'ಆಳ್ವಾಸ್ ನುಡಿಸಿರಿ-2017' ಸಮ್ಮೇಳನಾಧ್ಯಕ್ಷರಾಗಿ ಡಾ. ನಾಗತಿಹಳ್ಳಿ ಚಂದ್ರಶೇಖರ್
ಡಿ.1-3: ಮೂಡುಬಿದಿರೆಯಲ್ಲಿ ಕಾರ್ಯಕ್ರಮ
ಡಾ. ನಾಗತಿಹಳ್ಳಿ ಚಂದ್ರಶೇಖರ್
ಮೂಡುಬಿದಿರೆ, ಅ. 25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಿ. 1ರಿಂದ 3ರ ವರೆಗೆ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ 2017' ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಸಿನಿಮಾ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಖ್ಯಾತ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ನುಡಿಸಿರಿ ಸಮ್ಮೇಳನವು ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಬಹುತ್ವದ ನೆಲೆಗಳನ್ನು ಅನಾವರಣಗೊಳಿಸಲಿದೆ. 'ಕರ್ನಾಟಕ ಬಹುತ್ವದ ನೆರೆಗಳು' ಎನ್ನವ ಪ್ರಧಾನ ಪರಿಕಲ್ಪನೆಯಡಿಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಕಥನಕಾರರಾಗಿ, ಸಿನಿಮಾ ನಿರ್ದೇಶಕರಾಗಿ ಜನಪ್ರಿಯರಾಗಿದ್ದಾರೆ. ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನೊಳಗೊಂಡ ಕೃತಿಗಳನ್ನು ಹೊರತಂದಿದ್ದಾರೆ.
'ಕಾಡಿನ ಬೆಂಕಿ' ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ಅವರು ಹಲವಾರು ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ, ಗೀತರಚನೆಯನ್ನು ನೀಡಿದ್ದಾರೆ. ' ಉಂಡು ಹೋದ ಕೊಂಡು ಹೋದ' ಚೊಚ್ಚಲ ಸಿನಿಮಾ ನಿರ್ದೇಶಿಸಿದ್ದು, ನಂತರ 15ಕ್ಕೂ ಹೊಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಥಾಲೇಖನ, ಅತ್ಯುತ್ತಮ ಗೀತರಚನಾಕಾರ, ಅತ್ಯುತ್ತಮ ನಿರ್ದೇಶಕ ಸಹಿತ ರಾಜ್ಯ, ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಇವರು ನಿರ್ದೇಶಿಸಿದ ಹಲವಾರು ಧಾರಾವಾಹಿಗಳು ಕಿರುತೆರೆಯಲ್ಲಿ ಜನಪ್ರಿಯವಾಗಿವೆ.
ಸಮ್ಮೇಳನ ಉದ್ಘಾಟಿಸಲಿರುವ ಡಾ. ಸಿ.ಎನ್. ರಾಮಚಂದ್ರನ್ ಅವರು ಭಾರತ, ಸೊಮಾಲಿಯಾ, ಸೌದಿಅರೇಬಿಯಾ ಮತ್ತು ಅಮೆರಿಕಾ ದೇಶಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಭೋದಕರಾಗಿ ಹೆಸರು ವಾಸಿ. ಮಂಗಳೂರು ವಿವಿಯಲ್ಲಿ 16 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥ ರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಇಂಗ್ಲಿಷ್ ನಲ್ಲಿ 10, ಕನ್ನಡದಲ್ಲಿ 16 ಕೃತಿಗಳನ್ನು ರಚಿಸಿರುವ ಇವರು 'ಸಾಹಿತ್ಯ ವಿಮರ್ಶೆ', ತೌಲನಿಕ ಸಾಹಿತ್ಯ, ಹೊಸ ಮಡಿಯ ಮೇಲೆ ಚದುರಂಗ, ಬಹುಮುಖ್ಯ ಕೃತಿಗಳಾಗಿದ್ದು ಕನ್ನಡದಿಂದ ಅನೇಕ ಕೃತಿಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡಮಿ, ಕಥಾ ಪ್ರಶಸ್ತಿ ಮತ್ತು ಕೆ.ಕೆ. ಬಿರ್ಲಾ ಫೆಲೋಶಿಫ್ ಮೊದಲಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪಿಆರ್ ಒ ಡಾ. ಪದ್ಮನಾಭ ಶೆಣೈ, ಉಪನ್ಯಾಸಕ ಉದಯ ಮಂಜುನಾಥ ಉಪಸ್ಥಿತರಿದ್ದರು.