ನೃತ್ಯ ಗುರು ಕುದ್ಕಾಡಿ ವಿಶ್ವನಾಥ ರೈ ನಿಧನ
ಪುತ್ತೂರು, ಡಿ.16: ನೃತ್ಯ ಗುರು, ನಿವೃತ್ತ ಶಿಕ್ಷಕ ಕುದ್ಕಾಡಿ ವಿಶ್ವನಾಥ ರೈ (86) ರವಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಪದಡ್ಕ ನಿವಾಸಿಯಾಗಿದ್ದ ವಿಶ್ವನಾಥ ರೈಯವರಿಗೆ ಇಂದು ರಾತ್ರಿ ಅವರ ನಿವಾಸದಲ್ಲಿ ಹೃದಯಾಘಾತ ವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿದ್ದ ರೈ ರಚಿಸಿದ ‘ನರ್ತನ ಜಗತ್’ ಕೃತಿ ನೃತ್ಯ ಕಲಾವಿದರಿಗೆ ಉಪಯುಕ್ತ ಮಾಹಿತಿಯನ್ನೊಳಗೊಂಡಿದೆ. ಇವರು ಪುತ್ತೂರಿನ ಸಂತ ಫಿಲೋಮಿನಾ ಶಾಲೆಯಲ್ಲಿ ಅಧ್ಯಾಪಕರಾಗಿ 35 ವರ್ಷ ಸೇವೆ ಸಲ್ಲಿಸಿದ್ದರು. ತುಳು ಭಾಷೆಯ ಅಭಿವೃದ್ಧಿಗಾಗಿ ಇವರು ಶ್ರಮಿಸಿದ್ದಾರೆ.
ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ‘ಕರ್ನಾಟಕ ಕಲಾಶ್ರೀ’ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಾಹಿತ್ಯ ಗೌರವ ಪ್ರಶಸ್ತಿ’ ಇತ್ಯಾದಿ ಪ್ರಶಸ್ತಿಗಳಿಗೂ ಇವರು ಪಾತ್ರರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಶಿಷ್ಯಂದಿರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ.