ಅಮೆರಿಕನ್ ಕಥೆಗಾರ ಜಾರ್ಜ್ ಸಾಂಡರ್ಸ್ ಗೆ 'ಮ್ಯಾನ್ ಬೂಕರ್ ಪ್ರಶಸ್ತಿ'
ವಾಷಿಂಗ್ಟನ್, ಅ.18: ಅಮೆರಿಕಾದ ಖ್ಯಾತ ಸಣ್ಣ ಕಥೆಗಾರ ಜಾರ್ಜ್ ಸಾಂಡರ್ಸ್ ಅವರ ಕಾದಂಬರಿ `ಲಿಂಕನ್ ಇನ್ ದಿ ಬಾರ್ಡೊ' ಈ ಬಾರಿಯ ಪ್ರತಿಷ್ಠಿತ 'ಮ್ಯಾನ್ ಬೂಕರ್' ಪ್ರಶಸ್ತಿ ಗಳಿಸಿದೆ. ಸತ್ಯ ಘಟನೆಯಾಧರಿತ ಈ ಕೃತಿಯು 1862ರಲ್ಲಿ ಅಬ್ರಹಾಂ ಲಿಂಕನ್ ಅವರು ತಮ್ಮ 11 ವರ್ಷದ ಪುತ್ರ ವಿಲ್ಲೀಯನ್ನು ವಾಷಿಂಗ್ಟನ್ನಿನಲ್ಲಿ ಸಮಾಧಿ ಮಾಡಿದ ಘಟನೆಯನ್ನಾಧರಿತ ಕಥೆ ಹೊಂದಿದೆ.
ಟೆಕ್ಸಾಸ್ ಮೂಲದ ಈ 58 ವರ್ಷದ ಲೇಖಕ ಈಗಾಗಲೇ ಆರು ಕಥಾ ಸಂಗ್ರಹಗಳನ್ನು ಹೊರ ತಂದಿದ್ದಾರೆ. ಮೂಲತಃ ಭೂಭೌತಶಾಸ್ತ್ರಜ್ಞರಾಗಿರುವ ಇವರು ತಾಂತ್ರಿಕ ಬರಹಗಾರರಾಗಿದ್ದರು ಹಾಗೂ ನಂತರ ಸಣ್ಣ ಕಥೆಗಳನ್ನು ಬರೆಯಲು ಆರಂಭಿಸಿದ್ದರು. ಅವರಿಗೆ 2006ರಲ್ಲಿ ಮೆಕ್ ಆರ್ಥರ್ ಜೀನಿಯಸ್ ಗ್ರ್ಯಾಂಟ್ ಹಾಗೂ ಗುಗ್ಗೆನ್ಹೀಮ್ ಫೆಲ್ಲೋಶಿಪ್ ದೊರಕಿತ್ತು.
ಬೂಕರ್ ಪ್ರಶಸ್ತಿ ಪಡೆದ ಎರಡನೇ ಅಮೆರಿಕನ್ ಪ್ರಜೆಯಾಗಿದ್ದಾರೆ ಜಾರ್ಜ್ ಸಾಂಡರ್ಸ್. ಕಳೆದ ವರ್ಷ ಇನ್ನೊಬ್ಬ ಅಮೆರಿಕನ್ ಪೌಲ್ ಬೆಟ್ಟಿ ಈ ಪ್ರಶಸ್ತಿಗೆ ಪಾತ್ರರಾಗಿದ್ದರು. ಈ ಬಾರಿಯ ಪ್ರಶಸ್ತಿಗಾಗಿ ಒಟ್ಟು 144 ಕಾದಂಬರಿಗಳು ಬಂದಿದ್ದವು. ಜಾರ್ಜ್ ಸಾಂಡರ್ಸ್ ಅವರಿಗೆ ಪ್ರಶಸ್ತಿ ಜತೆ 50,000 ಪೌಂಡ್ ನಗದು ಬಹುಮಾನ ದೊರೆಯಲಿದೆ.