ವಿ.ಎಂ.ಇನಾಂದಾರ್ ಪ್ರಶಸ್ತಿಗೆ ಬಿ.ವಿ.ಕೆದಿಲಾಯ ಪುಸ್ತಕ ಆಯ್ಕೆ
ಉಡುಪಿ, ಫೆ.12: ಖ್ಯಾತ ವಿಮರ್ಶಕ ಪ್ರೊ. ವಿ.ಎಂ ಇನಾಂದಾರ್ ನೆನಪಿನಲ್ಲಿ ನೀಡುವ 2017ನೇ ಸಾಲಿನ ‘ಇನಾಂದಾರ್ ವಿಮರ್ಶಾ ಪ್ರಶಸ್ತಿ’ಗೆ ಹಿರಿಯ ಲೇಖಕ ಬಿ.ವಿ. ಕೆದಿಲಾಯ ಇವರ ‘ಅಡಿಗ ನೆನಪು ಅಡಿಗಡಿಗೆ’ ಕೃತಿ ಆಯ್ಕೆಯಾಗಿದೆಯೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಪ್ರಕಟಣೆ ತಿಳಿಸಿದೆ.
ಫೆ.20ರಂದು ನಡೆಯುವ ಎಂಜಿಎಂ ಕಾಲೇಜಿನ ವಾರ್ಷಿಕ ಸಾಹಿತ್ಯೋತ್ಸವ ಸಂದರ್ಭದಲ್ಲಿ ಬಿ.ವಿ. ಕೆದಿಲಾಯ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಉಡುಪಿ ತಾಲೂಕಿನ ಬಾಳೆಕುದ್ರು ಗ್ರಾಮದಲ್ಲಿ ಪ್ರಸಿದ್ಧ ಸಂಸ್ಕೃತ ವಿದ್ವಾಂಸರ ಮನೆತನದಲ್ಲಿ 1937ರಲ್ಲಿ ಜನಿಸಿದ ಕೆದಿಲಾಯ ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯಗಳ ಅಧ್ಯಯನ, ಪತ್ರಿಕೆಗೆ ಬರೆಯುವ ಹವ್ಯಾಸ ರೂಢಿಸಿಕೊಂಡರು. ಭಾರತೀಯ ಜೀವವಿಮಾ ನಿಗಮದಲ್ಲಿ ಉದ್ಯೋಗಿಯಾಗಿ ವಿವಿಧ ಹುದ್ದೆಗಳಲ್ಲಿ ದುಡಿದು 1995ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಅಧ್ಯಯನ, ಕನ್ನಡದಲ್ಲಿ ಲೇಖನ ವ್ಯವಸಾಯ ಮಾಡಿ 7 ಸ್ವತಂತ್ರ ಪುಸ್ತಕಗಳನ್ನೂ, ನೂರಾರು ಲೇಖನಗಳನ್ನೂ ಬರೆದಿದ್ದು ಅವು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕನ್ನಡದ ನವ್ಯ ಕಾವ್ಯದ ಪ್ರವರ್ತಕ ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯದ ಕುರಿತು ಅನೇಕ ವರ್ಷಗಳ ಕಾಲ ಅಧ್ಯಯನ ಮಾಡಿ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯವಲ್ಲದೆ, ಸಂಗೀತ, ಯಕ್ಷಗಾನ, ವೇದಾಂತಗಳಲ್ಲೂ ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಬೆಂಗಳೂರಿನ ಶಿವರಾಮ ಕಾರಂತ ವೇದಿಕೆ ಪ್ರಕಟಿಸುತ್ತಿರುವ ಹಣತೆ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.