ಉಡುಪಿ: ‘ಕೆಮ್ತೂರು ತುಳು ನಾಟಕ ಹಬ್ಬ’ ಉದ್ಘಾಟನೆ
ಉಡುಪಿ, ಡಿ. 22: ಉಡುಪಿ ತುಳುಕೂಟದ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಎಂಟು ದಿನಗಳ ದಿ.ಕೆಮ್ತೂರು ದೊಡ್ಡಣ ಶೆಟ್ಟಿ ಸ್ಮರಣಾರ್ಥ ತುಳುನಾಟಕ ಸ್ಪರ್ಧೆ ‘ಕೆಮ್ತೂರು ತುಳು ನಾಟಕ ಹಬ್ಬ’ವನ್ನು ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ಪ್ರಬಲ ಭಾಷೆಯಾಗಿರುವ ತುಳು, ಸಂಸ್ಕೃತಿ, ಸಂಸ್ಕಾರವನ್ನು ಕಲಿಸುತ್ತದೆ. ನಾಟಕದ ಮೂಲಕ ತುಳು ಭಾಷೆ ಬೆಳೆಯುತ್ತಿದೆ. ತುಳುವರು ಇಂದು ಜಗತ್ತಿನಲ್ಲಿ ಎಲ್ಲ ಕಾರ್ಯದಲ್ಲೂ ಮುಂಚೂ ಣಿಯಲ್ಲಿದ್ದಾರೆ. ನಮ್ಮ ಮಕ್ಕಳು ಕನ್ನಡ ಮರೆತರು ತುಳು ಭಾಷೆಯನ್ನು ಮರೆತಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ. ವಿಜಯ ಮಾತನಾಡಿದರು. ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ವಹಿಸಿದ್ದರು. ತೀರ್ಪುಗಾರರಾದ ರಾಮ್ ಶೆಟ್ಟಿ ಹಾರಾಡಿ, ಪ್ರಭಾಕರ ಜೆ.ಪಿ., ಎಂ.ಎಸ್.ಭಟ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕೆಮ್ತೂರು ಕುಟುಂಬದ ವಿಜಯ ಕುಮಾರ್ ಶೆಟ್ಟಿ, ತುಳು ಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಎಂ.ಜಿ. ಚೈತನ್ಯ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ನಾಟಕ ಸ್ಪರ್ಧೆಯ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗಚಾವಡಿ ಅಂಬಲ ಪಾಡಿ ತಂಡದಿಂದ ‘ಈ ಪೊರ್ಲು ತುವೊಡ್ಚಿ’ ನಾಟಕ ಪ್ರದರ್ಶನಗೊಂಡಿತು.