ಆಕಾಶವಾಣಿ ಸ್ವರ ಮಂಟಮೆಯಲ್ಲಿ ನಾಲ್ಕು ಕೃತಿಗಳ ಅನಾವರಣ
ಮಂಗಳೂರು, ಫೆ.4: ತುಳು ಭಾಷೆಯು ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎನ್ನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಜೊತೆಗೆ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಆದ್ಯ ಗಮನ ನೀಡಬೇಕು ಎಂದು ಹಿರಿಯ ವಿದ್ವಾಂಸ ಡಾ.ಎ.ವಿ.ನಾವಡ ಹೇಳಿದರು.
ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದ ಸ್ವರಮಂಟಮೆಯ ನೇರಪ್ರಸಾರದ 24ನೇ ಕಾರ್ಯಕ್ರಮದಲ್ಲಿ ರಘು ಇಡ್ಕಿದು ಅವರ ‘ಕಿನ್ಯಗ, ಜೈಲ್, ಮೋಕೆದ ತಂಗಡಿ ಮತ್ತು ಇಲ್‌ಲ್ ಜತ್ತಿನ ಪೊಣ್ಣು’ ಕೃತಿಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
1911ರಲ್ಲಿ ಬಿ.ಎಂ.ಶ್ರೀ ಧಾರವಾಡದಲ್ಲಿ ‘ಕನ್ನಡ ತಲೆ ಎತ್ತುವ ಬಗೆ’ ಎಂಬ ದೂರದೃಷ್ಟಿಯ ಆಲೋಚನೆ ಹರಿಯಬಿಟ್ಟ ಪರಿಣಾಮ 100 ವರ್ಷಗಳಲ್ಲಿ ಕನ್ನಡವು ಶಾಸ್ತ್ರೀಯ ಸ್ಥಾನಮಾನದೊಂದಿಗೆ ಅಪ್ರತಿಮ ಸಾಧನೆ ಮಾಡಿದೆ. ತುಳುವಿಗೂ ಆ ಚಿಂತನೆ ಅಗತ್ಯವಾಗಿದ್ದು ಸಂಶೋಧನೆ, ಸೃಜನಶೀಲ ಸಾಹಿತ್ಯ ಬೆಳವಣಿಗೆ ಆಗಬೇಕಾಗಿದೆ. ಪಾಡ್ದನಗಳು ಜನಮಾನಸಕ್ಕೆ ತಲುಪುವ ಕೆಲಸ ಆಗಲಿ ಎಂದು ಎ.ವಿ.ನಾವಡ ನುಡಿದರು.
ಕೃತಿಯ ಲೇಖಕ ರಘು ಇಡ್ಕಿದು ಮಾತನಾಡಿದರು. ಟ್ರಾಫಿಕ್ ಪೊಲೀಸ್ ಶಾಂತಪ್ಪಬಾಬು ‘ಕಿನ್ಯಗ’, ಅಧ್ಯಾಪಕಿ ವಿಜಯಲಕ್ಷ್ಮಿ ಕಟೀಲು ‘ಮೋಕೆದ ತಂಗಡಿ’, ಉಪನ್ಯಾಸಕ ಡಾ.ಯಶು ಕುಮಾರ್ ‘ಜೈಲ್’, ಸಾಹಿತಿ ವಿದ್ಯಾಶ್ರೀ ತೊಕ್ಕೊಟ್ಟು ‘ಇಲ್‌ಲ್ ಜತ್ತಿನ ಪೊಣ್ಣ್’ ನಾಟಕವನ್ನು ವಿಮರ್ಶಿಸಿದರು.
ಅರೆಹೊಳೆ ಪ್ರತಿಷ್ಠಾನ ಸದಾಶಿವ ರಾವ್ ಅರೆಹೊಳೆ, ಸುರತ್ಕಲ್ ಗೋವಿಂದದಾಸ ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ, ಲೇಖಕರಾದ ಡಾ.ಸುರೇಶ್ ನೆಗಳಗುಳಿ, ಸದಾನಂದ ನಾರಾವಿ, ಇರಾ ನೇಮು ಪೂಜಾರಿ, ಸುಬ್ರಾಯಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಸ್ವಾಗತಿಸಿ, ನಿರೂಪಿಸಿದರು. ಇಂಜಿನಿಯರ್ ವಿಭಾಗದ ಎ.ಪ್ರಭಾಕರ್, ಚಂದ್ರಶೇಖರ್ ಶೆಟ್ಟಿ.ಎಂ, ರಾಧಾ ಪ್ರಭಾಕರನ್, ಉದ್ಘೋಷಕರಾದ ಮೋನಿ ವಿಟ್ಲ ಮತ್ತು ಅರುಣಾ ರಾವ್ ಸಹಕರಿಸಿದರು.