ಸಾಹಿತ್ಯ ಸರಸ್ವತಿಗೆ ಅರ್ಪಿತ: ವೈದೇಹಿ
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ
ಉಡುಪಿ, ಅ.30: ರಾಜ್ಯೋತ್ಸವ ಪ್ರಶಸ್ತಿಯನ್ನು ನನಗೆ ನೀಡಿರುವುದಲ್ಲ. ಸಾಹಿತ್ಯಕ್ಕಾಗಿ ನೀಡಿರುವುದು. ಹೀಗಾಗಿ ಇಂದು ಘೋಷಿತವಾದ ಪ್ರಶಸ್ತಿ ಸಾಹಿತ್ಯ ಸರಸ್ವತಿಗೆ ಅರ್ಪಿತ ಎಂದು ಕನ್ನಡದ ಖ್ಯಾತನಾಮ ಸಾಹಿತಿ, ಲೇಖಕಿ ವೈದೇಹಿ ಹೇಳಿದ್ದಾರೆ.
ಪ್ರಶಸ್ತಿಗಾಗಿ ಅಭಿನಂದಿಸಿ ಅವರ ಅನಿಸಿಕೆಯನ್ನು ಕೇಳಿದಾಗ, ಇದರಿಂದ ನಾನು ಹಿಗ್ಗಿ ಹಿರೇಕಾಯಿಯಾಗುವುದಿಲ್ಲ. ಯಥಾಸ್ಥಿತಿಯಿಂದ ಪ್ರಶಸ್ತಿಯನ್ನು ಒಪ್ಪಿಕೊಂಡು ಸ್ವೀಕರಿಸುತ್ತೇನೆ ಎಂದರು.
72ರ ಹರೆಯ ವೈದೇಹಿ (ಜನನ:12-2-1945) ಮೂಲತ: ಕುಂದಾಪುರ ದವರು. ಹೆತ್ತವರಿಟ್ಟ ಹೆಸರು ಜಾನಕಿ, ಕತೆಗಾರ್ತಿಯಾಗಿ ಅಂಬೆಗಾಲಿಟ್ಟಾಗ ವೈದೇಹಿ ಎಂದು ಬದಲಾದರು. ಮುಂದೆ ಸಾಹಿತ್ಯ ಕ್ಷೇತ್ರದಲ್ಲಿ ಈ ಹೆಸರೇ ಖಾಯಂ ಆಯಿತು. ವೈದೇಹಿ ಇಂದು ಕನ್ನಡದ ಬಹುಮುಖ್ಯ ಮಹಿಳಾ ಸಾಹಿತಿಯಾಗಿ, ಲೇಖಕಿಯಾಗಿ, ನಾಟಕಕಾರ್ತಿಯಾಗಿ ಗುರುತಿಸಲ್ಪಡುತಿದ್ದಾರೆ.
ಇದೇ ಕಾರಣಕ್ಕಾಗಿ ಅವರು ಹಲವು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅವರ ಕ್ರೌಂಚ ಪಕ್ಷಿಗಳು ಸಣ್ಣ ಕಥಾ ಸಂಕಲನಕ್ಕೆ 2009ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ ಬಂದಿದೆ.
ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಪದವೀಧರೆಯಾದ ವೈದೇಹಿ ಶಿವಮೊಗ್ಗ, ಮಣಿಪಾಲಗಳಲ್ಲಿ ವಾಸ್ತವ್ಯ ಹೂಡಿದರೂ ತನ್ನ ಕಥೆ, ಕಾದಂಬರಿಗಳ ಮೂಲಕ ಹಾಗೂ ಮಾತುಗಳ ಮೂಲಕ ‘ಕುಂದಾಪ್ರ ಕನ್ನಡಕ್ಕೆ’ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟರು. ತನ್ನ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವುದರಲ್ಲೂ ಅವರದು ಎತ್ತಿದ ಕೈ.
ವೈದೇಹಿಯವರ ಸಣ್ಣ ಕಥೆ, ಕಾದಂಬರಿ, ಕವನ ಸಂಕಲನ, ಪ್ರಬಂಧ-ಲೇಖನಗಳಂತೆ ಅವರು ಬರೆದ ಕೋಟ ಲಕ್ಷ್ಮಿನಾರಾಯಣ ಕಾರಂತ (ಡಾ.ಶಿವರಾಮ ಕಾರಂತರ ಅಣ್ಣ ಹಾಗೂ ಸಸ್ಯ ಶಾಸ್ತ್ರಜ್ಞ), ರಂಗಕರ್ಮಿ ಬಿ.ವಿ. ಕಾರಂತ ಹಾಗೂ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ ಅವರ ಆತ್ಮಚರಿತ್ರೆಗಳು ತುಂಬಾ ಪ್ರಸಿದ್ಧವಾಗಿದೆ. ಇದರೊಂದಿಗೆ ಕಮಲಾದೇವಿ ಚಟ್ಟೋಪಾಧ್ಯಾಯ, ಬಾಸ್ಕರ ಚಂದಾರ್ವಕರ್ ಅವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯಲ್ಲದೇ, ಕನ್ನಡದಲ್ಲಿ ಸಾಹಿತ್ಯಕ್ಕಿರುವ ಹೆಚ್ಚು-ಕಡಿಮೆ ಎಲ್ಲಾ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.