ಕಿರ್ಕುಕ್ ಹಸ್ತಾಂತರಿಸಲು ಕುರ್ದ್‌ಗಳಿಗೆ ಇರಾಕ್ ಗಡುವು
ಐಸಿಸ್‌ನಿಂದ ವಿಮೋಚನೆಗೊಂಡ ಪ್ರಾಂತದಲ್ಲಿ ಮತ್ತೆ ಸಂಘರ್ಷ ಪರಿಸ್ಥಿತಿ: ಸಂಧಾನಕ್ಕೆ ಅಮೆರಿಕ ತೀವ್ರ ಪ್ರಯತ್ನ
ಮಾರಿಯಾಮ್ ಬೀಕ್(ಇರಾಕ್),ಅ.15: ಐಸಿಸ್ ಭಯೋತ್ಪಾದಕ ಗುಂಪಿನ ವಿರುದ್ಧ ಸಮರದಲ್ಲಿ ತನ್ನೊಂದಿಗೆ ಕೈಜೋಡಿಸಿದ್ದ ಜೊತೆಗಾರರ ನಡುವೆ ಘರ್ಷಣೆ ತಲೆದೋರುವುದನ್ನು ತಪ್ಪಿಸಲು ಅಮೆರಿಕವು ಹರಸಾಹಸ ನಡೆಸುತ್ತಿರುವಂತೆಯೇ ಇತ್ತ ಇರಾಕ್‌ನ ವಿವಾದಗ್ರಸ್ತ ಕಿರ್ಕುಕ್ ಪ್ರಾಂತದಲ್ಲಿ ಸಾವಿರಾರು ಇರಾಕಿ ಪಡೆಗಳು, ಕುರ್ದಿಷ್ ಬಂಡುಕೋರರ ನಡುವೆ ಯುದ್ಧದ ಪರಿಸ್ಥಿತಿಯೇರ್ಪಟ್ಟಿದೆ.
ಕಳೆದ ಮೂರು ವರ್ಷಗಳಿಂದ ಐಸಿಸ್ ಬಂಡುಕೋರರ ವಿರುದ್ಧ ಹೋರಾಡಿ ತಾವು ವಶಪಡಿಸಿಕೊಂಡ ನೆಲೆಗಳನ್ನು ಸೋಮವಾರದೊಳಗೆ ತಮ್ಮ ಸ್ವಾಧೀನಕ್ಕೆ ಒಪ್ಪಿಸಲು ಇರಾಕಿ ಪಡೆಗಳು ಗಡುವು ವಿಧಿಸಿರುವುದಾಗಿ ಕುರ್ದ್ ಬಂಡುಕೋರರು ತಿಳಿಸಿದ್ದಾರೆ.
ಕುರ್ದ್ ಪಡೆಗಳ ಸ್ವಾಧೀನದಲ್ಲಿರುವ ಪ್ರದೇಶಗಳನ್ನು ತಮಗೊಪ್ಪಿಸುವಂತೆ ಮೊದಲಿಗೆ ಇರಾಕಿ ಪಡೆಗಳು ರವಿವಾರ 2:00ಗಂಟೆಯ ಅಂತಿಮ ಗಡುವನ್ನು ವಿಧಿಸಿತ್ತು. ಆನಂತರ ಅದನ್ನು 24 ತಾಸುಗಳ ಅವಧಿಗೆ ವಿಸ್ತರಿಸಿರುವುದಾಗಿ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕುರ್ದ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರದಂದು ಇರಾಕಿ ರಾಷ್ಟ್ರಧ್ವಜವನ್ನು ಹೊಂದಿರುವ ಸೇನಾವಾಹನಗಳು ಕಿರ್ಕುಕ್ ನಗರದ ದಕ್ಷಿಣ ಭಾಗದಲ್ಲಿರುವ ಹೊರವಲಯದ ನದಿದಂಡೆಯಲ್ಲಿ ನಿಯೋಜಿತವಾಗಿರುವುದಾಗಿ ಪತ್ರಿಕಾ ವರದಿಗಳು ತಿಳಿಸಿವೆ.
ಅದರ ಎದುರು ದಂಡೆಯಲ್ಲಿ ಕುರ್ದಿಶ್ ಪೆಶ್‌ಮಾರ್ಗ ಹೋರಾಟಗಾರರು ಕಾಂಕ್ರಿಟ್ ಬಂಕರ್‌ಗಳಲ್ಲಿ ಯುದ್ಧಸನ್ನದ್ಧರಾಗಿದ್ದಾರೆಂದು ಅವು ಹೇಳಿವೆ. ಆ ಪ್ರದೇಶದಲ್ಲಿ ಕುರ್ದಿಶ್ ಬಂಡುಕೋರ ಗುಂಪು ಪೇಶ್‌ಮಾರ್ಗದ ಕೆಂಪು, ಬಿಳಿ, ಹಸಿರು ಹಾಗೂ ಹಳದಿ ಬಣ್ಣದ ಧ್ವಜ ಹಾರಾಡುತ್ತಿರುವುದು ಕಂಡುಬಂದಿದೆ.
ನಮ್ಮ ಪಡೆಗಳು ಮುಂದೆ ಸಾಗುತ್ತಿಲ್ಲ. ನಾವು ನಮ್ಮ ಸೇನಾ ವರಿಷ್ಠರಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಇರಾಕಿ ಸೇನಾಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಮಧ್ಯೆ ಸ್ವತಃ ಕುರ್ದ್ ಜನಾಂಗೀಯರೇ ಆಗಿರುವ ಇರಾಕಿ ಅಧ್ಯಕ್ಷ ಫುವಾದ್ ಮಸೂಮ್ ಅವರು ಕುರ್ದ್ ನಗರವಾದ ಸುಲೈಮಾನಿಯಾದಲ್ಲಿ ಕುರ್ದ್ ನಾಯಕರ ಜೊತೆ ಬಿಕ್ಕಟ್ಟು ನಿವಾರಣೆಗಾಗಿ ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ತಿಳಿದುಬಂದಿದೆ.
ಕಿರ್ಕುಕ್ ಪ್ರಾಂತದ ಗವರ್ನರ್ ನಜ್ಮ್ ಎದ್ದಿನ್ ಕರೀಮ್ ಅವರನ್ನು ಇರಾಕ್ ಸರಕಾರ ಉಚ್ಚಾಟಿಸಿದ್ದರೂ, ಅವರು ತನ್ನ ಹುದ್ದೆಯನ್ನು ತೊರೆಯಲು ನಿರಾಕರಿಸಿದ್ದಾರೆ. ಕಿರ್ಕುಕ್‌ನನ್ನು ಕುರ್ದ್ ಪಡೆಗಳು ತೆರವುಗೊಳಿಸಬೇಕು ಹಾಗೂ ಪ್ರಾಂತದ ಮೇಲಿನ ನಿಯಂತ್ರಣವನ್ನು ಹಾಗೂ ಅದರ ನೈಸರ್ಗಿಕ ಸಂಪನ್ಮೂಲವನ್ನು ತಮಗೆ ಹಸ್ತಾಂತರಿಸಬೇಕೆಂಬ ಇರಾಕಿ ಅರೆಸೈನಿಕ ಪಡೆಗಳ ಬೇಡಿಕೆ ಸಂಪೂರ್ಣ ಅಸ್ವೀಕಾರಾರ್ಹವೆಂದು ಅವರು ಹೇಳಿದ್ದಾರೆ.
ಪ್ರತ್ಯೇಕ ರಾಷ್ಟ್ರದ ಸ್ಥಾಪನೆಯನ್ನು ಬೆಂಬಲಿಸುವ ಜನಾಭಿಪ್ರಾಯ ಸಂಗ್ರಹವನ್ನು ಕುರ್ದ್ ಹೋರಾಟಗಾರರು ಸೆಪ್ಟಂಬರ್ 25ರಂದು ನಡೆಸಿದ ಬಳಿಕ ಇರಾಕ್ ಸರಕಾರ ಹಾಗೂ ಕುರ್ದಿಶ್ ನಾಯಕರ ನಡುವೆ ಗಂಭೀರ ಬಿಕ್ಕಟ್ಟು ತಲೆದೋರಿದೆ.