ಕೊಡುಗೆಯನ್ನು ನಾವು ನೀಡುತ್ತಿಲ್ಲ ಎಂದು ಎಮಿರೇಟ್ಸ್ ಖಚಿತಪಡಿಸಿದೆ. ನಾವು ಯಾವುದೇ ಸ್ಪರ್ಧೆ ನಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕವೇ ಏರ್ಪಡಿಸುತ್ತೇವೆ ಎಂದು ಸಂಸ್ಥೆಯ ವಕ್ತಾರ ಗಲ್ಫ್ ನ್ಯೂಸ್ ಗೆ ಹೇಳಿದ್ದಾರೆ.
ಈ ವಂಚಕ ವಿಧಾನವನ್ನು ' ಲೈಕ್ ಫಾರ್ಮಿನ್ಗ್ ' ಎಂದು ಹೇಳಲಾಗುತ್ತದೆ. ಇದರಲ್ಲಿ ಸೈಬರ್ ವಂಚಕರು ಕೇವಲ ಶೇರ್ ಹಾಗು ಲೈಕ್ ಗಳಿಸಲು ಫೇಸ್ ಬುಕ್ ಪೇಜ್ ಗಳನ್ನು ಮಾಡುತ್ತಾರೆ. ಫೇಸ್ ಬುಕ್ ಮಾನದಂಡಗಳ ಪ್ರಕಾರ ಈ ಪೇಜ್ ಸಾಕಷ್ಟು ಖ್ಯಾತಿ ಪಡೆದು ಲೈಕ್ಸ್ ಹಾಗು ಶೇರ್ ಪಡೆದ ಮೇಲೆ ಇದರ ದುರ್ಬಳಕೆ ಮಾಡುತ್ತಾರೆ. ಇದರ ಮೂಲಕ ಜನರ ಮಾಹಿತಿ ಕಲೆ ಹಾಕುವುದು, ಮಾಲ್ವೇರ್ ಗಳನ್ನು ಹರಡುವುದು, ಇತರ ಹಾನಿಕಾರಕ ಚಟುವಟಿಕೆ ನಡೆಸುವುದು ಮತ್ತು ಸೈಬರ್ ಕ್ರಿಮಿನಲ್ ಗಳಿಗೆ ಇದನ್ನು ಮಾರುವುದು ಇತ್ಯಾದಿ ಮಾಡುತ್ತಾರೆ.
ಸ್ಪರ್ಧೆಯ ಹೆಸರಲ್ಲಿ ವಿಲಾಸಿ ಕಾರು, ಉಚಿತ ವಿಮಾನ ಟಿಕೆಟ್ , ಫ್ಲಾಟ್ ಇತ್ಯಾದಿ ದುಬಾರಿ ಉಡುಗೊರೆಯನ್ನು ಬಹುಮಾನವಾಗಿ ನೀಡುವ ಆಮಿಷ ಒಡ್ಡುವುದು ಈ ವಂಚಕರ ಸಾಮಾನ್ಯ ವಿಧಾನ. ಈ ಬಗ್ಗೆ ಎಲ್ಲ ಫೇಸ್ ಬುಕ್ ಬಳಕೆದಾರರು ಎಚ್ಚರವಾಗಿರಬೇಕಿದೆ.