ಮಾಧ್ಯಮ ನಿಷ್ಠೆ ಉಳಿಸಿಕೊಂಡ ಸಾಹಿತಿ ಕೆ.ಟಿ.ಗಟ್ಟಿ: ಎಚ್.ಎಸ್.ವೆಂಕಟೇಶಮೂರ್ತಿ
ಬೆಂಗಳೂರು, ಜ.21: ಮಾಧ್ಯಮ ನಿಷ್ಠೆ ಉಳಿಸಿಕೊಂಡು ಸಾಹಿತ್ಯ ರಚನೆ ಮಾಡುವ ಮೂಲಕ ಕೆ.ಟಿ.ಗಟ್ಟಿ ಜನಪ್ರಿಯ ಸಾಹಿತಿಯಾಗಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದು ಸಾಹಿತಿ ಡಾ.ಎಚ್.ಎಸ್.ವೆಂಕಟೇಮೂರ್ತಿ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನದಿಂದ ಆಯೋಜಿಸಿದ್ದ ಕೆ.ಟಿ.ಗಟ್ಟಿ ಅವರ ಆತ್ಮಕಥೆ ‘ತೀರ’, ನಂದಿನಿ ವಿಶ್ವನಾಥ್ ಹೆದ್ದುರ್ಗ ಅವರ ‘ಒಳಸೆಲೆ’ ಕವನ ಸಂಕಲನ, ಬಿ.ಜನಾರ್ದನ ಭಟ್ ಅವರ ‘ಕಲ್ಲು ಕಂಬವೇರಿದ ಹುಂಬ’ ಕಾದಂಬರಿ ಹಾಗೂ ಆನಂದ ಝಂಕರವಾಡ ಅನುವಾದಿಸಿರುವ ‘ಓದುವದೆಂದರೆ’ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತ್ಯವು ಮಾಧ್ಯಮ ನಿಷ್ಠೆ ಉಳಿಸಿಕೊಂಡು ಜನಪ್ರಿಯವಾಗಬೇಕು. ಈ ನಿಟ್ಟಿನಲ್ಲಿ ಸಾಹಿತಿ ಕೆ.ಟಿ.ಗಟ್ಟಿ ತಮ್ಮ ಬರಹದ ಮೂಲಕ ಅದನ್ನು ಸಾಭೀತು ಮಾಡಿದ್ದಾರೆ ಎಂದು ನುಡಿದರು.
ಸಾಹಿತಿ ಕೆ.ಟಿ.ಗಟ್ಟಿ ತನಗೆ ಅನಿಸುವುದನ್ನು ನೇರವಾಗಿ ಹೇಳಿಬಿಡುತ್ತಾರೆ. ತಮ್ಮ ಸಾಹಿತ್ಯದ ಮೂಲಕ ತಮ್ಮ ಖಾಸಗಿ ಬದುಕನ್ನು ಮುಚ್ಚು ಮರೆಯಿಲ್ಲದೆ ಎಲ್ಲವನ್ನೂ ಬಿಚ್ಚಟ್ಟಿದ್ದಾರೆ. ನವ್ಯ ಸಾಹಿತಿಗಳು ಬೇರೆ ಬೇರೆ ದಾರಿಯಲ್ಲಿ ಹೊಸ ತಲೆಮಾರಿನ ಓದುಗರನ್ನು ಅಚ್ಚರಿಯಲ್ಲಿ ಕೆಡಹುತ್ತಿದ್ದ ಕಾಲಘಟ್ಟದಲ್ಲಿ ತಮ್ಮದೇ ಆದ ಜಾಗ ಮಾಡಿಕೊಂಡು, ತಮ್ಮದೇ ಓದುಗ ವರ್ಗವನ್ನು ಸೃಷ್ಟಿಸಿ ಕಾದಂಬರಿಗಳ ಮೂಲಕವೇ ಹೊಸ ಸಾಹಿತ್ಯ ಪ್ರಕಾರವನ್ನು ಸೃಷ್ಟಿಸಿದವರು ಗಟ್ಟಿ ಎಂದು ನುಡಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಸಮಾನರು ಎಂಬ ಮನೋಭಾವ ಬೆಳೆಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಜನಾರ್ದನ್ ಭಟ್ ರಚಿಸಿರುವ ಕೃತಿಯು ಏಕಮುಖವಾಗದೇ, ಬಹು ಆಯಾಮಗಳಲ್ಲಿ ಹರಡಿಕೊಂಡಿದೆ. ಸಂಕೀರ್ಣ ಸಂಬಂಧಗಳನ್ನು ತುಂಬಿಕೊಂಡಿದೆ. ಇತಿಹಾಸ, ಪುರಾಣ ಸೇರಿಕೊಂಡಿದ್ದು, ಸಂಶೋಧನೆ ಮಾಡುವವರಿಗೆ ಇರುವ ಬಿಕ್ಕಟ್ಟುಗಳ ಕುರಿತು ಕಾದಂಬರಿ ಅಭಿವ್ಯಕ್ತಪಡಿಸಿದೆ ಎಂದು ವಿಮರ್ಶಿಸಿದರು.
