ಅಟ್ರಿಂಜೆ ನದಿದಡದಲ್ಲಿ ಕೊರಗ ಕುಟುಂಬಗಳ ಹೀನಾಯ ಬದುಕು
ಬೆಳ್ತಂಗಡಿ, ಆ.3: ತಾಲೂಕಿನ ಸುಲ್ಕೇರಿ ಗ್ರಾಪಂ ವ್ಯಾಪ್ತಿಯ ನಾವರ ಗ್ರಾಮದ ಅಟ್ರಿಂಜೆಯ ನದಿದಡ ದಲ್ಲಿ ಐದು ಕೊರಗ ಕುಟುಂಬಗಳು ಕಡೆಗಣನೆಗೊಳ ಗಾಗಿ ಪ್ಲಾಸ್ಟಿಕ್ ಡೇರೆಗಳನ್ನು ಕಟ್ಟಿಕೊಂಡು ಹೀನಾಯ ಬದುಕು ಸಾಗಿಸುತ್ತಿವೆ. ನದಿಗೆ ಅಳವಡಿಸಲಾದ ಅಪಾಯಕಾರಿಯಾದ ಮರದ ಸೇತುವೆಯನ್ನು ದಾಟಿ ಇವರು ನೆಲೆಸಿರುವ ಸ್ಥಳಕ್ಕೆ ಹೋಗಬೇಕಾಗಿದೆ. ತಾಲೂಕಿನಲ್ಲಿ ಕೊರಗರ ಸ್ಥಿತಿಗತಿ ಹೇಗಿದೆ ಎಂಬುದಕ್ಕೆ ಈ ಕುಟುಂಬಗಳು ಮತ್ತೊಂದು ಜ್ವಲಂತ ಸಾಕ್ಷಿ.
‘ತಮಗೂ ಒಂದು ಮನೆ ಬೇಕು’ ಎಂಬ ಕನಸಿನೊಂದಿಗೆ ಈ ಕುಟುಂಬಗಳು ತಾಲೂಕಿನ ವಿವಿಧೆಡೆ ಅಲೆದಾಡಿ ಅಲ್ಲಲ್ಲಿ ಪುಟ್ಟ ಡೇರೆಗಳನ್ನು ನಿರ್ಮಿಸಿದ್ದರು. ಆದರೆ ಬೇರೆ ಬೇರೆ ಕಾರಣಗಳನ್ನು ನೀಡುತ್ತಾ ಅವರನ್ನು ಆಡಳಿತ ವ್ಯವಸ್ಥೆ ಹೊರದೂಡಿತ್ತು. ಈ ಪೈಕಿ ಮೂರು ಕುಟುಂಬಗಳಿಗೆ ಇನ್ನೂ ಪಡಿತರ ಚೀಟಿಯೇ ಲಭಿಸಿಲ್ಲ. ಚುನಾವಣಾ ಗುರುತಿನ ಚೀಟಿಯೂ ಇವರ ಬಳಿ ಇಲ್ಲ. ಯಾವುದೇ ನಾಗರಿಕ ಸೌಲಭ್ಯಗಳನ್ನೂ ಕೂಡಾ ಇವರು ಪಡೆದಿಲ್ಲ. ಆದರೂ ಬದುಕಬೇಕು, ತಮ್ಮ ಮಕ್ಕಳಿಗೂ ಉತ್ತಮ ಭವಿಷ್ಯ ನಿರ್ಮಿಸಬೇಕು ಎಂದು ನಿರ್ಧರಿಸಿ ಐದು ಕುಟುಂಬಗಳು ನದಿದಡದಲ್ಲಿ ಕಾಡಿನ ನಡುವೆ ಡೇರೆಗಳನ್ನು ನಿರ್ಮಿಸಿಕೊಂಡು ಬದುಕು ಸಾಗಿಸಲು ಹೆಣಗಾಡುತ್ತಿದ್ದಾರೆ. ಆದರೆ ಇಲ್ಲಿಯೂ ಎಷ್ಟು ದಿನದ ಬದುಕು ಎಂಬುದು ಇವರಿಗೆ ಅರಿವಿಲ್ಲ, ಯಾರು, ಯಾವ ಕ್ಷಣ ಒಕ್ಕಲೆಬ್ಬಿಸಲು ಬರುತ್ತಾರೆ ಎಂಬ ಆತಂಕದಿಂದ ದಿನದ ಅನ್ನಕ್ಕಾಗಿ ಹೆಣಗಾಡುತ್ತಿದ್ದಾರೆ. ಕೊರಗರ ಅಭಿವೃದ್ಧಿಗಾಗಿ ಸರಕಾರಗಳು ನೂರಾರು ಕೋಟಿ ರೂ. ಖರ್ಚು ಮಾಡುತ್ತಿರುವಾಗ ಇವರ ಬದುಕು ಮಾತ್ರ ಇನ್ನೂ ಹಸನಾಗದಿರುವುದು ವಿಷಾದನೀಯ.
