ಅಮೆರಿಕದ ಅರ್ಥಶಾಸ್ತ್ರಜ್ಞ ರಿಚರ್ಡ್ ಥಲೇರ್ ಗೆ ಅರ್ಥಶಾಸ್ತ್ರದ ನೊಬೆಲ್
ಸ್ಟಾಕ್‌ಹೋಂ (ಸ್ವೀಡನ್), ಅ. 9: ಅರ್ಥಶಾಸ್ತ್ರಕ್ಕಾಗಿ ನೀಡಲಾಗುವ 2017ರ ನೊಬೆಲ್ ಪ್ರಶಸ್ತಿಯನ್ನು ಅಮೆರಿಕದ ಅರ್ಥಶಾಸ್ತ್ರಜ್ಞ ರಿಚರ್ಡ್ ತೇಲರ್‌ಗೆ ನೀಡಲಾಗಿದೆ ಎಂದು ರಾಯಲ್ ಸ್ವೀಡಿಶ್ ಅಕಾಡಮಿ ಆಫ್ ಸಯನ್ಸಸ್ ಸೋಮವಾರ ಘೋಷಿಸಿದೆ.
ಮಾನವ ಗುಣಗಳು ಮಾರುಕಟ್ಟೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ವಿವರಿಸುವ ವರ್ತನಾತ್ಮಕ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ನೀಡಿರುವ ದೇಣಿಗೆಗಾಗಿ ಅವರಿಗೆ ಈ ಪ್ರಶಶ್ತಿ ನೀಡಲಾಗಿದೆ.
‘ನಜ್’ (ಪ್ರೇರೇಪಿಸುವ) ಅರ್ಥಶಾಸ್ತ್ರದ ಕಲ್ಪನೆಯನ್ನು ಪ್ರಚಾರಕ್ಕೆ ತಂದವರು ತೇಲರ್. ಅಗತ್ಯ ಇಲ್ಲದಿದ್ದರೂ, ಲಾಭ ಇದೆ ಎಂದು ಕಂಡುಬಂದರೆ ವಸ್ತುಗಳತ್ತ ಮಾನವರ ಮನಸ್ಸು ಸೂಕ್ಷ್ಮವಾಗಿ ಒಲಿಯುತ್ತದೆ ಎನ್ನುವುದನ್ನು ಈ ಮಾದರಿಯ ಅರ್ಥಶಾಸ್ತ್ರ ವಿವರಿಸುತ್ತದೆ. ಇದೇ ವಸ್ತುವನ್ನು ಆಧರಿಸಿ ಅವರು 2008ರಲ್ಲಿ ಇನ್ನೊಬ್ಬ ಲೇಖಕರ ಜೊತೆಗೆ ಪುಸ್ತಕವೊಂದನ್ನು ಬರೆದಿದ್ದರು. ಆ ಪುಸ್ತಕವು ಜಗತ್ತಿನಾದ್ಯಂತದ ನೀತಿ ನಿರ್ಮಾಪಕರ ಗಮನ ಸೆಳೆದಿತ್ತು.
‘‘ಒಟ್ಟಾರೆಯಾಗಿ, ರಿಚರ್ಡ್ ತೇಲರ್‌ರ ದೇಣಿಗೆಗಳು, ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹಣಕಾಸು ಮತ್ತು ಮಾನಸಿಕ ವಿಶ್ಲೇಷಣೆಗಳ ನಡುವೆ ಸಮನ್ವಯತೆ ಏರ್ಪಡಿಸುತ್ತವೆ’’ ಎಂದು ಅಕಾಡಮಿ ತಿಳಿಸಿದೆ.
ತೇಲರ್ 9 ಮಿಲಿಯ ಸ್ವೀಡಿಶ್ ಕ್ರೌನ್ (ಸುಮಾರು 7.20 ಕೋಟಿ ರೂಪಾಯಿ) ನಗದನ್ನು ಬಹುಮಾನ ರೂಪದಲ್ಲಿ ಪಡೆಯಲಿದ್ದಾರೆ.