ಸಾಹಿತಿ ಟಿ.ಯಲ್ಲಪ್ಪ ಒಳಸೆಲೆ ಕವನ ಸಂಕಲನ ಕುರಿತು ಮಾತನಾಡಿ, ಮಹಿಳಾ ಸ್ವಾತಂತ್ರ, ಸಮಾನತೆ ಹಾಗೂ ಸ್ತ್ರಿತನವನ್ನು ಹುಡುಕುವ ಪ್ರಯತ್ನ ಕವಿಯತ್ರಿ ನಂದಿನಿ ಮಾಡಿದ್ದಾರೆ. ಮಹಿಳೆಯರ ಸಮಸ್ಯೆಗಳನ್ನು ಗುರುತಿಸದ ಹಾಗೂ ಸ್ವಾಯತ್ತದ ಬಗೆಗಿನ ಚಿಂತನೆಗಳನ್ನು ಅಭಿವ್ಯಕ್ತಪಡಿಸಿದ್ದಾರೆ ಎಂದು ನುಡಿದರು.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀ ಮೇಲೆ ಹೇರಲ್ಪಟ್ಟ ಸಂಕೋಲೆಗಳಿಂದ ಬಿಡಿಸಿಕೊಳ್ಳುವ ಪ್ರಯತ್ನದ ಸಂಕೇತಗಳು, ಸ್ವಚ್ಛಂದವಾಗಿ ಹೊರ ಬರಲು ಪ್ರಯತ್ನ ಮಾಡುವ ಹೆಣ್ಣಿನ ಸಂಕಷ್ಟಗಳ ಕುರಿತು ವೈವಿದ್ಯತೆಯ ದೃಷ್ಟಿಯಿಂದ ಕೂಡಿದ ಕವಿತೆಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ಆನಂದ್ ಅವರ ಅನುವಾದ ಮಾಡಿರುವ ಕೃತಿ ಆದಿ ಮಾನವನ ಗ್ರಹಿಕೆಯು ಮೂಲವಾದ ಚಿತ್ರಲಿಪಿಯಿಂದ ಆರಂಭವಾಗಿ ಇಂದಿನ ಆಧುನಿಕ ಯುಗದವರೆಗೂ ನಡೆದಿರುವ ಬದಲಾವಣೆ ಹಾಗೂ ಸಂವಹನ ಕುರಿತು ದೀರ್ಘವಾಗಿ ವಿಶ್ಲೇಷಣೆ ಮಾಡಿದ್ದಾರೆ. ಒಟ್ಟಾರೆಯಾಗಿ ಓದಿನಿಂದಾಗುವ ಸಂಬಂಧಗಳ ಕುರಿತು ವಿವರಿಸಲಾಗಿದೆ ಎಂದರು.
ಭೌದ್ದಿಕ ಭಾರದಿಂದ ಓದುವುದರಿಂದ ಹಿಂಜರಿಯುವ ಸಂದರ್ಭದಲ್ಲಿ ಹೇಗೆ ಅದನ್ನು ದೂರ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು ಎಂಬ ವೈಜ್ಞಾನಿಕ ಪ್ರಬಂಧಗಳನ್ನು ಓದುಗರಿಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಓದುವದೆಂದರೆ ಕೃತಿ ಓದುಗರಿಗೆ ವಿಶೇಷವಾದ ಸಂಬಂಧಗಳನ್ನು ಕಲ್ಪಿಸಿಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕವಿ ಬಿ.ಆರ್.ಲಕ್ಷ್ಮಣ್‌ರಾವ್, ಕವಿಯತ್ರಿ ನಂದಿನಿ ವಿಶ್ವನಾಥ್ ಹೆದ್ದುರ್ಗ, ಲೇಖಕ ಬಿ.ಜನಾರ್ದನ ಭಟ್, ಲೇಖಕ ಆನಂದ ಝಂಕರವಾಡ ಉಪಸ್ಥಿತರಿದ್ದರು.