ಡಾ. ವಾಮನ ನಂದಾವರ್‌ರ ತುಳು ಮೂಲ ಸಹಿತ ಕನ್ನಡ, ಇಂಗ್ಲಿಷ್, ಹಿಂದಿ ಅನುವಾದಿತ ಕೃತಿಗಳ ಅನಾವರಣ
ಮಂಗಳೂರು, ಜ.27: ಜಾನಪದ ವಿದ್ವಾಂಸ ಡಾ. ವಾಮನ ನಂದಾವರ ಅವರ ತುಳು ಮೂಲ ಕಥಾ ಸಂಕಲನ ಮತ್ತು ಅದರ ಕನ್ನಡ, ಇಂಗ್ಲಿಷ್, ಹಿಂದಿ ಅನುವಾದಿತ ಕೃತಿಗಳ ಬಿಡುಗಡೆ ಕಾರ್ಯಕ್ರಮವು ತುಳು ಅಕಾಡಮಿಯ ತುಳು ಚಾವಡಿಯಲ್ಲಿ ಶನಿವಾರ ನಡೆಯಿತು.
ಕೃತಿಗಳನ್ನು ಬಿಡುಗಡೆಗೊಳಿಸಿದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಬಿ.ಸುರೇಂದ್ರ ರಾವ್ ‘ತುಳು ಭಾಷೆಯ ಬಗ್ಗೆ ತುಳುವರಿಗೆ ಅಭಿಮಾನವಿದ್ದರೆ ಸಾಲದು. ಇತರರಿಗೂ ಅಭಿಮಾನ ಹುಟ್ಟಿಸುವ ಕೆಲಸ ಆಗಬೇಕು. ಜೊತೆಗೆ ತುಳುವಿನ ಬಗ್ಗೆ ಪರರಿಗೆ ಇರುವ ಮಾಹಿತಿಯ ಕೊರತೆಯನ್ನು ನೀಗಿಸಬೇಕು. ಯಾವುದೇ ಭಾಷೆಯ ಸಾಹಿತ್ಯವಾಗಲಿ ಅದು ಅನುವಾದಗೊಂಡರೆ ಅದರ ಹಿರಿಮೆ ಹೆಚ್ಚಲಿದೆ. ತುಳು ಕೃತಿಗಳು ಕೂಡ ಇತರ ಭಾಷೆಗಳಿಗೆ ಇನ್ನಷ್ಟು ಅನುವಾದಗೊಳ್ಳಬೇಕು. ಆವಾಗ ತುಳು ವಿಶ್ವವ್ಯಾಪಿಯಾಗಲಿದೆ’ ಎಂದರು.
ಹಿರಿಯ ಲೇಖಕಿ ಬಿ.ಎಂ.ರೋಹಿಣಿ ಹಿಂದಿ ಆವೃತ್ತಿಯ ಪರಿಚಯ ಮಾಡಿದರು. ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ. ವಾಮನ ನಂದಾವರ, ಅನುವಾದಕ ಪ್ರೊ. ಸೌರಭ್ ಆರ್. ಚಿಪ್ಳೂಣ್ಕರ್, ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಉಪಸ್ಥಿತರಿದ್ದರು.
ಅಕಾಡಮಿಯ ಸದಸ್ಯರಾದ ಪ್ರಭಾಕರ ನೀರುಮಾರ್ಗ ಸ್ವಾಗತಿಸಿದರು. ತಾರನಾಥ ಗಟ್ಟಿ ಕಾಪಿಕಾಡು ವಂದಿಸಿದರು. ನರೇಶ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.
*‘ತೆಲಿಕೆ ನಲಿಕೆದ ಕಿನ್ಯ ಕತೆಕುಲು’ ಡಾ. ವಾಮನ ನಂದಾವರ ಅವರ ಮೂಲ ತುಳು ಕೃತಿಯಾಗಿದ್ದು, ಕನ್ನಡಕ್ಕೆ (ನಗೆಬಗೆಯ ಕಿರುಗತೆಗಳು) ಸ್ವತಃ ಅವರೇ ಅನುವಾದಿಸಿದ್ದಾರೆ. ಇಂಗ್ಲಿಷ್‌ಗೆ (ಫನ್ ಟೈಮ್ ಶೋರ್ಟ್ ಸ್ಟೋರೀಸ್) ಪ್ರೊ. ಸೌರಭ ಆರ್. ಚಿಪ್ಳೂಣ್ಕರ್ ಹಾಗೂ ಹಿಂದಿಗೆ (ತುಳು ಹಾಸ್ಯ ಕಥಾಯೆ) ಡಾ. ಸ್ಮಿತಾ ಚಿಪ್ಳೂಣ್ಕರ್ ಅನುವಾದಿಸಿದ್ದಾರೆ.