ಆತ್ಮದ ಭಾಷೆಯಾದಾಗ ತುಳು ತಲೆ ಎತ್ತಲು ಸಾಧ್ಯ: ಪ್ರೊ. ಅಭಯ ಕುಮಾರ್
‘ತುಳು ತಲೆ ಎತ್ತುವ ಬಗೆ’ ಸಂವಾದ ಕಾರ್ಯಕ್ರಮ
ಮಂಗಳೂರು, ಡಿ.30: ತುಳುವನ್ನು ನಾವು ಆತ್ಮದ ಭಾಷೆಯಾಗಿ ಸ್ವೀಕರಿಸಿದಾಗ ಮಾತ್ರವೇ ತುಳು ತಲೆ ಎತ್ತಲು ಸಾಧ್ಯವಾಗುತ್ತದೆ. ಅದಕ್ಕಾಗಿ ದಿನನಿತ್ಯದ ಚಟುವಟಿಕೆಗಳಲ್ಲಿ ನಾವು ತುಳು ಭಾಷೆ ಮಾತನಾಡುವುದನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲದ ಎಸ್‌ವಿಪಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಪ್ರೊ. ಅಭಯ ಕುಮಾರ್ ಅಭಿಪ್ರಾಯಿಸಿದ್ದಾರೆ.
ಅವರು ಇಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ತುಳು ಭವನದಲ್ಲಿ ಆಯೋಜಿಸಲಾದ ಚಾವಡಿ ಕಾರ್ಯಕ್ರಮದ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ‘ತುಳು ತಲೆ ಎತ್ತುವ ಬಗೆ’ ಎಂಬ ವಿಷಯದಲ್ಲಿ ಮಾತನಾಡಿದರು.
ತುಳುವಿಗೆ ಸಂಬಂಧಿಸಿ ಸಾಹಿತ್ಯ ರಚನೆಯ ಮನಸ್ಸು 13ನೆ ಶತಮಾನದಲ್ಲಿಯೇ ಆರಂಭಗೊಂಡಿತ್ತು. ಆ ಮನಸ್ಸೇ ಇಂದು ತುಳುವಿಗೆ ಗಟ್ಟಿ ಬುನಾದಿಯನ್ನು ಹಾಕಿಕೊಟ್ಟಿದೆ. ಹಾಗಿದ್ದರೂ ತುಳುವಿಗೆ ಅಧಿಕೃತ ಮಾನ್ಯತೆ ಇಲ್ಲವಾಗಿದ್ದು, ಇನ್ನೂ ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರದಿರುವುದು ಕೂಡಾ ತುಳು ಭಾಷೆ ನಿರೀಕ್ಷಿತ ಮಟ್ಟದಲ್ಲಿ ತಲೆ ಎತ್ತದಿರಲು ಕಾರಣ ಎಂದವರು ಹೇಳಿದರು.
ಧರ್ಮದ ನೆಲೆಯಲ್ಲಿ ತುಳು ಭಾಷೆಯ ಪ್ರಚಾರವಾಗಲಿ
ಧರ್ಮವನ್ನು ಬಿಟ್ಟು ಕಾವ್ಯ ಸಾಹಿತ್ಯವಿಲ್ಲ. ಧರ್ಮಗಳು ಬೆನ್ನೆಲುಬಾಗಿ ನಿಂತರೆ ತುಳು ಭಾಷೆಯನ್ನು ಎತ್ತರಕ್ಕೆ ಬೆಳೆಸಲು ಸಾಧ್ಯ. ಎಲ್ಲಾ ಧರ್ಮದ ಪ್ರಾರ್ಥನಾ ಮಂದಿರಗಳಲ್ಲಿ ತುಳು ಭಾಷೆಯ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ದೊರೆಯಬೇಕು. ಈ ಮೂಲಕ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಚಾರವಾದಾಗ ತುಳು ಭಾಷೆ ಎಲೆ ಎತ್ತಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಪ್ರೊ. ಅಭಯ ಕುಮಾರ್ ಹೇಳಿದರು.
13ನೆ ಶತಮಾನದಲ್ಲಿ ವಾದಿರಾಜರ ದಶಾವತಾರ ಗೀತೆ ದಲಿತರಾಡುವ ತುಳು ಭಾಷೆಯಲ್ಲಿ ರಚನೆಗೊಂಡಿತ್ತು. ಈ ಮೂಲಕ ತುಳು ಸಾಹಿತ್ಯ ರಚನೆ ಆರಂಭವಾಗಿ, ಬಳಿಕ ಬಂದ ಕ್ರೈಸ್ತ ಮಿಶನರಿಗಳು ತಮ್ಮ ಧರ್ಮ ಪ್ರಚಾರಕ್ಕಾಗಿ ತುಳುವಿಗೆ ಒತ್ತು ನೀಡಿದರು. ಇದರಿಂದಾಗಿಯೇ ಆ ಕಾಲದಲ್ಲಿಯೇ ತುಳು ಪಠ್ಯ ಪುಸ್ತಗಳನ್ನು ಬಾಸೆಲ್ ಮಿಶನರಿ ಹೊರತಂದಿತ್ತು. ತುಳುವಿನ ವ್ಯಾಕಾರಣ ಗ್ರಂಥ ರಚನೆಯಾಗಿತ್ತು. ಅದರಿಂದ ಪ್ರಯೋಜನ ಆಗಿದ್ದು ತುಳು ಭಾಷೆಗೆ ಎಂದು ಅವರು ತುಳು ಭಾಷಾ ಸಾಹಿತ್ಯದ ಆರಂಭ ಹಾಗೂ ಬೆಳವಣಿಗೆ ಬಗ್ಗೆ ಪರಿಚಯ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ವಹಿಸಿದ್ದರು. ತುಳು ಸಂಸ್ಕೃತಿ ಆಚರಣೆಯ ಸ್ವರೂಪ ವಿಷಯದಲ್ಲಿ ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಪೂವಪ್ಪ ಗಣಿಯೂರು ಮಾತನಾಡಿದರು.
ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಮೊದಲು ಅರಿವು ಪಚ್ಚೆ ಬಳಗ ಬಂಟ್ವಾಳ ತಂಡದಿಂದ ತುಳು ಗೀತಗಾಯನ ಕಾರ್ಯಕ್ರಮ ನಡೆಯಿತು.
ಅಕಾಡೆಮಿಯ ಸದಸಯ ಸಂಚಾಲಕ ಡಾ. ವಾಸುದೇವ ಬೆಳ್ಳೆ ಸ್ವಾಗತಿಸಿದರು. ವೇದಿಕೆಯಲ್ಲಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಉಪಸ್ಥಿತರಿದ್ದರು.
ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿರು. ವಿದ್ಯಾಶ್ರೀ ಎಸಂ. ವಂದಿಸಿದರು.