ಈ ಐದು ಕುಟುಂಬಗಳು ಇಲ್ಲಿ ಡೇರೆ ಹಾಕಿ ಕುಳಿತು ತಿಂಗಳುಗಳೇ ಕಳೆದಿವೆ. ಇವರಲ್ಲಿ ಒಂದು ಕುಟುಂಬ ಈ ಹಿಂದೆ ಸುಲ್ಕೇರಿ ಗ್ರಾಮದ ನಾಯ್ದಗುರಿಯಲ್ಲಿ ಮನೆ ಮಾಡಿತ್ತು. ಆದರೆ ಅಲ್ಲಿ ಕೊರಗರಿಗೆ ಮೀಸಲಿರಿಸಲಾಗಿರುವ ಜಮೀನು ಇಲ್ಲ ಎಂದು ತಿಳಿದು ಅಲ್ಲಿಯೂ ನೆಲೆಯೂರಿಲ್ಲ. ಮತ್ತೊಂದು ಕುಟುಂಬ ನಾವೂರು ಸಮೀಪದ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ಬದುಕುತ್ತಿದ್ದು, ಇದೀಗ ಒಂದಿಷ್ಟು ಜಮೀನಿನ ಆಸೆಗಾಗಿ ಇಲ್ಲಿಗೆ ಬಂದಿದ್ದಾರೆ. ಉಳಿದ ಕುಟುಂಬಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಹರೀಶ-ಹರಿಣಾಕ್ಷಿ ದಂಪತಿಯ ಕುಟುಂಬ, ಸಂದೇಶ-ಕಮಲಾ ಮತ್ತವರ ನಾಲ್ವರು ಮಕ್ಕಳು, ತುಕುಡು ಮತ್ತವರ ಇಬ್ಬರು ಮಕ್ಕಳು, ಪುಷ್ಪಾ ಮತ್ತವರ ಕುಟುಂಬ, ಬಾಬು ಮತ್ತವರ ಕುಟುಂಬ ಇಲ್ಲಿ ವಾಸಿಸುತ್ತಿದೆ. ತಮ್ಮೆಲ್ಲಾ ಕಷ್ಟ-ನಷ್ಟಗಳ ನಡುವೆಯೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಿ ಕಲಿಕೆಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ತಮ್ಮ ಬದುಕಿಗೆ ಒಂದು ಭದ್ರವಾದ ಬುನಾದಿಯನ್ನು ಕಂಡುಕೊಳ್ಳಬೇಕು ಎಂಬ ಅವರ ಪ್ರಯತ್ನಗಳು ಮಾತ್ರ ಇನ್ನೂ ಯಶಸ್ವಿ ಯಾಗಿಲ್ಲ. ಮನೆಗಾಗಿ, ಒಂದು ತುಂಡು ಭೂಮಿಗಾಗಿ ಇವರು ಅಲೆಯದ ಬಾಗಿಲುಗಳಿಲ್ಲ. ತಮಗೆ ಸರಕಾರದಿಂದ ಜಮೀನು ಒದಗಿಸುವಂತೆ ಹಾಗೂ ಮನೆ ನೀಡುವಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಾತಿ ಸಂಘಗಳ ಮೂಲಕ ಹಲವು ಬಾರಿ ಮನವಿ ಸಲ್ಲಿಸಿದ್ದರು.
ಮನವಿಯನ್ನು ಪರಿಶೀಲಿಸಿದ ಅಧಿಕಾರಿಗಳು ಮನೆ ಅಥವಾ ಜಮೀನು ನೀಡದೆ ಕೊಕ್ರಾಡಿ ಗ್ರಾಮದ ಗ್ರಾಮಕರಣಿಕರಲ್ಲಿ ಜಮೀನು ತೋರಿಸುವಂತೆ ಸೂಚಿಸಿದ್ದರು. ಅದರಂತೆ ಗ್ರಾಮಕರಣಿಕರು ಇವರನ್ನು ನೇರವಾಗಿ ಸುಲ್ಕೇರಿ ಗ್ರಾಮದ ಮುಡಿಪಿರೆ ಎಂಬಲ್ಲಿಗೆ ಕರೆದೊಯ್ದು ರಾಷ್ಟ್ರೀಯ ಉದ್ಯಾನವನದ ಒಳಗೆ ಮನೆ ಕಟ್ಟುವಂತೆ ಜಾಗ ತೋರಿಸಿದ್ದರು. ಗ್ರಾಮಕರಣಿಕರ ಮಾತನ್ನು ನಂಬಿದ ಐದು ಕುಟುಂಬಗಳು ಅಲ್ಲಿ ಡೇರೆಗಳನ್ನು ಹಾಕಿದ್ದರು. ಆದರೆ ಒಂದೇ ದಿನದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ಬಂದು ಡೇರೆಗಳನ್ನು ಕಿತ್ತೆಸೆದಿದ್ದರು. ರಾಷ್ಟ್ರೀಯ ಉದ್ಯಾನವನ ಎಂಬ ಅರಿವಿಲ್ಲದೆ ಈ ಕುಟುಂಬಗಳು ಹಾಕಿದ ಡೇರೆಯನ್ನು ಕಳೆದುಕೊಂಡು ಮತ್ತೆ ಬೀದಿ ಪಾಲಾಗಿದ್ದರು. ಅಲ್ಲಿಂದ ನದಿದಡದಲ್ಲಿ ಡೇರೆಗಳನ್ನು ಹಾಕಿ ಬದುಕನ್ನು ಆರಂಭಿಸಿದ್ದಾರೆ. ಆದರೆ ಇವರ ಬಳಿ ಯಾವ ಅಧಿಕಾರಿಗಳು ಇನ್ನೂ ತಲೆಹಾಕಿಲ್ಲ.
