ಮುಂಬಯಿ ಕನ್ನಡ ಲೋಕದ ವೈಚಾರಿಕ ಮನಸ್ಸು ರವಿ ರಾ. ಅಂಚನ್ ಇನ್ನಿಲ್ಲ
ಮುಂಬೈ, ಅ.28: ಮಹಾರಾಷ್ಟ್ರದ ಹಿರಿಯ ಸಾಹಿತಿ, ಚಿಂತಕ, ವಾಗ್ಮಿ, ಅಂಕಣಗಾರ, ಶೈಲಜಾ ಅಂಚನ್ ಫೌಂಡೇಶನ್ ಸಂಸ್ಥಾಪಕ ರವಿ ರಾ.ಅಂಚನ್ (61) ಶನಿವಾರ ಪೂರ್ವಾಹ್ನ ಅಂಧೇರಿ ಪೂರ್ವದ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅಪ್ಪಟ ತುಳು ಕನ್ನಡಿಗರಾಗಿ ಬೃಹನ್ಮುಂಬೈಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಸಂಘಟನೆಯಲ್ಲಿ ಮಹತ್ತರ ಪಾತ್ರವಹಿಸಿದ್ದ ರವಿ ಅಂಚನ್ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪ್ರತೀ ವರ್ಷ ರವಿ. ರಾ. ಅಂಚನ್ ನೇತೃತ್ವದಲ್ಲಿ ಗೋರೆಗಾಂವ್ ಕನ್ನಡ ಸಂಘ ಹಮ್ಮಿಕೊಳ್ಳುತ್ತಿದ್ದ ‘ವಿಚಾರಭಾರತಿ’ ಸಮ್ಮೇಳನ ಮುಂಬೈಯಲ್ಲಿ ಮಾತ್ರವಲ್ಲದೆ, ಕನ್ನಡ ವೈಚಾರಿಕ ಲೋಕಕ್ಕೂ ಹೊಸ ಸ್ಫೂರ್ತಿಯನ್ನು ತುಂಬಿತ್ತು.
ರವಿ ರಾ. ಅಂಚನ್ ಅವರು ‘ವಾರ್ತಾ ಭಾರತಿ’ ಪತ್ರಿಕೆಗಾಗಿ ಸುಮಾರು ಎರಡು ವರ್ಷಗಳ ಕಾಲ ಬರೆದ ‘ಮನೋಧರ್ಮ’ ಅಂಕಣ ಭಾರೀ ಜನಪ್ರಿಯತೆಯನ್ನು ಪಡೆದಿತ್ತು. ತುಳು ಸಾಂಸ್ಕೃತಿಕ ಹಿನ್ನೆಲೆಗಳನ್ನು ವೈಚಾರಿಕ ಒರೆಗೆ ಹಚ್ಚಿ ವಿಶ್ಲೇಷಿಸುತ್ತಾ ಬಂದವರು ಅಂಚನ್.
ತನ್ನ ಮೊದಲ ಕೃತಿ ‘ಯಕ್ಷರಂಗ’ ಮೊದಲ್ಗೊಂಡು ಈ ವರೆಗೆ ಸುಮಾರು 21ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷ್‌ನಲ್ಲಿ ‘ಮಾಯಂದಲ್’ ಮತ್ತು ‘ಕಲ್ಲುರ್ಟಿ’ ಇವರ ಕೃತಿಗಳು. ಇವರ ಒಂದು ಕೃತಿ ಮರಾಠಿ ಭಾಷೆಗೆ ಅನುವಾದಗೊಂಡಿದೆ. ಮೂರು ಸಂಪಾದಿತ ಕೃತಿಗಳನ್ನು ಹೊರತಂದಿದ್ದಾರೆ.
‘ಕಡೆಗೋಳು’, ‘ಮನೋಧರ್ಮ’, ‘ಅರಿವೆಂಬ ಮಾಯೆ’, ‘ವಿವೇಕ ಚಿಂತನೆ’, ‘ನೆಲದ ದನಿ’, ‘ಬಹರೂಪಿ ಭಾರತ’, ‘ವಿವೇಕದ ನುಡಿ ಸಮತೆಯ ಮುಡಿ’, ‘ಊಳಿಗಮಾನ್ಯ ವ್ಯವಸ್ಥೆಗೆ ಸಿಡಿದ ಮಾಯಂದಲ್’, ‘ತುಳುವರ ಯುಗ ಯಾತ್ರೆ’, ‘ಮಹಾನಗರದಲ್ಲಿ ನಾಗಾರಾಧನೆ-ಔಚಿತ್ಯ ಪ್ರಜ್ಞೆ’, ‘ಜ್ಯೋತಿಬಾ ಬೆಳಕು-ಬೆರಗು’ ಮೊದಲಾದವುಗಳು ಅಂಚನ್ ಬರೆದಿರುವ ಪ್ರಮುಖ ವೈಚಾರಿಕ ಕೃತಿಗಳು.
ರವಿ ಅಂಚನ್‌ರ ಪತ್ನಿ ಲೇಖಕಿ ದಿ. ಶೈಲಜಾ ರವಿ ಅಂಚನ್ ಅವರ ವಾರ್ಷಿಕ ಸ್ಮರಣಾರ್ಥ ಶೈಲಜಾ ಅಂಚನ್ ಫೌಂಡೇಶನ್ ನಿಮಿತ್ತ ‘ಸಂಸ್ಕೃತಿ ಚರಿತ್ರೆ-ಶಿಕ್ಷಣ: ಆಧುನಿಕ ಕರ್ನಾಟಕದ ಜಿಜ್ಞಾಸೆ’ ವಿಚಾರ ಸಂಕಿರಣ ಆಯೋಜಿಸಿ ಕೃತಿ ಲೋಕಾರ್ಪಣೆಗೊಳಿಸಿದ್ದರು.
ಶೈಲಜಾ ಅಂಚನ್ ಸ್ಮರಣಾರ್ಥ, ಶೈಲಜಾ ಅಂಚನ್ ಫೌಂಡೇಶನ್ ಮುಖೇನ ಮಹಾರಾಷ್ಟ್ರ ರಾಜ್ಯಾದ್ಯಂತದ ಕನ್ನಡ ಲೇಖಕಿ ಸಾಹಿತಿಗಳ ಸುಮಾರು 600 ಪುಟಗಳ ಬೃಹತ್ ಕಥಾ ಸಂಕಲನ ಮುದ್ರಣದ ಹಂತದಲ್ಲಿದೆ. ಉಡುಪಿ ಜಿಲ್ಲೆಯ ಕಾಪು ಪಾದೂರು ಮಡಂತೋಟ ನಿವಾಸಿ ಆಗಿದ್ದು ಮುಂಬೈ ಸೇರಿ, ಅಲ್ಲೇ ಶಿಕ್ಷಣ ಮುಗಿಸಿ ಹಲವು ದಶಕಗಳಿಂದ ರಿಲಾಯನ್ಸ್ ಸಂಸ್ಥೆಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕ, ಕರ್ನಾಟಕ ಸಂಘ ಮುಂಬೈ, ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾಗಿ ಮಹಾನಗರದಲ್ಲಿನ ಅನೇಕ ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದು ವಿವಿಧ ಹುದ್ದೆಗಳನ್ನಲಂಕರಿಸಿ ನಾಡಿನ ಹೆಸರಾಂತ ಸಮಾಜ ಸೇವಕರಾಗಿ ಜನಾನುರಾಗಿಯಾಗಿದ್ದರು.
ಮೃತರ ಅಂತ್ಯಕ್ರಿಯೆ ರವಿವಾರ ಪೂರ್ವಾಹ್ನ 10:00 ಗಂಟೆಗೆ ಅಂಧೇರಿ ಪೂರ್ವದ ಸಹಾರ್ ರಸ್ತೆಯಲ್ಲಿನ ಚಕಲಾ ಪಾರ್ಸಿವಾಡ ಇಲ್ಲಿನ ಸ್ಮಶಾನಭೂಮಿಯಲ್ಲಿ ನೆರವೇರಲಿದೆ.