ಉಡುಪಿ: ‘ಕಾವ್ಯ ಸಂಗಮ’ ಕೃತಿ ಅನಾವರಣ
ಉಡುಪಿ, ಡಿ.27: ನಗರದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘಟನೆ ‘ಅಮೋಘ ಉಡುಪಿ’ ವತಿಯಿಂದ ಕರಾವಳಿ ಕವಿಗಳ ಕವನ ಸಂಗ್ರಹ ‘ಕಾವ್ಯ ಸಂಗಮ’ ಕೃತಿಯನ್ನು ಸಾಹಿತಿ ಡಾ. ಜನಾರ್ದನ್ ಭಟ್ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.
ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಡಾ.ಜನಾರ್ದನ ಭಟ್, ಮಾಗಿದ ಅನುಭವ ಹಾಗೂ ನೆನಪುಗಳಿಂದ ಮಾತ್ರ ಉತ್ತಮ ಕವಿತೆಗಳು ಮೂಡಿ ಬರಲು ಸಾಧ್ಯ. ಇಂದಿನ ಕವಿತೆ ಹಾಗೂ ಕವನಗಳು ಮಕ್ಕಳನ್ನು ಮುಟ್ಟುತ್ತಿಲ್ಲ. ಹೀಗಾಗಿ ಇವುಗಳನ್ನು ಶೈಕ್ಷಣಿಕ ಪಠ್ಯ ಪುಸಕ್ತದಲ್ಲಿ ಆಳವಡಿಸುವ ಕಾರ್ಯವಾಗಬೇಕು ಎಂದರು.
ಹಳೆಯ ಕವಿತೆಗಳು ಹಾಡಿನ ಮೂಲಕ ಜನರ ನಡುವೆ ಉಳಿದುಕೊಂಡಿವೆ. ದೊಡ್ಡ ಸಾಹಿತಿಗಳ ಕವಿತೆಗಳು ಇಂದು ಪದ್ಯ ರೂಪ ಪಡೆದು, ಅವರ ಅಗಲುವಿಕೆಯ ನಂತರವೂ ಜನರ ಮನಸ್ಸಿನಲ್ಲಿ ಜೀವಂತವಾಗಿವೆ ಎಂದವರು ನುಡಿದರು.
ಕೃತಿಯನ್ನು ಪರಿಚಯಿಸಿದ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕಿ ಡಾ.ನಿಕೇತನ ಮಾತನಾಡಿ, ಈ ಪುಸ್ತಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 96 ಕವಿಗಳು ರಚಿಸಿದ ಕಾವ್ಯಗಳ ಸಂಗಮವಾಗಿದೆ. ಆಪ್ತ ಅನುಭವವನ್ನು ನೀಡುವುದರ ಜೊತೆಗೆ ಮೌಲ್ಯಯುತ ಸಂದೇಶಗಳು ಸಹ ಇವುಗಳಲ್ಲಿ ಅಡಗಿದೆ. ಇದು ಕವಿಗಳ ಬದುಕಿನ ಅನುಭವವನ್ನು ಕಟ್ಟಿಕೊಟ್ಟಿದೆ ಎಂದರು.
ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಮನೋಹರ್ ಶೆಟ್ಟಿ, ವಿಶ್ವನಾಥ್ ಶೈಣೈ, ರಂಗಸ್ಥಳದ ಅಧ್ಯಕ್ಷ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.
ಲೇಖಕ, ಸಾಹಿತಿ ಮೇಟಿ ಮುದ್ದಿಯಪ್ಪ ಸ್ವಾಗತಿಸಿದರೆ, ಎಚ್.ಪಿ.ರವಿರಾಜ್ ಕಾರ್ಯಕ್ರಮ ನಿರೂಪಿಸಿದರು.