"ನಾಡೋಜ" ಗೌರವಕ್ಕೆ ಡಾ.ಬಿ.ಟಿ.ರುದ್ರೇಶ್ ಭಾಜನ: ಕುಲಪತಿ ಡಾ.ಮಲ್ಲಿಕಾಘಂಟಿ
215 ಮಂದಿಗೆ ಪದವಿ ಪ್ರದಾನ
ಕಮಲಾಪುರ, ಎ. 20: ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ 25ನೆ ನುಡಿಹಬ್ಬ ಎ.21ರಂದು ನಡೆಯಲಿದ್ದು, ವಿವಿಯಿಂದ ನೀಡುವ ಪ್ರತಿಷ್ಠಿತ "ನಾಡೋಜ" ಗೌರವಕ್ಕೆ ಹೋಮಿಯೋಪತಿ ಕ್ಷೇತ್ರದಲ್ಲಿ ಅದ್ವಿತೀಯ ಹೆಸರು ಗಳಿಸಿರುವ ಡಾ.ಬಿ.ಟಿ.ರುದ್ರೇಶ್ ಪಾತ್ರರಾಗಿದ್ದಾರೆ ಎಂದು ಹಂಪಿ ವಿವಿಯ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ತಿಳಿಸಿದ್ದಾರೆ.
ಗುರುವಾರ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡೋಜ ಪದವಿಗೆ 47 ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಭೆ ನಡೆಸಿ ಮೂರು ಮಂದಿಯ ಹೆಸರನ್ನು ಅಂತಿಮಗೊಳಿಸಿ ಕಳುಹಿಸಲಾಗಿತ್ತು, ಆ ಪೈಕಿ ಒಬ್ಬ ಹೆಸರಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆಂದು ಹೇಳಿದರು.
ಎ.21ರಂದು ಬೆಳಗ್ಗೆ 10:30ಕ್ಕೆ ವಿದ್ಯಾರಣ್ಯದ ಭುವನ ವಿಜಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 101 ಪುಸ್ತಕಗಳನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ‘ನಾಳಿನ ಕರ್ನಾಟಕ’ ಎಂಬ ವಿಷಯದ ಕುರಿತು ನಡೆಯಲಿರುವ ವಿಚಾರ ಸಂಕಿರಣವನ್ನು ಸಚಿವರು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್, ಶಾಸಕ ಆನಂದ ಸಿಂಗ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಚಿಂತಕರಾದ ಬಿ.ಎಲ್.ಶಂಕರ್, ಪ್ರೊ.ಜಿ.ಕೆ. ಗೋವಿಂದರಾವ್, ಪ್ರೊ.ಟಿ.ಆರ್.ಚಂದ್ರಶೇಖರ ಹಾಗೂ ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ಮಾತನಾಡಲಿದ್ದಾರೆ. ಪ್ರೊ.ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಸಂಜೆ 6:30ಕ್ಕೆ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಕುಲಾಧಿಪತಿಗಳೂ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಡಿ.ಲಿಟ್ ಹಾಗೂ ಪಿಎಚ್‌ಡಿ ಪದವಿ ಪ್ರದಾನ ಮಾಡಲಿದ್ದಾರೆ.
ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎನ್.ಕುಮಾರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಘಟಿಕೋತ್ಸವದಲ್ಲಿ 3 ಡಿ-ಲಿಟ್, 100 ಪಿಎಚ್‌ಡಿ, 74 ಎಂ.ಫಿಲ್, 19 ಎಂಎ-ಪಿಎಚ್‌ಡಿ, 8 ಎಂವಿಎ, 8 ಎಂ.ಮ್ಯೂಜಿಕ್, 3 ಬಿ.ಮ್ಯೂಜಿಕ್ ಸೇರಿ ಒಟ್ಟಾರೆ 215 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.
ಕುಲಸಚಿವ ಡಾ.ಡಿ.ಪಾಂಡುರಂಗಬಾಬು, ಡೀನ್ ಭಾಷಾ ನಿಕಾಯದ ಪ್ರಾಧ್ಯಾಪಕ ಡಾ.ಎ.ಮೋಹನ ಕುಂಟಾರ್, ಡೀನ್ ಸಮಾಜ ವಿಜ್ಞಾನ ನಿಕಾಯದ ಪ್ರಾಧ್ಯಾಪಕ ಡಾ.ಮಂಜುನಾಥ ಬೇವಿನಕಟ್ಟಿ ಸೇರಿದಂತೆ ವಿವಿಧ ನಿಕಾಯದ ಡೀನ್‌ಗಳು, ಹಣಕಾಸು ಅಧಿಕಾರಿಗಳು, ನಿರ್ದೇಶಕರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.