'ದೇಶದಲ್ಲಿ ದಲಿತರು, ಮುಸ್ಲಿಮರ ವಿರುದ್ಧ ಈಗಲೂ ತಾರತಮ್ಯ'
'ಹುಟ್ಟಿನಿಂದಲೇ ತಾರತಮ್ಯ' ಉಪನ್ಯಾಸದಲ್ಲಿ ಹರ್ಷ ಮಂದರ್
ಉಡುಪಿ, ಆ.13: ದೇಶದಲ್ಲಿ ಮುಸ್ಲಿಮ್ ಮತ್ತು ದಲಿತರ ವಿರುದ್ಧ ತಾರತಮ್ಯ ಧೋರಣೆ ತೀವ್ರವಾಗಿ ಕಂಡುಬರುತ್ತಿದೆ. ದೇಶದ 11 ರಾಜ್ಯಗಳ ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಈ ಕುರಿತು ನಡೆದ ಅಧ್ಯಯನವೊಂದರಲ್ಲಿ ದಲಿತ ಮಕ್ಕಳು ಈಗಲೂ ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದು, ಅಧ್ಯಾಪಕರು ಅವರನ್ನು ಗಣನೆಗೆತೆಗೆದುಕೊಳ್ಳದಿರುವುದು ಕಂಡು ಬಂದಿದೆ ಎಂದು ಖ್ಯಾತ ಲೇಖಕ, ಚಿಂತಕ, ಅಂಕಣಕಾರ ಹಾಗೂ ಸಾಮಾ ಜಿಕ ಕಾರ್ಯಕರ್ತ ಹರ್ಷ ಮಂದರ್ ಹೇಳಿದ್ದಾರೆ. ಮಣಿಪಾಲ ವಿವಿಯ ಡಾ.ಟಿಎಂಎ ಪೈ ಭಾರತೀಯ ಸಾಹಿತ್ಯ ಪೀಠ ಹಾಗೂ ಎಂಜಿಎಂ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ 'ಹುಟ್ಟಿನಿಂದಲೇ ತಾರತಮ್ಯ' ವಿಷಯದ ಕುರಿತ ಉಪನ್ಯಾಸ- ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸ್ವಚ್ಛ ಭಾರತ ಅಭಿಯಾನದಲ್ಲಿ ಗ್ರಾಮೀಣ ಶಾಲೆಗಳ ಶೌಚಾಲಯಗಳ ಸ್ವಚ್ಛತೆಗೆ ಈಗಲೂ ದಲಿತ ವಿದ್ಯಾರ್ಥಿಗಳನ್ನೇ ಬಳಸಿಕೊಳ್ಳುತ್ತಿರುವುದು ಅಧ್ಯಯನದ ವೇಳೆ ವ್ಯಾಪಕವಾಗಿ ಕಂಡುಬಂದಿದೆ. ಅಸಮಾನತೆ ಎಂಬುದು ಭಾರತೀಯರ ಹೃದಯ ಮತ್ತು ಮನಸ್ಸು ಎರಡರಲ್ಲೂ ಗಟ್ಟಿಯಾಗಿ ಕುಳಿತುಬಿಟ್ಟಿದೆ. ದೇಶದ ಕೋಟ್ಯಂತರ ಮಕ್ಕಳ ಪಾಲಿಗೆ ಹುಟ್ಟಿನ ತಾರತಮ್ಯ ಎಂಬುದು ವಿಧಿನಿಯಮಿತ ಆಕಸ್ಮಿಕವೆಂಬಂತಾಗಿದೆ. ಈ ಮಕ್ಕಳಿಗೆ ಸಾಮಾನ್ಯ ಮಗುವಿಗೆ ಸಿಗಬೇಕಾದ ಹಿಂಸೆಯಿಂದ ರಕ್ಷಣೆ, ಸೂಕ್ತ ಶಿಕ್ಷಣ ಹಾಗೂ ಆರೋಗ್ಯ ಸಿಗುತ್ತಿಲ್ಲ ಎಂದವರು ನುಡಿದರು.
