ದೇವಾಲಯಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ಸರಕಾರ ನಿಲ್ಲಿಸಲಿ: ಡಾ.ಹಂಪ ನಾಗರಾಜಯ್ಯ
ಉಡುಪಿ, ಜೂ.8: ದೇವಾಲಯಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಲ್ಲಿಸಬೇಕು. ಇದನ್ನು ಪ್ರಧಾನಿ ಅಥವಾ ಆಳುವ ಸರಕಾರ ಗಂಭೀರವಾಗಿ ಪರಿಗಣಿಸ ಬೇಕು. ಆಯಾ ಧರ್ಮದವರು ಅವರವರ ದೇವಾಲಯದಲ್ಲಿ ಪ್ರಾರ್ಥನೆಯನ್ನು ಮಾಡಲಿ. ಆದರೆ ಧ್ವನಿವರ್ಧಕ ಬಳಸುವುದು ನಿಲ್ಲಲಿ ಎಂದು ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಹೇಳಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಭಾರತ ರಜೆಗಳ ರಾಷ್ಟ್ರ ಆಗಿದೆ. ಜಗತ್ತಿನ ಯಾವುದೇ ರಾಷ್ಟ್ರಗಳಲ್ಲಿ ಇಷ್ಟೊಂದು ರಜೆ ಇಲ್ಲ. ಜಾತ್ಯತೀತ ರಾಷ್ಟ್ರ ಎನಿಸಿರುವ ಇಲ್ಲಿ ಜಾತಿಗೊಂದು ರಜೆ ನೀಡಲಾಗುತ್ತದೆ. ದೇಶದ ಪ್ರಗತಿಗೆ ಕುಂಠಿತವಾಗಿರುವ ರಜೆಗಳನ್ನು ಕಡಿತಗೊಳಿಸಿ, ಇಡೀ ದೇಶ ಆಚರಿಸುವ ಆ.15ರ ಸ್ವಾತಂತ್ರ ದಿನಾಚರಣೆಗೆ ಒಂದೇ ಒಂದು ರಜೆ ನೀಡಿದರೆ ಸಾಕು. ಈ ಕುರಿತು ಪ್ರಧಾನಿ ಲೋಕಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಡಾ.ಎಚ್.ಶಾಂತಾರಾಮ್, ಪ್ರೊ.ತಾಳ್ತಜೆ ವಸಂತ ಕುಮಾರ್, ಪ್ರೊ.ಕೆ.ಪಿ. ರಾವ್, ಡಾ.ಎಸ್.ಜೆ.ಭಟ್, ಪ್ರೊ. ವರದೇಶ ಹಿರೇಗಂಗೆ ಉಪಸ್ಥಿತರಿದ್ದರು.