ಬ್ರಿಟಿಷ್ ಲೇಖಕ ಕಝುವೊ ಇಶಿಗುರೋಗೆ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್
ಸ್ಟಾಕ್‌ಹೋಮ್, ಅ.5: ‘ರಿಮೈನ್ಸ್ ಆಫ್ ದಿ ಡೇ’ ಕೃತಿಯ ಲೇಖಕ, ಜಪಾನ್ ಮೂಲದ ಬ್ರಿಟಿಷ್ ಸಾಹಿತಿ ಕಝುವೊ ಇಷಿಗುರೊ ಸಾಹಿತ್ಯದ ನೋಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಸ್ವೀಡನ್‌ನ ನೋಬೆಲ್ ಅಕಾಡೆಮಿ ಘೋಷಿಸಿದೆ.
ಸಣ್ಣಪ್ರಾಯದಲ್ಲೇ ಬ್ರಿಟನ್‌ಗೆ ತೆರಳಿ ಅಲ್ಲೇ ನೆಲೆಸಿರುವ ಕಝುವೊ ಇಷಿಗುರೊ ಅವರ ಸಾಹಿತ್ಯಕೃತಿಗಳು ಅನುಸ್ಮರಣೆಯ ಗುಣ ಹೊಂದಿದ್ದು ಸ್ವಭ್ರಾಂತಿ ಹಾಗೂ ಸಮಯದ ಕುರಿತ ವಿಶ್ಲೇಷಣೆಯನ್ನು ಒಳಗೊಂಡಿದೆ ಎಂದು ಅಕಾಡೆಮಿ ತಿಳಿಸಿದೆ.
ಜೇನ್ ಆಸ್ಟನ್, ಫ್ರಾಂಝ್ ಕಾಫ್ಕಾ ಹಾಗೂ ಕಾಮೆಡಿ ಶೈಲಿಯನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿದರೆ ನೀವು ಇಷಿಗುರೊ ಅವರನ್ನು ಪಡೆಯಬಹುದು ಎಂದು ಸ್ವೀಡನ್‌ನ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಸಾರಾ ಡೇನಿಯಸ್ ತಿಳಿಸಿದ್ದಾರೆ. 1989ರಲ್ಲಿ ‘ಮ್ಯಾನ್ ಬೂಕರ್ ’ಪುರಸ್ಕಾರಕ್ಕೆ ಪಾತ್ರರಾಗಿದ್ದ ಇಷಿಗುರೊ ಅವರ ಕೃತಿ ಆಧರಿಸಿದ ಸಿನೆಮ ಆಸ್ಕರ್ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿತ್ತು.
ಇಷಿಗುರೊ ತಮ್ಮ ‘ಎ ಪೇಲ್ ವ್ಯೆ ಆಫ್ ದಿ ಹಿಲ್ಸ್’ ಕೃತಿಯಿಂದಾಗಿ ಗಮನ ಸೆಳೆದಿದ್ದು, ವಿಶ್ವಯುದ್ದದ ಬಳಿಕದ ಬ್ರಿಟನ್‌ನಲ್ಲಿ ದಮನಕ್ಕೊಳಗಾದ ನೌಕರನ ಕತೆಯನ್ನು ಒಳಗೊಂಡಿದ್ದು ಈ ಕೃತಿಯಾಧಾರಿತ ಸಿನೆಮಾದಲ್ಲಿ ಆ್ಯಂಥನಿ ಹಾಪ್ಕಿನ್ಸ್ ಹಾಗೂ ಎಮ್ಮಾ ಥಾಮ್‌ಸನ್ ಪ್ರಧಾನ ಭೂಮಿಕೆಯಲ್ಲಿದ್ದರು.
ಪ್ರಶಸ್ತಿಯು 1.1 ಮಿಲಿಯನ್ ಡಾಲರ್ ಮೊತ್ತದ ಬಹುಮಾನವನ್ನು ಒಳಗೊಂಡಿರುತ್ತದೆ.