ಸುಲಭವಾಗಿ ವಿಮರ್ಶಿಸಲು ಸಾಧ್ಯವಿಲ್ಲದಿರುವುದೇ ಕವಿತೆ: ಡಾ.ಎಚ್.ಎಸ್.ವೆಂಕಟೇಶಮೂರ್ತಿ
ಉಡುಪಿ, ಆ.4: ಇಂದು ಕವಿತೆಗೆ ನವೋದಯ ಕಾಲದಲ್ಲಿದ್ದ ಆಕರ್ಷಣೆ ಗಳಿಲ್ಲ. ಸಂವಾದ ಕಾವ್ಯ ಆಗಲ್ಲ. ಕಾವ್ಯ ಎಂಬುದು ಸೂಕ್ಷ್ಮ ವಸ್ತು. ಯಾವುದನ್ನು ನಾವು ಸುಲಭವಾಗಿ ವಿಮರ್ಶಿಸಲು ಆಗುವುದಿಲ್ಲವೋ ಅದುವೇ ಕವಿತೆ ಎಂದು ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದ್ದಾರೆ.
ಉಡುಪಿ ಅಮೋಘ ಆಶ್ರಯದಲ್ಲಿ ಎಂಜಿಎಂ ಕಾಲೇಜು ಹಾಗೂ ಯು ಚಾನೆಲ್‌ನ ಸಹಯೋಗದಲ್ಲಿ ಶನಿವಾರ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ಪೂರ್ಣಿಮಾ ಸುರೇಶ್ ಅವರ ‘ಅಕ್ಕನಂತೊಬ್ಬಳು ಅನುರಕ್ತೆ’ ಕವನ ಸಂಕಲ ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಕಾವ್ಯ ಸಂವೇದನೆ ಇರುವವರಿಗೆ ಮಾತ್ರ ಕವಿತೆ ಯಾವುದು ಎಂಬುದು ಗೊತ್ತಾಗುತ್ತದೆ. ಯಾವುದು ಕವಿತೆ ಅಲ್ಲ ಎಂದು ಹೇಳುವುದು ಸುಲಭ. ಆದರೆ ಕವಿತೆ ಯಾವುದು ಅಂತ ಹೇಳುವುದು ಕಷ್ಟ. ಕವಿತೆಗಳ ವಿನ್ಯಾಸ, ಮೀಮಾಂಸೆ ಯನ್ನು ಮಾಡಿಕೊಂಡು ಬಂದವರಿಗೂ ಕೂಡ ಕವಿತೆಯ ನಿಜ ಸ್ವರೂಪ ಖಚಿತವಾಗಿ ಗೊತ್ತಿಲ್ಲ ಎಂದರು.
ಇಡೀ ಕಾವ್ಯದ ಇತಿಹಾಸ ಕಾವ್ಯ ಏನು ಎಂಬುದರ ಹುಡುಕಾಟದಲ್ಲಿ ತೊಡಗಿದೆ. ಅಲಂಕಾರವೇ ಇಲ್ಲದ ಕಾವ್ಯಗಳಿವೆ. ಅಲಂಕಾರ ಕಾವ್ಯವನ್ನು ಮಾಡುತ್ತದೆ ಎಂಬ ನಂಬಿಕೆ ನಮಗೆ ಇರಬೇಕಾಗಿಲ್ಲ. ಕೆಲವು ಕಾವ್ಯಗಳಲ್ಲಿ ಚಿತ್ರ, ರೂಪಕಗಳೇ ಇಲ್ಲ. ಕವಿತೆ ಯಾವುದು, ಕವಿತೆ ಎಲ್ಲಿದೆ ಎಂಬುದೇ ದೊಡ್ಡ ಪ್ರಶ್ನೆ. ಕವಿತೆ ಸುಲಭವಾಗಿ ಅರ್ಥವೇ ಆಗುವುದಿಲ್ಲ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕವಿ ಬಿ.ಆರ್.ಲಕ್ಷ್ಮಣ್ ರಾವ್, ಪೂರ್ಣಿಮಾ ಸುರೇಶ್ ಅವರ ಶಬ್ದಾರ್ಥ್ ಹಾಗೂ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಆಕಾಶ ಬುಟ್ಟಿ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ವಹಿಸಿದ್ದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಜಿ.ವಿಜಯ, ಪೂರ್ಣಿಮಾ ಸುರೇಶ್, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ರಮೇಶ್‌ಚಂದ್ರ ಉಪಸ್ಥಿತರಿದ್ದರು. ಅಮೋಘ ನಿರ್ದೇಶಕ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿದರು. ಮೈಥಿಲಿ ಕಾರ್ಯಕ್ರಮ ನಿರೂಪಿಸಿದರು.