ಹಿರಿಯಡ್ಕದ ‘ಮದ್ದಲೆ ಮಾಂತ್ರಿಕ’ನಿಗೆ ರಾಜ್ಯೋತ್ಸವದ ಗರಿ
ಉಡುಪಿ, ನ.28: ಕರಾವಳಿಯ ಮೂರು ಜಿಲ್ಲೆಗಳ ಯಕ್ಷಗಾನ ಲೋಕದಲ್ಲಿ ‘ಮದ್ದಲೆ ಮಾಂತ್ರಿಕ’ರೆಂದೇ ಹೆಸರಾದ ಹಿರಿಯಡಕ ಗೋಪಾಲರಾಯರು ತಮ್ಮ 99ರ ಹರೆಯದಲ್ಲೂ ನವತಾರುಣ್ಯದ ಎಲ್ಲಾ ಛಾಪನ್ನು ತೋರಿಸಿ ಈಗಲೂ ಕಲಾಪ್ರೇಮಿಗಳು ಮತ್ತು ತನ್ನ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುತಿದ್ದಾರೆ. ಇದೀಗ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿಯೂ ಮುಡಿಗೇರಿದೆ.
ಮುಂದಿನ ಡಿ.15ಕ್ಕೆ 99 ವರ್ಷಗಳನ್ನು ಪೂರ್ಣಗೊಳಿಸಿ 100ನೇ ವರ್ಷಕ್ಕೆ ಕಾಲಿರಿಸುವ ಯಕ್ಷಗಾನದ ಈ ಹಿರಿಯಜ್ಜನ ಅಂದಿನ ಅದ್ಭುತ ಮದ್ದಲೆ ಮಾಂತ್ರಿಕ ಶಕ್ತಿ ಕ್ಷೀಣಿಸದೇ ಇರುವುದು ವಿಶೇಷವಾಗಿದೆ.
ಕಳೆದ ಡಿಸೆಂಬರ್ನಲ್ಲಿ ಅವರ 99ನೇ ಹುಟ್ಟುಹಬ್ಬದ ದಿನದಂದು ಅವರು ತಮ್ಮ ಸುಲಲಿತ ಮದ್ದಲೆ ವಾದನದ ಮೂಲಕ ಅಂದು ಹಿರಿಯಡ್ಕ ಓಂತಿಬೆಟ್ಟಿನ ಅವರ ‘ಸೀತಾರಾಮ ನಿಲಯ’ದಲ್ಲಿ ಸೇರಿದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರು. ಕೈಗೆ ಮದ್ದಲೆ ಸಿಕ್ಕಿದರೆ, ತಾವೇ ಮಟ್ಟುಗಳನ್ನು ಹಾಕಿ, ಅದಕ್ಕೆ ಸರಿಯಾಗಿ ತನ್ನ ಬೆರಳುಗಳಿಂದ ಮದ್ದಲೆಯನ್ನೂ ನುಡಿಸುವ ಗೋಪಾಲರಾಯರ ಲವಲವಿಕೆ ಅರ್ಧ ತಮಾನಗಶಷ್ಟು ಹಿಂದೆ ಇದ್ದಂತಿದೆ.
1919ರ ಡಿ.15ರಂದು ಹಿರಿಯಡ್ಕದಲ್ಲಿ ಜನಿಸಿದ ಗೋಪಾಲರಾಯರು ಕಲಿತಿದ್ದು 6ನೇ ತರಗತಿಯವರೆಗೆ ಮಾತ್ರ. ಆದರೆ ಯಕ್ಷಗಾನ ಚೌಕಿ ಹಾಗೂ ರಂಗಸ್ಥಳ ದಲ್ಲಿ ಅವರು ಕಲಿತಿದ್ದು ಬದುಕಿನ ಕಲೆಯನ್ನು. 16ನೇ ವಯಸ್ಸಿನಲ್ಲಿ ತಂದೆ ಶೇಷಗಿರಿ ರಾವ್ ಇವರಿಂದ ಮದ್ದಲೆಯನ್ನು ಅಭ್ಯಾಸ ಮಾಡಿದ ಗೋಪಾಲರಾಯರು, ನೃತ್ಯವನ್ನು ಗುರು ನಾಗಪ್ಪ ಕಾಮತರಿಂದ ಕಲಿತರು. 1934ರಲ್ಲಿ ಹಿರಿಯಡ್ಕ ಮೇಳದಲ್ಲಿ ಪಾತ್ರಧಾರಿಯಾಗಿ ಪ್ರವೇಶ ಪಡೆದ ಅವರು 1936ರಲ್ಲಿ ಸಹ ಮದ್ದಲೆ ಕಲಾವಿದರಾದರು. ಮುಂದಿನ ವರ್ಷವೇ ಪೆರ್ಡೂರು ಮೇಳದಲ್ಲಿ ಪ್ರಧಾನ ಮದ್ದಲೆಕಾರರಾಗಿ ಸೇರಿದ ಗೋಪಾಲರಾಯರು ನಂತರ ಹಿಂದಿರುಗಿ ತಿರುಗಿ ನೋಡಲಿಲ್ಲ.
