ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವ ಬಗ್ಗೆ ನಿರ್ಧರಿಸಿಲ್ಲ: ಡಾ. ರವೀಂದ್ರನಾಥ್ ಶ್ಯಾನ್‌ಭಾಗ್
ಉಡುಪಿ, ಅ.30: ನಾಡಿನ ಸುಮಾರು 30ರಿಂದ 40ರಷ್ಟು ಹಿರಿಯ ನಾಗರಿಕರ ಕಣ್ಣೀರ ಕಥೆಗಳು ನನ್ನ ಬಳಿ ಇರುವಾಗ, ಅವರಿಗೆ ನ್ಯಾಯ ದೊರಕಿಸಲು ಸಾಧ್ಯವಾಗದೇ ಅಸಹಾಯಕನಾಗಿರುವಾಗ ರಾಜ್ಯ ಪ್ರಶಸ್ತಿಯನ್ನು ನಾನು ಹೇಗೆ ಸ್ವೀಕರಿಸಲಿ. ಹೀಗಾಗಿ ರಾಜ್ಯ ಸರಕಾರ ನೀಡಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸುವ ಬಗ್ಗೆ ನಾನು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಇಂದು ಪ್ರಕಟವಾದ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸಮಾಜಸೇವಾ ಕ್ಷೇತ್ರಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವ ಜಿಲ್ಲೆಯ ಹಿರಿಯ ಮಾನವ ಹಕ್ಕುಗಳ ಹಾಗೂ ಗ್ರಾಹಕ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ್ ಶ್ಯಾನ್‌ಭಾಗ್ ತಿಳಿಸಿದ್ದಾರೆ.
‘ರಾಜ್ಯೋತ್ಸವ’ ಪ್ರಶಸ್ತಿಗಾಗಿ ಅಭಿನಂದಿಸಿ ಅವರ ಪ್ರತಿಕ್ರಿಯೆಗಾಗಿ ಪತ್ರಿಕೆ ಡಾ. ಶ್ಯಾನ್‌ಭಾಗ್‌ರನ್ನು ಸಂಪರ್ಕಿಸಿದಾಗ, ತಾನಿನ್ನೂ ಪ್ರಶಸ್ತಿ ಸ್ವೀಕರಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು. ಪ್ರಶಸ್ತಿಯ ಕುರಿತಂತೆ ನನಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸರಕಾರದಿಂದ ಯಾರೂ ನನಗೆ ಈ ವಿಷಯ ತಿಳಿಸಿಲ್ಲ. ಹೀಗಾಗಿ ನಾಳೆ ಈ ಬಗ್ಗೆ ಮಾಹಿತಿ ಬಂದ ಬಳಿ ನಾನು ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುತ್ತೇನೆ ಎಂದರು.
ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಆದರೆ ಪ್ರಶಸ್ತಿಯಿಂದ ನನಗೆ ಸಂತೋಷ ಖಂಡಿತ ಆಗಿಲ್ಲ. ನಾನು ಕಳೆದ ಕೆಲವು ದಿನಗಳಿಂದ ರಾಯಚೂರು, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ಪ್ರವಾಸ ಮಾಡಿ ಇಂದಷ್ಟೇ ಮರಳಿದ್ದೇನೆ. ಅಲ್ಲಿ ನನಗೆ ಬಂದಿರುವ ದೂರುಗಳಿಂದ ನಾನು ವಿಚಲಿತಗೊಂಡಿದ್ದೇನೆ. ಜೀವನದ ಸಂಧ್ಯಾಕಾಲದಲ್ಲಿರುವ ಈ ಹಿರಿಯ ಜೀವಗಳಿಗೆ ತ್ವರಿತ ನ್ಯಾಯ ನೀಡಲು ಸಾಧ್ಯವಾಗದ ಬಗ್ಗೆ ನನಗೆ ದು:ಖವಿದೆ ಎಂದರು.
ಇಂದು ಕುಂದಾಪುರದ ಸಬ್ಲಾಡಿಯಿಂದ 91ರ ಹರೆಯ ಭುಜಂಗ ಶೆಟ್ಟಿ ಹಾಗೂ 86ರ ಹರೆಯ ಅವರ ಪತ್ನಿ ನನ್ನ ಬಳಿ ಬಂದಿದ್ದರು. ಮಕ್ಕಳಿಂದ ಅವರು ಅನುಭವಿಸಿದ ಕಣ್ಣೀರ ಕಥೆಯನ್ನು ಕೇಳಿದಾಗ, ನಾನು ಪ್ರಶಸ್ತಿ ಸ್ವೀಕರಿಸಬೇಕೆ ಎಂಬ ಬಗ್ಗೆ ನನ್ನಲ್ಲೇ ಜಿಜ್ಞಾಸೆ ಇದೆ. ಇವರಂಥ 30-40 ಮಂದಿಗೆ ನ್ಯಾಯ ಕೊಡಿಸುವುದು ನನಗೆ ಪ್ರಶಸ್ತಿ ಸ್ವೀಕರಿಸುವುದಕ್ಕಿಂತ ಹೆಚ್ಚು ಮುಖ್ಯವೆನಿಸಿದೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ.ರವೀಂದ್ರನಾಥ ಶ್ಯಾಭಾಗ್ ಹೇಳಿದರು.
ಮಣಿಪಾಲ ವಿವಿಯಲ್ಲಿ ಫಾರ್ಮಕಾಲಜಿ ವಿಭಾಗದ ಪ್ರೊಪೆಸರ್ ಆಗಿ ಸೇವಾ ನಿವೃತ್ತರಾದ ಡಾ. ಶ್ಯಾನುಭಾಗ್, ಅದಾಗಲೇ ಬಳಕೆದಾರರ ವೇದಿಕೆಯ ಮೂಲಕ ಗ್ರಾಹಕರ ಪರ ಹೋರಾಟಕ್ಕೆ ಜಿಲ್ಲೆಯಲ್ಲಿ ನೆಲೆಯನ್ನು ಒದಗಿಸಿದ್ದರು. ಅವರು ಕಳೆದ ಮೂರು ದಶಕಗಳಿಂದ ಬಳಕೆದಾರರ ಹಾಗೂ ಮಾನವ ಹಕ್ಕುಗಳ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಕಳೆದ ಒಂದು ದಶಕಕ್ಕಿಂತಲೂ ಅಧಿಕ ಸಮಯದಿಂದ ಹಿರಿಯ ನಾಗರಿಕರ ಪರ ಹೋರಾಟದಲ್ಲಿ ವ್ಯಸ್ತರಾಗಿದ್ದಾರೆ. ಈ ಮಧ್ಯೆ ಅವರು ಪರಿಸರ ಸಂರಕ್ಷಣೆಯಲ್ಲೂ ಅವರು ತಮ್ಮ ಛಾಪನ್ನು ಮೂಡಿಸಿದ್ದರು.