ಸಾಹಿತಿ ಪ್ರೊ.ಅಮೃತ ಸೋಮೇಶ್ವರರಿಗೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ
ಉಡುಪಿ, ಡಿ.24: ಖ್ಯಾತ ಸಾಹಿತಿ, ತುಳು ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ ಇವರಿಗೆ 2018ನೇ ಸಾಲಿನ ರಾಷ್ಟ್ರಕವಿ ಎಂ. ಗೋವಿಂದ ಪೈ ಪ್ರಶಸ್ತಿಯನ್ನು ನೀಡಿ ಗೌರವಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಮಣಿಪಾಲ ಗ್ಲೋಬಲ್‌ನ ಮುಖ್ಯಸ್ಥ ಟಿ.ವಿ ಮೋಹನದಾಸ್ ಪೈ ಅವರು ತಮ್ಮ ತಾಯಿ ವಿಮಲಾ ಪೈ ಇವರ ಹೆಸರಲ್ಲಿ ಸ್ಥಾಪಿಸಿರುವ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿಯನ್ನು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಶ್ರಯದಲ್ಲಿ ನೀಡಲಾಗುತ್ತದೆ.
ಮಣಿಪಾಲ ಮಾಹಿಯ ಸಹ ಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿ ಪ್ರೊ. ಅಮೃತ ಸೋಮೇಶ್ವರರ ಹೆಸರನ್ನು ಈ ವರ್ಷದ ಪ್ರಶಸ್ತಿಗೆ ಸರ್ವಸಮ್ಮತದಿಂದ ಆಯ್ಕೆ ಮಾಡಿದೆ ಎಂದು ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮೃತ ಸೋಮೇಶ್ವರರು ಸಾಹಿತ್ಯ ಕ್ಷೇತ್ರದಲ್ಲಿ ನೀಡಿದ ಸೇವೆ ಅಪಾರ. ಅವರು ಕಾದಂಬರಿಕಾರರಾಗಿ, ಅನುವಾದಕರಾಗಿ, ಕಥಾಸಂಕಲನ, ಕವನ ಸಂಕಲನ, ರೇಡಿಯೋ ರೂಪಕ, ಧ್ವನಿಸುರುಳಿಗೆ ಸಾಹಿತ್ಯ, ನಾಟಕ, 25ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳು, ಯಕ್ಷಗಾನ ಕೃತಿಗಳು, ಗಾದೆಗಳು, ಶಬ್ದಕೋಶ, ವಚನ ಸಾಹಿತ್ಯ, ಪಾಡ್ದನ ಸಂಗ್ರಹ ಹೀಗೆ ಹತ್ತು ಹಲವು ನೆಲೆಗಳಲ್ಲಿ ತಮ್ಮ ಸಾಹಿತ್ಯಿಕ ಪ್ರತಿಭೆಯನ್ನು ತೋರ್ಪಡಿಸಿದವರು. ಅವರ ಕೃತಿಗಳಲ್ಲಿ ಮುಖ್ಯವಾದವು ರುದ್ರಶಿಲೆ ಸಾಕ್ಷಿ, ಮಾನವತೆ ಗೆದ್ದಾಗ (ಸಣ್ಣ ಕಥಾಸಂಕಲನ), ವನಮಾಲೆ, ಕರೆಗಾಳಿ (ಕವನ ಸಂಕಲನ), ತೀರದ ತೆರೆ (ಕಾದಂಬರಿ), ಕೋಟಿಚೆನ್ನಯ್ಯ, ವೀರರಾಣಿ ಅಬ್ಬಕ್ಕದೇವಿ (ನಾಟಕ), ಸಪ್ತಮಾತೃಕೆಯರು, ಸಂಭವಾಮಿ ಯುಗೇಯುಗೇ (ನೃತ್ಯರೂಪಕ), ಮೋಯಮಲಯಾಳ ಕನ್ನಡ ಪದಕೋಶ (ಶಬ್ದಕೋಶ) ತಂಬಿಲ, ಗೋಂದೊಲು, ಉಳ್ಳಾಲೊದ ವೀರರಾಣಿ ಅಬ್ಬಕ್ಕಾದೇವಿ (ತುಳು ನಾಟಕ ಸಂಪುಟ), ಯಕ್ಷಗಾನ ಕೃತಿ ಸಂಪುಟ, ಯಕ್ಷಗಾನದ ಹೆಜ್ಜೆ ಗುರುತುಗಳು (ಯಕ್ಷಗಾನ ಗ್ರಂಥ) ಇತ್ಯಾದಿ.
ಸಾಹಿತ್ಯ ಕ್ಷೇತ್ರದ ಇವರ ಸೇವೆಗಾಗಿ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆಯಲ್ಲದೆ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.
ಅಮೃತ ಸೋಮೇಶ್ವರರು ಮಂಗಳೂರು ಸಮೀಪದ ಕೋಟೆಕಾರು ಗ್ರಾಮದ ಅಡ್ಕದಲ್ಲಿ ಜನಿಸಿದರು. ಕೋಟೆಕಾರಿನ ಸ್ಟೆಲ್ಲ ಮೇರಿಸ್ ಕಾನ್ವೆಂಟ್‌ನಲ್ಲಿ ಪ್ರಾಥಮಿಕಶಿಕ್ಷಣ, ಆನಂದಾಶ್ರಮದಲ್ಲಿ ಪ್ರೌಢಶಾಲೆ ವಿದ್ಯಾಭ್ಯಾಸ, ಅಲೋಶಿಯಸ್ ಕಾಲೇಜಿನಲ್ಲಿ ಪದವಿ. ಖಾಸಗಿಯಾಗಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದ ಅವರು ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತರಾದರು. ನಿವೃತ್ತಿಯ ನಂತರ ಮಂಗಳೂರು ವಿವಿ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಕೆಲವು ಕಾಲ ಕಾರ್ಯ ನಿರ್ವಹಿಸಿದ್ದಾರೆ.