ಭಾರತ, ವಿಶ್ವದಲ್ಲೇ ಮೂರನೆ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅದೇ ರೀತಿ ಭಾರತದ ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ನರಳುತ್ತಿದೆ. ಮೂರರಲ್ಲಿ ಒಂದು ಮಗು ಹಸಿವಿನಿಂದ, ತಲೆಯ ಮೇಲೊಂದು ಸೂರಿಲ್ಲದೆ ಬದುಕುತ್ತಿದೆ. ದೇಶದ ರಾಜಧಾನಿ ದಿಲ್ಲಿಯೊಂದರಲ್ಲೇ 60ರಿಂದ 70,000 ಮಕ್ಕಳು ಪ್ರತಿ ರಾತ್ರಿ ಫುಟ್‌ಪಾತ್‌ನಲ್ಲಿ ಮಲಗುತ್ತಾರೆ ಎಂದವರು ದೇಶದ ಭಯಾನಕ ಚಿತ್ರಣ ತೆರೆದಿಟ್ಟರು.
ನಗರಗಳ ಜೋಪಡಿಗಳಲ್ಲಿ, ಕೊಳಚೆಗೇರಿಗಳಲ್ಲಿ ವಾಸವಾಗಿರುವ ಕುಟುಂಬಗಳ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಾರೆ. ಇದರಿಂದ ಹೊರಬರುವ ದಾರಿಯೂ ಅವರಿಗೆ ಇರುವುದಿಲ್ಲ ಎಂದು ಇಂತಹ ಮಕ್ಕಳ ಕುರಿತಂತೆ ಕೆಲಸ ಮಾಡುವ, ಇವರ ಕರುಣಾಜನಕ ಬದುಕಿನ ಕುರಿತು ಅಂಕಣ, ಕೃತಿಗಳ ಮೂಲಕ ಬೆಳಕು ಚೆಲ್ಲಿರುವ ಹರ್ಷ ಮಂದರ್ ತಿಳಿಸಿದರು.
ಇಂದು ದೇಶದ ಮೇಲ್ವರ್ಗ ಹಾಗೂ ಮಧ್ಯಮ ವರ್ಗದ ಮಂದಿ ಈ ಕೆಳವರ್ಗದ ಕುರಿತಂತೆ ನಿರ್ಲಕ್ಷದ ಧೋರಣೆ ಹೊಂದಿದ್ದಾರೆ. ಮಹಾಭಾರತದ ಏಕಲವ್ಯರು ಇಂದೂ ನಮಗೆ ಸಿಗುತ್ತಾರೆ. ಆದರೆ ಈ ನಡುವೆ ನಿರ್ಭಯಾ, ಕನ್ಹಯ್ಯಾಕುಮಾರ್, ರೋಹಿತ್ ವೇಮುಲಾರಂಥವರು ಇವರ ಮಧ್ಯೆ ಆಶಾಕಿರಣ ವಾಗಿ ಕಾಣಿಸಿಕೊಳ್ಳುತ್ತಾರೆ. ಇದೇ ನಮಗೆ ಭವಿಷ್ಯದ ಬಗ್ಗೆ ಆಶಾವಾದಿಯಾಗಿರುವಂತೆ ಮಾಡುತ್ತದೆ ಎಂದು ಹರ್ಷ ಮಂದರ್ ಹೇಳಿದರು.
ಮಣಿಪಾಲ ವಿವಿಯ ಡಾ.ಟಿ.ಎಂ.ಎ.ಪೈ ಸಾಹಿತ್ಯ ಪೀಠದ ಅಧ್ಯಕ್ಷೆ, ಸಾಹಿತಿ ವೈದೇಹಿ ಮಾತನಾಡಿ, ಈ ಉಪನ್ಯಾಸವನ್ನು ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿ ಮಹಾಶ್ವೇತಾದೇವಿ ಅವರ ನೆನಪಿಗೆ ಅರ್ಪಿಸು ತ್ತಿರುವುದಾಗಿ ತಿಳಿಸಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಉಪಸ್ಥಿತರಿದ್ದರು. ಮಣಿಪಾಲ ವಿವಿ ಗಾಂಧಿ ಶಾಂತಿ ಪೀಠದ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿ, ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು.