ಸಾಹಿತಿ ಜಯಂತ್ ಕಾಯ್ಕಿಣಿಗೆ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ
ಪುತ್ತೂರು; ಪುತ್ತೂರಿನ ಪ್ರತಿಷ್ಟಿತ ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ ಜಯಂತ್ ಕಾಯ್ಕಿಣಿ ಅವರಿಗೆ ನೀಡಲು ಶುಕ್ರವಾರ ಮಿನಿವಿಧಾನಸೌಧ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವವನ್ನು ಪ್ರತಿ ವರ್ಷದಂತೆ ಅ. 10ರಂದು ಬಾಲವನದಲ್ಲಿ ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಜಯಂತ್ ಕಾಯ್ಕಿಣಿ ಅವರಿಗೆ ಡಾ. ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಇಬ್ಬರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವಿಚಾರಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಿಶೇಷವಾಗಿ ಜಿಲ್ಲೆಯ ಪತ್ರಕರ್ತರೊಬ್ಬರನ್ನು ಗುರುತಿಸಿ ಗೌರವಿಸಲಾಗುವುದು. ಡಾ. ಕಾರಂತರ ಬಗ್ಗೆ ಮಕ್ಕಳಿಗೆ ಸ್ಪರ್ಧಾ ಕಾರ್ಯಕ್ರಮವನ್ನೂ ಅಳವಡಿಸಿಕೊಳ್ಳಲಾಗುವುದು ಎಂದು ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ತಿಳಿಸಿದರು.
ಭದ್ರತೆ ಹಿನ್ನಲೆಯಲ್ಲಿ ಡಾ.ಶಿವರಾಮ ಕಾರಂತರ `ಜ್ಞಾನಪೀಠ' ಪ್ರಶಸ್ತಿ ಉಪವಿಭಾಗಾಧಿಕಾರಿ ಕಚೇರಿಯ ಟ್ರೆಜರಿಯಲ್ಲಿದ್ದು, ಅ.10ರಂದು ಬಾಲವನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು. ಬಾಲವನದ ಜಿಮ್ ವ್ಯವಸ್ಥೆಯನ್ನೂ ಸಮರ್ಪಕಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಬಾಲವನದ ಡಾ.ಶಿವರಾಮ ಕಾರಂತರ ಮನೆಯನ್ನು ರೂ.30 ಲಕ್ಷ ವೆಚ್ಚದಲ್ಲಿ ಈಗಾಗಲೇ ಪುನರ್ ನಿರ್ಮಾಣ ಮಾಡಲಾಗಿದೆ.
ಬಾಲವನದಲ್ಲಿರುವ ವಾಚನಾಲಯ, ಆರ್ಟ್‍ಗ್ಯಾಲರಿ, ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ರೂ.1 ಕೋಟಿ ವಿಶೇಷ ಅನುದಾನ ಬಂದಿದ್ದು, ಇದರಲ್ಲಿ ಕೇವಲ ರೂ.10 ಲಕ್ಷ ಮಾತ್ರ ವೆಚ್ಚವಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ಬೆಂಗಳೂರಿನ ಇಂಟೆಕ್ ಸಂಸ್ಥೆಗೆ ಗುತ್ತಿಗೆಗೆ ನೀಡಲಾಗಿದೆ. ಗುತ್ತಿಗೆದಾರ ಸಂಸ್ಥೆ ಪರಿಷ್ಕೃತ ದರ ಪಟ್ಟಿಯನ್ನು ನೀಡಿದೆ. ಅದರ ಪರಿಶೀಲನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಉಪವಿಭಾಗಾಧಿಕಾರಿ ಅವರು ತಿಳಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಹಶೀಲ್ದಾರ್ ಅನಂತಶಂಕರ, ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಯುವ ಸಬಲೀಕರಣ ಅಧಿಕಾರಿ ಎಂ. ಮಾಮಚ್ಚನ್, ಸರ್ಕಾರಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ, ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕಿ ರೇಖಾ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಮಹಿಳಾ ಠಾಣೆಯ ಇನ್ಸ್‍ಪೆಕ್ಟರ್ ಕುಸುಮಾಧರ್, ರಂಗಕರ್ಮಿ ಐ.ಕೆ.ಬೊಳುವಾರು. ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ.ವಿಜಯಹಾರ್ವಿನ್, ಪುತ್ತೂರು ಕರ್ನಾಟಕ ಸಂಘ ಅಧ್ಯಕ್ಷ ಬಿ.ಪುರಂದರ ಭಟ್ ಮತ್ತಿತರರು ಉಪಸ್ಥಿತರಿದ್ದರು.