ಬಂದಿದೆ ಜೀವ ತಿನ್ನುವ ಝಿಕಾ; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಜಿನಿವಾ,ಜ.29: ಸೊಳ್ಳೆಯಿಂದ ಹರಡುವ ಮಾರಕ ಝಿಕಾ ವೈರಸ್‌ನ ಭೀತಿ ತೀವ್ರವಾಗಿದ್ದು, ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಿಗೆ ಮನವಿ ಮಾಡಿದೆ.
ಝಿಕಾ ವೈರಸ್ ನ ಪರಿಣಾಮ ಡೆಂಗ್ ಮತ್ತು ಚಿಕೂನ್ ಗುನ್ಯಾಗಿಂತಲೂ ಅಪಾಯಕಾರಿಯಾಗಿದೆ.ಈ ವೈರಸ್ ಮಕ್ಕಳ ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಹಜಕ್ಕಿಂತ ಚಿಕ್ಕತಲೆಯ ಮಕ್ಕಳು ಜನಿಸುತ್ತಿದ್ದಾರೆ.
ಲ್ಯಾಟಿನ್ ಅಮೆರಿಕದ ಸುಮಾರು 20 ದೇಶಗಳಲ್ಲಿ ಝಿಕಾ ವೈರಸ್ ಹರಡಿದ್ದು, ಅಮೆರಿಕ ಖಂಡದ ಕೆನಡಾ ಮತ್ತು ಚಿಲಿ ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ.
ಕಳೆದ ಅಕ್ಟೋಬರ್‌ನಿಂದ ಸುಮಾರು 4,180 ಮೈಕ್ರೊಸೆಫಲಿಯ ಶಂಕಿತ ಪ್ರಕರಣಗಳು ವರದಿಯಾಗಿವೆ. ಚಿಕ್ಕ ತಲೆಯುಳ್ಳ ಅಸಹಜ ಮಕ್ಕಳ ಜನನಕ್ಕೆ ಝಿಕಾ ವೈರಸ್ ಕಾರಣವೇ ಎಂಬುದಕ್ಕೆ ಖಚಿತ ಉತ್ತರವಿಲ್ಲ. ಈ ಸಮಸ್ಯೆಯ ಗಂಭೀರತೆ ಸಹ ಇನ್ನೂ ಸ್ಪಷ್ಟಗೊಂಡಿಲ್ಲ.
ಉಗಾಂಡದಲ್ಲಿ 1947ರಲ್ಲಿ ಮೊದಲು ಝಿಕಾ ಕಾಣಿಸಿಕೊಂಡಿತು. ಬ್ರೆಝಿಲ್‌ಗೆ ಮೇ 2015ರಲ್ಲಿ ಧಾಳಿ ಮಾಡಿತು. ಝಿಕಾ ಇದೀಗ ಪ್ರಪಂಚದ ನಾನಾ ದೇಶಗಳಿಗೆ ಹರಡಿದೆ.