ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಮಂಗಳೂರು, ಡಿ.19: ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ದ.ಕ.ಜಿಲ್ಲಾ ಘಟಕದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹಾಡಿ, ಸೌಹಾರ್ದ ಕರ್ನಾಟಕದ ಕನಸು ಕಂಡ ಕವಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವ ಸಮೂಹದ ಮನದಲ್ಲಿ ಸಹಬಾಳ್ವೆ ಮತ್ತು ಸೌಹಾರ್ದತೆಯ ಆಶಯ ಬಿತ್ತಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಪ್ರಬಂಧ ಸ್ಪರ್ಧೆಯಲ್ಲಿ ದ.ಕ.ಜಿಲ್ಲೆಯ ಪದವಿ ಪೂರ್ವದಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ಸ್ಪರ್ಧಿಸಲು ಮುಕ್ತ ಅವಕಾಶವಿದೆ.
‘ತುಳುನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸುವುದು ಹೇಗೆ?’ ಎಂಬ ವಿಷಯದಲ್ಲಿ ಐನೂರು ಪದಗಳಿಗೆ ಮೀರದಂತೆ ಸ್ಪಷ್ಟವಾಗಿ ಕೈ ಬರಹದಲ್ಲಿ ಬರೆದು ಡಿ.31ರೊಳಗೆ ‘ದೇರಳಕಟ್ಟೆ ಡಯೋಗ್ನೋಸ್ಟಿಕ್ಸೃ್ ಆ್ಯಂಡ್ ಪಾಲಿಕ್ಲಿನಿಕ್, ದೇರಳಕಟ್ಟೆ, ಮಂಗಳೂರು -574018’ ಈ ವಿಳಾಸಕ್ಕೆ ಕಳುಹಿಸಬೇಕು. ವಿದ್ಯಾರ್ಥಿಯ ಹೆಸರು, ಕಾಲೇಜಿನ ವಿಳಾಸ ಮತ್ತು ಕಲಿಯುತ್ತಿರುವ ತರಗತಿ ನಮೂದಿಸಬೇಕು. ಪ್ರಬಂಧದ ಕೊನೆಯಲ್ಲಿ ಕಾಲೇಜಿನ ಮೊಹರು (ಸೀಲ್) ಹಾಕಬೇಕು.
ಸ್ಪರ್ಧಾರ್ಥಿಯ ದೂರವಾಣಿ ಮತ್ತು ಕಾಲೇಜಿನ ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ಪ್ರಬಂಧವನ್ನು ಖಾಲಿ ಹಾಳೆಯ ಒಂದು ಮಗ್ಗುಲಲ್ಲಿ ಬರೆಯಬೇಕು. ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ ಪ್ರಬಂಧಗಳಿಗೆ ಕ್ರಮವಾಗಿ 3,000, 2,000, 1,000 ರೂ.ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸಿದ ವಿದ್ಯಾರ್ಥಿ/ವಿದ್ಯಾರ್ಥಿನಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಮಾಹಿತಿಗಾಗಿ ಮೊ.ಸಂ.9880842203 ಸಂಪರ್ಕಿಸಬಹುದು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ.ಜಿಲ್ಲಾ ಕಾರ್ಯದರ್ಶಿ ಇಸ್ಮತ್ ಪಜೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.