1939ರಿಂದ 67ರವರೆಗೆ ಅವರು ಅಂದು ಬಡಗುತಿಟ್ಟಿನ ಪ್ರಧಾನ ಮೇಳ ವಾದ ಮಂದಾರ್ತಿ ಮೇಳದ ಪ್ರಧಾನ ಮದ್ದಲೆಕಾರರಾಗಿ ದುಡಿದರು.ಈ ನಡುವೆ 1961ರಲ್ಲಿ ಕೋಟ ಶಿವರಾಮ ಕಾರಂತರ ಸಂಪರ್ಕಕ್ಕೆ ಬಂದ ಗೋಪಾಲರಾಯರು, ಅವರ ಯಕ್ಷಗಾನ ನೃತ್ಯಗಳಿಗೆ ಹಾಗೂ ಯಕ್ಷಗಾನ ಗೋಷ್ಠಿಗಳಲ್ಲಿ ಮದ್ದಲೆಕಾರರಾಗಿ ಕಾರ್ಯನಿರ್ವಹಿಸಿದರು. ಕಾರಂತರ ಒಡನಾಟ ಸಿಕ್ಕ ಬಳಿಕ ಗೋಪಾಲರಾಯರ ಯಕ್ಷಗಾನ ಬದುಕಿಗೆ ಹೊಸ ದಾರಿ ದೊರೆತಂತಾಯಿತು.
ಮುಂದೆ 1968ರಲ್ಲಿ ಕಾರಂತರು ಬ್ರಹ್ಮಾವರದಲ್ಲಿ ಪ್ರಾರಂಭಿಸಿದ ಯಕ್ಷಗಾನ ಕೇಂದ್ರಕ್ಕೆ ಅಧ್ಯಾಪಕರಾಗಿ ಸೇರಿದರು. ಮರುವರ್ಷ ಪೀಟರ್ ಕ್ಲಾಸ್ರ ಜೊತೆ ಕ್ಯಾಲಿಫೋರ್ನಿಯ ವಿವಿಯಲ್ಲಿ ಕೆಲಸ ಮಾಡಿದರು. 1970ರಲ್ಲಿ ಕಾರಂತರ ಸಲಹೆಯಂತೆ ಉಡುಪಿಗೆ ಮರಳಿದ ಗೋಪಾಲರಾಯರು, ಇಲ್ಲಿ ಯಕ್ಷಗಾನದಲ್ಲಿ ಡಾಕ್ಟರೇಟ್ ಮಾಡಲು ಬಂದ ಮಾರ್ತಾ ಆಸ್ಟನ್ಗೆ ಯಕ್ಷಗಾನ ನೃತ್ಯ ಕಲಿಸಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದರು.
1971ರಿಂದ ಐದು ವರ್ಷಗಳ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕರಾಗಿ ದುಡಿದು, 1976ರಲ್ಲಿ ಕೇಂದ್ರದಿಂದ ನಿವೃತ್ತರಾದರು. ಬಳಿಕ ಯಕ್ಷಗಾನ ಪ್ರಚಾರಕ್ಕಾಗಿ ಮಾರ್ತಾ ಜೊತೆ ಯಕ್ಷಗಾನ ತಂಡದೊಂದಿಗೆ ವಿದೇಶಕ್ಕೆ ಕೊಂಡೊಯ್ದು ಪ್ರಾತ್ಯಕ್ಷಿಕೆ ನೀಡಿದರು. ಈ ಮದ್ಯೆ 1973ರಲ್ಲಿ ಬಿ.ವಿ.ಕಾರಂತರ ಜೊತೆ ಹೊಸದಿಲ್ಲಿಯ ಎನ್ಎಸ್ಡಿಯಲ್ಲೂ ಶಿಬಿರದಲ್ಲಿ ಪಾಲ್ಗೊಂಡರು.
ಆ ಬಳಿಕವೂ ಹಲವು ಬಾರಿ ಯಕ್ಷಗಾನ ತಂಡಗಳೊಂದಿಗೆ ವಿದೇಶಿ ಪ್ರಯಾಣ ನಡೆಸಿದ ಗೋಪಾಲರಾಯರಿಗೆ 1972ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1997ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 1998ರಲ್ಲಿ ಜಾನಪದಶ್ರೀ ಪ್ರಶಸ್ತಿ, 2012ರಲ್ಲಿ ಜಾನಪದ ಸಿರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಲಾ ಉತ್ಸವಗಳಲ್ಲಿ ಯಕ್ಷಗಾನದ ಕುರಿತಂತೆ ಪ್ರಾತ್ಯಕ್ಷಿಕೆ, ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ.