ಹಾಸ್ಯಸಾಹಿತಿ ಕು.ಗೋ ಅವರಿಗೆ ಬೋಳಂತಕೋಡಿ ಕನ್ನಡ ಪ್ರಶಸ್ತಿ
ಪುತ್ತೂರು, ನ. 16: ಸಾಹಿತಿ ದಿ. ಬೋಳಂತಕೋಡಿ ಅಭಿಮಾನಿ ಬಳಗವು ಆಯೋಜಿಸುತ್ತಿರುವ ಬೋಳಂತಕೋಡಿ ಕನ್ನಡ ಪ್ರಶಸ್ತಿಗೆ ಈ ಬಾರಿ ಹಾಸ್ಯ ಸಾಹಿತಿ ಉಡುಪಿಯ ಹೆರ್ಗ ಗೋಪಾಲ ಭಟ್(ಕು.ಗೋ) ಅವರು ಆಯ್ಕೆಯಾಗಿದ್ದಾರೆ. ನ.21, ಸಂಜೆ ಪುತ್ತೂರು ಟೌನ್ ಬ್ಯಾಂಕ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಸಹಕಾರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಂಗಳೂರು ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ.ಮಹೇಶ್ ಜೋಷಿ ‘ಪುಸ್ತಕ ಹಬ್ಬ’ವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರಿನ ವಿಶ್ರಾಂತ ಉಪನ್ಯಾಸಕ, ಸಾಹಿತಿ ಪ್ರೊ. ವಿ.ಬಿ.ಅರ್ತಿಕಜೆ ಬೋಳಂತಕೋಡಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಕು.ಗೋ ಅವರ ಕುರಿತು ಸಾಹಿತಿ, ವಿಮರ್ಶಕ ಬೆಳಗೋಡು ರಮೇಶ್ ಭಟ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಈ ಸಂದರ್ಭದಲ್ಲಿ ಕು.ಅಪೂರ್ವ ಕೊಲ್ಯ ಅವರ ‘ಚಿತ್ತಚೋರ’ ಕವನ ಸಂಕಲನವು ಅನಾವರಣಗೊಳ್ಳಲಿದ್ದು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಶೋಭಿತಾ ಸತೀಶ್ ಕೃತಿ ಪರಿಚಯ ಮಾಡಲಿದ್ದಾರೆ. ಪುತ್ತೂರಿನ ರಾಜೇಶ್ ಪವರ್ ಪ್ರೆಸ್ಸಿನ ಎಂ.ಎಸ್.ರಘುನಾಥ ರಾವ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕಿ ಮತ್ತು ನ್ಯಾಯವಾದಿ ಕೆ.ಆರ್.ಆಚಾರ್ಯ ಅವರು ವಿವಿಧ ಕಲಾಪಗಳನ್ನು ನಡೆಸಿಕೊಡಲಿದ್ದಾರೆ.
ಸಂಗೀತ ಕಚೇರಿ : ಸಮಾರಂಭದ ಬಳಿಕ ಕು.ಶ್ರೇಯಾ ಕೊಳತ್ತಾಯ ಪುತ್ತೂರು ಇವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಇವರೊಂದಿಗೆ ವಯೋಲಿನ್‌ನಲ್ಲಿ ಬೆಂಗಳೂರಿನ ವೈಭವ್ ರಮಣಿ, ಮೃದಂಗದಲ್ಲಿ ಸುನಿಲ್ ಸುಬ್ರಹ್ಮಣ್ಯ ಸಹಕರಿಸಲಿದ್ದಾರೆ.
ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಈ ಹಿಂದಿನ ವರುಷಗಳಲ್ಲಿ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್ (ದಿ.), ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ, ಹರೇಕಳ ಹಾಜಬ್ಬ, ಕುಂಞಿಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್ ಅವರಿಗೆ ನೀಡಿ ಗೌರವಿಸಲಾಗಿದೆ.
ಪುಸ್ತಕ ಹಬ್ಬ : ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನವೆಂಬರ 21 ರಿಂದ 27ರ ತನಕ ದಿನಪೂರ್ತಿ ’ಪುಸ್ತಕ ಹಬ್ಬ’ ಜರುಗಲಿದ್ದು ಪುಸ್ತಕ ಪ್ರದರ್ಶನ-ಮಾರಾಟ ವ್ಯವಸ್ಥೆಯಿದೆ.