Breaking News ಖ್ಯಾತ ಸಾಮಾಜಿಕ ಕಾರ್ಯಕರ್ತ, ವಾಗ್ಮಿ ಮಹೇಂದ್ರ ಕುಮಾರ್ ನಿಧನ
ಬೆಂಗಳೂರು, ಎ. 25: ಸಾಮಾಜಿಕ ಹೋರಾಟಗಾರ, ಪ್ರಗತಿಪರ ಚಿಂತಕ, ಖ್ಯಾತ ವಾಗ್ಮಿ ಮಹೇಂದ್ರ ಕುಮಾರ್(47) ಅವರು ಶನಿವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮೂಲದ ಮಹೇಂದ್ರಕುಮಾರ್, ರಾಮೇಗೌಡ ಮತ್ತು ಸುನಂದಾ ದಂಪತಿಯ ಕೊನೆಯ ಮಗನಾಗಿದ್ದು, ಪತ್ನಿ ಸುಮಾ, ಪುತ್ರರಾದ ಶಂತನು, ಆರ್ಯ ಸಹಿತ ಬಂಧು-ಮಿತ್ರರು, ಅಭಿಮಾನಿ ಗೆಳೆಯರು ಹಾಗೂ ಅಪಾರ ಸಂಖ್ಯೆಯ ಒಡನಾಡಿಗಳನ್ನು ಅಗಲಿದ್ದಾರೆ.
ಶುಕ್ರವಾರ(ಎ.24) ತಡರಾತ್ರಿ ಮಹೇಂದ್ರ ಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮನೆ ಸಮೀಪದಲ್ಲಿದ್ದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶನಿವಾರ ಬೆಳಗಿನ ಜಾವ 4ಗಂಟೆಯ ಸುಮಾರಿಗೆ ಅಸುನೀಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಹುಟ್ಟೂರು ಕೊಪ್ಪದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ ಮಹೇಂದ್ರ ಕುಮಾರ್ ಅವರು, ಪದವಿಪೂರ್ವ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಮುಗಿಸಿದ್ದಾರೆ. ಕೆಲದಿನಗಳ ಕಾಲ ಮುಂಬೈನಲ್ಲಿದ್ದ ಅವರು, ಊರಿಗೆ ಹಿಂದಿರುಗಿ ಸ್ವಂತ ಉದ್ದಿಮೆ ಆರಂಭಿಸಿದ್ದರು.
ಆ ಬಳಿಕ 2007ರಲ್ಲಿ ಭಜರಂಗದಳದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಸಂಚಾಲಕರಾಗಿ ಕೆಲಸ ಮಾಡಿದ್ದರು. 2008ರಲ್ಲಿ ಬೆಂಗಳೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಚರ್ಚ್ಗಳ ಮೇಲೆ ಸರಣಿ ದಾಳಿ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಅವರು 42 ದಿನಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.
ಮಾಜಿ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡ ಅವರ ಶಿಷ್ಯರಾಗಿದ್ದ ಮಹೇಂದ್ರ ಕುಮಾರ್, ಜೈಲಿನಿಂದ ಹೊರ ಬಂದ ಬಳಿಕ ಭಜರಂಗದಳ ಸೇರಿದಂತೆ ಆರೆಸ್ಸೆಸ್ ನಿಂದ ದೂರವಾದರು. ಅಲ್ಲದೆ, ಸಂಘಪರಿವಾರದ ಕಟು ಟೀಕಾಕಾರರಾಗಿದ್ದ ಅವರು, ಜಾತ್ಯತೀತ ಜನತಾ ದಳ(ಜೆಡಿಎಸ್) ಪಕ್ಷ ಸೇರ್ಪಡೆಯಾದರು.
ಕೆಲ ಸಮಯದ ಬಳಿಕ ಕೊಪ್ಪದಿಂದ ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ್ದ ಮಹೇಂದ್ರ ಕುಮಾರ್, ಜೆಡಿಎಸ್ ತೊರೆದು ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಸಾಮಾಜಿಕ ಚಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 'ನಮ್ಮ ಧ್ವನಿ' ಬಳಗವನ್ನು ತಾವೇ ಹುಟ್ಟುಹಾಕಿ ಸಿಎಎ ಮತ್ತು ಎನ್ಆರ್ ಸಿ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಗಣ್ಯರ ಸಂತಾಪ: 'ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ. ಭಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಾರ್ಥಿಸಿದ್ದಾರೆ.
'ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಜಾತ್ಯತೀತ ಶಕ್ತಿಗಳನ್ನು ಸಂಘಟಿಸಲು ಅವಿರತವಾಗಿ ಶ್ರಮಿಸುತ್ತಿದ್ದ ಈ ಯುವ ನಾಯಕ ಒಂದೆರಡು ಭೇಟಿಗಳಲ್ಲಿಯೇ ನನ್ನಲ್ಲಿ ಭರವಸೆ ಮೂಡಿಸಿದ್ದರು. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
'ಮಹೇಂದ್ರಕುಮಾರ್ ಹಠಾತ್ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಗಿದೆ. ವ್ಯವಸ್ಥೆಯ ತಲ್ಲಣಗಳಿಗೆ ಮಿಡಿಯುತ್ತಿದ್ದ ಜೀವ ಕಮರಿ ಹೋದಂತಾಗಿದೆ. ಹಿಂದೂಪರ ಸಂಘಟನೆಗಳ ಮೂಲಕ ಗುರುತಿಸಿಕೊಂಡಿದ್ದ ಮಹೇಂದ್ರಕುಮಾರ್ ಇದ್ದಕ್ಕಿದ್ದಂತೆ ಬದಲಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ನನ್ನೊಂದಿಗೆ ಮುಕ್ತವಾಗಿ ಸಮಾಜದ ತಲ್ಲಣಗಳ ಬಗ್ಗೆ ಚರ್ಚಿಸುತ್ತಿದ್ದರು. ಅನಂತರ ಪಕ್ಷ ರಾಜಕೀಯದಿಂದ ದೂರ ಸರಿದ ಅವರು ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪ್ರಗತಿಪರ ಚಿಂತಕ ಗುಣವನ್ನು ಬಿಡಲೇ ಇಲ್ಲ. ಆದರೆ, ಸಿದ್ದಾಂತಗಳು ಬದಲಾಗಿದ್ದನ್ನು ನಾನು ಹತ್ತಿರದಿಂದ ಕಂಡಿದ್ದೆ. 'ನಮ್ಮ ಧ್ವನಿ' ಸಂಘಟನೆ ಹುಟ್ಟುಹಾಕಿದ್ದ ಅವರು ರಾಜ್ಯದಾದ್ಯಂತ ಜೀವಪರ ನಿಲುವನ್ನು ಜಾಗೃತಗೊಳಿಸುವ ಕ್ರಿಯೆಯಲ್ಲ ಸಕ್ರಿಯರಾಗಿದ್ದರು' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.