ವಸುಮತಿ ಉಡುಪರಿಗೆ ‘ಚಡಗ ಪ್ರಶಸ್ತಿ’
ಉಡುಪಿ, ಅ.25: ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನ ಪ್ರತಿವರ್ಷ ಖ್ಯಾತ ಸಾಹಿತಿ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ಸ್ಮರಣಾರ್ಥ ಶ್ರೇಷ್ಠ ಕಾದಂಬರಿಗೆ ನೀಡುವ ‘ಚಡಗ ಪ್ರಶಸ್ತಿ’ಗೆ ಈ ವರ್ಷ ಮೈಸೂರಿನ ಸಾಹಿತಿ ವಸುಮತಿ ಉಡುಪ ಅವರ ‘ಮನ್ವಂತರ’ ಆಯ್ಕೆಯಾಗಿದೆ.
ಮೂಲತಃ ತೀರ್ಥಹಳ್ಳಿಯವರಾಗಿರುವ ವಸುಮತಿ ಉಡುಪ ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದು, ಮಕ್ಕಳ ಸಾಹಿತ್ಯ, ನಾಟಕ, ಅಂಕಣ, ಕಥಾ ಮತ್ತು ಪ್ರಬಂಧ ಸಂಕಲನಗಳ ಮೂಲಕ ಜಪ್ರಿಯರಾಗಿದ್ದಾರೆ. ಉಡುಪ 10 ಕಾದಂಬರಿಗಳನ್ನು ಬರೆದಿದ್ದಾರೆ. ಇವರ ನಾಟಕ ಹಾಗೂ ಸಣ್ಣ ಕತೆಗಳು ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ.
ವಸುಮತಿ ಉಡುಪ ಅವರು ಸಾಹಿತ್ಯಕ್ಕಾಗಿ ಅಳಸಿಂಗ ಪ್ರಶಸ್ತಿ, ಎಂ.ಕೆ. ಇಂದಿರಾ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿನಿಧಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ ಗಳನ್ನು ಪಡೆದಿದ್ದಾರೆ.
ಖ್ಯಾತ ವಿಮರ್ಶಕ ಡಾ. ಸತ್ಯನಾರಾಯಣ ಮಲ್ಲಿಪಟ್ಣ , ಕತೆಗಾರ ರಮೇಶ್ ಭಟ್ ಹಾಗೂ ಮುಂಬಯಿ ಯ ಡಾ. ಗಿರಿಜಾ ಶಾಸ್ತ್ರಿ ತೀರ್ಪುಗಾರರಾಗಿ ಸಹಕರಿಸಿದ್ದರು. ಪ್ರಶಸ್ತಿ 10 ಸಾವಿರ ರೂ. ನಗದು, ಶಾಲು, ಪ್ರಶಸ್ತಿ ಫಲಕ, ಸ್ಮರಣಿಕೆಗಳನ್ನೊಳಗೊಂಡಿದ್ದು ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ ತಿಂಗಳಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಪ್ರಶಸ್ತಿ ಸಮಿತಿ ಸಂಚಾಲಕಿ ಶಾರದಾ ಭಟ್ ತಿಳಿಸಿದ್ದಾರೆ.