ವಾಟ್ಸ್‌ಆ್ಯಪ್ ನಿಂದಲೇ ವಾಟ್ಸ್‌ಆ್ಯಪ್ ಅನ್ನು ಸೋಲಿಸಲು ಹೊರಟ ಬೆಂಗಳೂರು ವಿವಿ !
ಬೆಂಗಳೂರು, ಎ. 25: ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಗೆ ವಾಟ್ಸ್ ಅಪ್ ಬಳಕೆಯಾಗುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದಕ್ಕೆ ಪ್ರತಿತಂತ್ರ ಹೂಡಿ ಈ ತಂತ್ರವನ್ನು ವಿಫಲಗೊಳಿಸಲು ವಾಟ್ಸ್ ಅಪ್ ಬಳಸಿಕೊಳ್ಳಲು ಬೆಂಗಳೂರು ವಿಶ್ವವಿದ್ಯಾನಿಲಯ ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ವಾಟ್ಸ್ ಅಪ್ ಬಳಸಿಕೊಳ್ಳುವುದು ವಿವಿ ಚಿಂತನೆ.
ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆಯ ಕವರ್ ತೆರೆಯುವ ಪ್ರಕ್ರಿಯೆಯ ವೀಡಿಯೊ ಚಿತ್ರೀಕರಣ ಮಾಡಿ ಅದನ್ನು ವಾಟ್ಸ್ ಅಪ್‌ನಲ್ಲಿ ಅಪ್‌ಲೋಡ್ ಮಾಡಲು ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದಾರೆ.
ಮೇ 10ರಿಂದ 182 ಕೇಂದ್ರಗಳಲ್ಲಿ ನಡೆಯುವ ಪದವಿ ಪರೀಕ್ಷೆಯಲ್ಲಿ ಈ ಹೊಸ ಪ್ರಯೋಗ ನಡೆಸಲು ವಿವಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಪ್ರಶ್ನೆಪತ್ರಿಕೆ ಕವರನ್ನು ಅಕ್ರಮವಾಗಿ ತೆರೆಯುವ ಮೂಲಕವೇ ಬಹುತೇಕ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ವಿವಿ ಮುಂದಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಬಂಡಲ್‌ಗಳನ್ನು ಮೇಲ್ವಿಚಾರಕರು, ವಿಶೇಷ ತಂಡ, ಮುಖ್ಯ ಅಧೀಕ್ಷಕ, ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಯೊಬ್ಬರ ಸಮ್ಮುಖದಲ್ಲಿ ತೆರೆಯಲಾಗುವುದು. ಬಂಡಲ್ ಸಮರ್ಪಕವಾಗಿದೆಯೇ ಎಂದು ವಿದ್ಯಾರ್ಥಿಗಳು ಪರೀಕ್ಷಿಸಿ, ಇಡೀ ಪ್ರಕ್ರಿಯೆಯನ್ನು ಸೆಲ್‌ಫೋನ್‌ಗಳಲ್ಲಿ ವೀಡಿಯೊ ಚಿತ್ರೀಕರಣ ಮಾಡಿ ವಾಟ್ಸ್ ಅಪ್ ಮೂಲಕ ಅಧಿಕಾರಿಗಳಿಗೆ ಕಳುಹಿಸಬಹುದು. ವೀಡಿಯೊ ಚಿತ್ರೀಕರಣದ ಬಳಿಕ ಮೊಬೈಲ್‌ಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಪರೀಕ್ಷೆ ಮುಗಿದ ಬಳಿಕ ವಾಪಾಸು ನೀಡುವರು. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.
ಈ ಪರೀಕ್ಷೆಯಲ್ಲಿ 2.5 ಲಕ್ಷ ಹೊಸ ವಿದ್ಯಾರ್ಥಿಗಳು ಸೇರಿದಂತೆ 3.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ಪಿಯು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದು, ಅದು ವಿವಿಯಲ್ಲೂ ಮರುಕಳಿಸಬಾರದು ಎನ್ನುವುದು ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಹೊಸ ಕ್ರಮಕ್ಕೆ ಮುಂದಾಗಿದೆ ಎಂದು ಮೌಲ್ಯಮಾಪನ ವಿಭಾಗದ ರಿಜಸ್ಟ್ರಾರ್ ಕೆ.ಎನ್.ನಿಂಗೇಗೌಡ ಹೇಳಿದ್ದಾರೆ.