ಲಭ್ಯ ಮಾಹಿತಿಯಂತೆ ಇಲ್ಲಿ ಐದು ಎಕ್ರೆ ಸರಕಾರಿ ಜಮೀನಿದೆ. ಅದನ್ನು ಹಂಚಿದರೆ ಇವರ ಬದುಕು ಹಸನಾಗಬಹುದು. ಆದರೆ ಅದಕ್ಕೆ ಮುಂದಾಗುವವರು ಯಾರು ಎಂಬುದೇ ಪ್ರಶ್ನೆಯಾಗಿದೆ. ಪಡಿತರ ಚೀಟಿ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆಯವರಿಗೆ ಮನವಿ ಮಾಡಿ ದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರಕಾರ ಮುಂದಾಗಿದ್ದರೂ, ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಅಧಿಕಾರಗಳ ನಿರ್ಲಕ್ಷದಿಂದ, ಬೇಜವಾಬ್ದಾರಿತನದಿಂದ ಹಲವಾರು ಫಲಾನುಭವಿಗಳು ಇನ್ನೂ ಹೀನಾಯ ಬದುಕನ್ನು ಸಾಗಿಸುತ್ತಿದ್ದಾರೆ ಎನ್ನುವುದಕ್ಕೆ ಈ ಕೊರಗ ಕುಟುಂಬಗಳ ಬದುಕೇ ಸಾಕ್ಷಿ.
ನದಿ ದಾಟಲು ಯಮಯಾತನೆ!
ಇವರ ಡೇರೆಗಳು ನದಿಯ ಬದಿಯಲ್ಲಿದ್ದು, ಹೊರಗೆ ಬರಬೇಕಾದರೆ ನದಿಯನ್ನು ದಾಟಬೇಕು. ನದಿ ದಾಟಲು ಇವರು ತಾವಾಗಿಯೇ ಒಂದು ಮರದ ಸೇತುವೆಯನ್ನು ನಿರ್ಮಿಸಿದ್ದಾರೆ. ಅದನ್ನು ದಾಟಬೇಕಾದರೆ ಜೀವ ಕೈಯಲ್ಲಿ ಹಿಡಿದೇ ಸಾಗಬೇಕಾಗಿದೆ. ಮಕ್ಕಳನ್ನು ಇಲ್ಲಿ ದಾಟಿಸುವುದು ಅಸಾಧ್ಯದ ಮಾತು. ಇದೀಗ ಇಬ್ಬರು ಮಕ್ಕಳು ಮಳೆಗಾಲ ಆರಂಭವಾದ ಬಳಿಕ ಶಾಲೆಗೆ ಹೋಗಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ. ಆದರೆ ಮಳೆಗಾಲ ಮುಗಿಯುವವರೆಗೆ ಶಾಲೆಗೆ ಕಳುಹಿಸುವಂತಿಲ್ಲ ಎನ್ನುತ್ತಾರೆ ಹೆತ್ತವರು.
ನಮಗೆ ಒಂದಿಷ್ಟು ಜಮೀನು ಒದಗಿಸಿ ಮನೆ ಕಟ್ಟಲು ಸರಕಾರ ನೆರವಾದರೆ ಪುಟ್ಟ ಮನೆಗಳನ್ನು ಕಟ್ಟಿಕೊಂಡು ಇಲ್ಲಿ ಬದುಕನ್ನು ರೂಪಿಸುತ್ತೇವೆ. ನಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುತ್ತೇವೆ. ನಾವು ಸರಕಾರ, ಅಧಿಕಾರಿಗಳ ಬಳಿ ಕೇಳುತ್ತಿರುವುದು ಒಂದು ತುಂಡು ಭೂಮಿ ಹಾಗೂ ಮನೆಯನ್ನು ಮಾತ್ರ. ಅದನ್ನು ನೀಡಲು ಇನ್ನಾದರೂ ಸಂಬಂಧಪಟ್ಟವರು ಕಣ್ಣು ತೆರೆಯಲಿ.ಹರಿಣಾಕ್ಷಿ, ಕೊರಗ ಮಹಿಳೆ