ಪ್ರೊ. ಬಿ.ಎಂ. ಇಚ್ಲಂಗೋಡುರವರ ‘ಬದುರುಲ್ ಮುನೀರ್’ ಪ್ರಣಯ ಕಥನ ಕೃತಿ ಲೋಕಾರ್ಪಣೆ
ಮಂಗಳೂರು, ಜ.15: ಪ್ರೊ.ಬಿ.ಎಂ. ಇಚ್ಲಂಗೋಡು ತಮ್ಮ ‘ಬದುರುಲ್ ಮುನೀರ್’ ಪ್ರಣಯ ಕಥನ ಕೃತಿಯ ಮೂಲಕ ಸಮುದಾಯಗಳು ಹಾಗೂ ಭಾಷೆಗಳ ನಡುವೆ ಹೊಸ ಬಾಂಧವ್ಯದ ಬೆಸುಗೆ ಮೂಡಿಸಿದ್ದಾರೆ ಎಂದ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ, ಡೀನ್ ಪ್ರೊ.ಎ.ವಿ. ನಾವಡ ಅಭಿಪ್ರಾಯಿಸಿದ್ದಾರೆ.
ಅವರು ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿ.ಎಂ.ಇಚ್ಲಂಗೋಡು ಅವರ ‘ಬದುರುಲ್ ಮುನೀರ್’ ಪ್ರಣಯ ಕಥನ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ಈ ವಿಶಿಷ್ಟ ಕಥೆಯು 19ನೆ ಶತಮಾನದಲ್ಲಿಯೇ ಕೇರಳದಲ್ಲಿ ಜನಪ್ರಿಯವಾಗಿದ್ದರೂ ಕನ್ನಡಕ್ಕೆ ಭಾಷಾಂತರಗೊಳ್ಳಲು ಇಷ್ಟು ದಿನ ಕಾಯಬೇಕಾಯಿತು. ಬ್ಯಾರಿ ಸಂಸ್ಕೃತಿಯನ್ನು ಕನ್ನಡಿಗರಿಗೆ ಅನಾವರಣಗೊಳಿಸಿ ಅದ್ಭುತ ಕೃತಿಯನ್ನು ಇಚ್ಲಂಗೋಡು ನೀಡಿದ್ದಾರೆ ಎಂದು ಅವರು ಹೇಳಿದರು.
ಕೃತಿಕರ್ತೃ ಪ್ರೊ. ಬಿ.ಎಂ. ಇಚ್ಲಂಗೋಡು ಮಾತನಾಡಿ, ಕರಾವಳಿ ಕರ್ನಾಟಕದ ಬ್ಯಾರಿ ಸಮುದಾಯದಲ್ಲಿ ಸಾಮಾನ್ಯವಾಗಿದ್ದ ಮಾಪ್ಲಪಾಟು ಹಾಡುಗಳಲ್ಲಿ ಜನಪ್ರಿಯವಾಗಿದ್ದ ಬದುರುಲ್ ಮುನೀರ್ ಹುಸುನುಲ್ ಜಮಾಲ್ ಪ್ರಣಯ ಕಾವ್ಯ. 19ನೆ ಶತಮಾನದಲ್ಲಿ ಕೇರಳದ ಮಲಪ್ಪುರಂ ಸಮೀಪದ ಕುಂಡೋಟ್ಟಿಯಲ್ಲಿದ್ದ ಕವಿ ಮೊಯಿನ್ ಕುಟ್ಟಿ ವೈದ್ಯರು ಅರಬಿ ಮಲಯಾಳ ಭಾಷೆಯಲ್ಲಿ ಬರೆದ ಪ್ರಣಯ ಕಾವ್ಯದ ಕನ್ನಡ ಗದ್ಯರೂಪ ಇದು. ಅರಬಿ ಮಲಯಾಳ ಎಂಬುದು ಸಂಸ್ಕೃತ, ಅರಬಿ, ತಮಿಳು, ಮಲಯಾಳ, ಬ್ಯಾರಿ, ತುಳು, ಉರ್ದು ಭಾಷಾ ಪದಗಳು ಸೇರಿದ ಒಂದು ಮಿಶ್ರ ಭಾಷೆ. ಮಲಯಾಳದಲ್ಲಿ ಶ್ರೇಷ್ಠ ಸಾಹಿತ್ಯಗಳು ಬರುವ ಮೊದಲೇ ಈ ಕಾವ್ಯ ಕೇರಳದಲ್ಲಿ ಜನಪ್ರಿಯವಾಗಿತ್ತು. ಮಾಪ್ಲಪಾಟು ಎಂಬ ಸಾಹಿತ್ಯ ಪ್ರಕಾರವನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿತ್ತು ಎಂದು ವಿವರ ನೀಡಿದರು.
ಈ ಸಂದರ್ಭ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಕನ್ನಡ ಸಂಘದ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್, ಕೋಶಾಧಿಕಾರಿ ಜೀವನ್ ಉಪಸ್ಥಿತರಿದ್ದರು.