ಭಾರತದ ಬೌದ್ಧಿಕ ಸಂಪತ್ತಿನ ಬಗ್ಗೆ ಕೀಳರಿಮೆ ಬೇಡ: ಡಾ.ಬಿ.ಎಂ.ಹೆಗ್ಡೆ
ಮಂಗಳೂರು, ನ. 4: ಜಗತ್ತಿನಲ್ಲಿ ಶ್ರೇಷ್ಠವಾದ ಬೌದ್ಧಿಕ ಸಂಪತ್ತು ಭಾರತದಲ್ಲಿದೆ. ಆದರೆ ಅದರ ಮಹತ್ವದ ಬಗ್ಗೆ ನಮಗೆ ಅರಿವಿನ ಕೊರತೆ ಇದೆ. ನಮ್ಮ ಜ್ಞಾನ ಸಂಪತ್ತಿನ ಬಗ್ಗೆ ನಮಗೆ ಕೀಳರಿಮೆ ತೊಡದು ಹಾಕಬೇಕಾಗಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ಬಿ.ಎಂ. ಹೆಗ್ಡೆ ತಿಳಿಸಿದ್ದಾರೆ.
ಅವರು ನಗರದ ಟಿಎಂಎಪೈ ಸಭಾಂಗಣದಲ್ಲಿ ದಿ ಐಡಿಯಾ ಆಫ್ ಭಾರತದ ಮಂಗಳೂರು ಸಂಘಟನೆಯ ವತಿಯಿಂದ ಹಮ್ಮಿಕೊಂಡ ಎರಡು ದಿನಗಳ ಮಂಗಳೂರು ಲಿಟ್ ಫೆಸ್ಟ್ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಭಾರತೀಯ ಚಿಂತನೆಗಳು ಜಗತ್ತಿನ ಇತರ ದೇಶಗಳ ಚಿಂತನೆಗಳಿಂದಲೂ ಹೆಚ್ಚು ಮಹತ್ವದ್ದಾಗಿದೆ. ಭಾರತದ ಆಕ್ಯುಪಂಚರ್ನ್ನು ಚೀನಾ ದೇಶ ಪೇಟೆಂಟ್ ಪಡೆದು ಬಳಸಿಕೊಳ್ಳುತ್ತಿದೆ. ಆರ್ಯು ವೇದದ ಬಗ್ಗೆ ನಮ್ಮ ದೇಶದ ಮಹತ್ವದ ವಿಚಾರಗೋಷ್ಠಿಯಲ್ಲಿ ಪ್ರಸ್ತಾಪಿಸುತ್ತಿದ್ದಾಗ ನನ್ನನ್ನು ಟೀಕಿಸುತ್ತಿದ್ದರು. ವಿದೇಶಿಯರು ಆರ್ಯ ವೇದದ ಕಡೆಗೆ ಆಕರ್ಷಿತರಾಗಿದ್ದಾರೆ. ಕಾರಣ ಟೀಕಿಸುತ್ತಿದ್ದವರಿಗೆ ಆರ್ಯ ವೇದದ ಮಹತ್ವ ತಿಳಿದಿರಲಿಲ್ಲ. ಈ ಪರಿಸ್ಥಿತಿ ನಮ್ಮ ದೇಶದಲ್ಲಿದೆ. ನಮ್ಮಲ್ಲಿರುವ ಕಲೆ, ವಿಜ್ಞಾನ ವೈದ್ಯಕೀಯ ಕ್ಷೇತ್ರ ಸೇರಿದಂತೆ ಜ್ಞಾನ ಸಂಪತ್ತಿನ ಮೌಲ್ಯದ ಬಗ್ಗೆ ಅರಿವಿನ ಕೊರತೆಯಿಂದ ವಿದೇಶಿಯರು ಲಾಭ ಪಡೆಯುತ್ತಿದ್ದಾರೆ. ಈ ರೀತಿಯ ಪರಿಸ್ಥಿತಿ ಬದಲಾಗಬೇಕು. ಭಾರತೀಯ ಮೌಲ್ಯಗಳ ಬಗ್ಗೆ ಮೊದಲು ಭಾರತೀಯರಿಗೆ ತಿಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಅದನ್ನು ತಿಳಿಸುವ ಕೆಲಸ ಆಗಬೇಕಾಗಿದೆ ಎಂದು ಬಿ.ಎಂ.ಹೆಗ್ಡೆ ತಿಳಿಸಿದರು.
ಸಮಾರಂಭದಲ್ಲಿ ಗೋವಾ ಎನ್ಐಟಿಯ ನಿರ್ದೇಶಕ ಗೋಪಾಲ ಮೊಗೆರಾಯ, ಪ್ರಜ್ಞಾ ಪ್ರವತದ ರಾಷ್ಟ್ರಿಯ ಜೆ. ನಂದ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ ವಿಚಾರಗೋಷ್ಠಿಯಲ್ಲಿ ಕನ್ನಡ, ತುಳು, ಕೊಂಕಣಿ ಸೇರಿದಂತೆ ವಿವಿಧ ಸಂಸ್ಕೃತಿಗಳ ಬಗ್ಗೆ ವಿಚಾರ ಗೋಷ್ಠಿಯಲ್ಲಿ ಡಾ.ಚಂದ್ರಶೇಖರ ದಾಮ್ಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯಕ್ಷಗಾನ ಕಲೆಗೆ ಅಪಚಾರ ಆಗದ ರೀತಿಯಲ್ಲಿ ಅದನ್ನು ಯಾವ ಕಥೆಗೆ ಅಳವಡಿಸಿಕೊಂಡು ಬಳಸಿದರೆ ತಪ್ಪಲ್ಲ. ಏಸುಕ್ರಿಸ್ತ ಮಹಾತ್ಮೆ ಪ್ರಸಂಗ ಯಕ್ಷಗಾನದ ಚೌಕಟ್ಟಿನ ಒಳಗೆ ಪ್ರದರ್ಶಿಸಿದರೆ ತಪ್ಪಲ್ಲ ಎಂದು ಯಕ್ಷಗಾನ ಕಲಾವಿದ ಡಾ. ಪ್ರಭಾಕರ ಜೋಶಿ ತಿಳಿಸಿದರು.
ಕನ್ನಡ ಸಾಹಿತ್ಯದಲ್ಲಿ 15ರಿಂದ 17 ಶತಮಾನದ ಕಾಲಘಟ್ಟದಲ್ಲಿ ಬಂದ ಭಕ್ತಿ ಚಳವಳಿ ಕೊಂಕಣಿ ಸಾಹಿತ್ಯಕ್ಕೆ ದೊರತಿಲ್ಲ. ಕೊಂಕಣಿ ಭಾಷಿಕರಾದ ಕುಡುಬಿ ಗಳಲ್ಲಿ ರಾಮಾಯಣದ ಕಥೆಗಳಿವೆ, ಖಾರ್ವಿಗಳಲ್ಲಿ ಮಹಾ ಭಾರತದ ಶ್ರವಣ ಕುಮಾರನ ಕಥೆ ಇದೆ. ಗೋವಾದಿಂದ ವಲಸೆ ಬಂದ ಕೊಂಕಣಿ ಭಾಷಿಗರು ದಕ್ಷಿಣ ಕನ್ನಡದಲ್ಲಿ ನೆಲೆಸಿ ಇಲ್ಲಿನವರಾಗಿದ್ದಾರೆ. ಭಾರತೀಯ ಸಂಸ್ಕೃತಿಯ ಒಳಗೆ ಈ ರೀತಿ ಹಲವು ಸಂಸ್ಕೃತಿ ಸೇರಿ ಹೋಗಿದೆ ಎಂದು ಕೊಂಕಣಿ ಸಾಹಿತಿ ಗುರುದತ್ ಬಂಟ್ವಾಳ್ಕರ್ ತಿಳಿಸಿದ್ದಾರೆ.
ಭೂಸುಧಾರಣೆಯ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ಪ್ರಗತಿಗೆ ಕಾರಣವಾಯಿತು. ಬಳಿಕ ಸಣ್ಣ ಹಿಡುವಳಿಗಳಾದ ಬಳಿಕ ಕೃಷಿ ಭೂಮಿ ಬಂಜರು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯತೆ ಉಳಿಯಬೇಕಾದರೆ ಮೊದಲು ಇಲ್ಲಿನ ಭಾಷೆಯಲ್ಲಿ ಶಿಕ್ಷಣ ನೀಡಲು ಮುಂದಾಗಬೇಕು. ಭಾರತೀಯತೆಯ ಬಗ್ಗೆ ಮಾತನಾಡುವವರೆ ಆಂಗ್ಲ ಭಾಷಾ ಶಾಲೆಗಳನ್ನು ತೆರೆಯುವುದು ನಿಜವಾದ ಭಾರತೀಯತೆಯಲ್ಲ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಚಂದ್ರ ಶೇಖರ ದಾಮ್ಲೆ ವಿವರಿಸಿದರು.