ಧರ್ಮ ದೈನಂದಿನ ಆಚರಣೆಗಳಲ್ಲಿ ಬರಬೇಕು : ವೀರೇಶಾನಂದ ಸರಸ್ವತಿ ಸ್ವಾಮೀಜಿ
‘ಧರ್ಮ ಮತ್ತು ರಾಜಕಾರಣ : ನಾಳೆಗಳ ನಿರ್ಮಾಣ‘ ವಿಚಾರಗೋಷ್ಠಿ
ಮೂಡುಬಿದಿರೆ, ನ.19: ಧರ್ಮವು ತತ್ವ ಮತ್ತು ಸತ್ವಯುತವಾದುದು. ಧರ್ಮ ಎಂದರೆ ಜಪತಪವಲ್ಲ. ದೇವಾಲಯಗಳಿಗೆ ಹೋಗುವುದಲ್ಲ, ಹೋಮಹವನಗಳನ್ನು ಮಾಡುವುದಲ್ಲ ಅಥವಾ ಧಾರ್ಮಿಕ ಆಚರಣೆಗಳನ್ನು ಮಾಡುವುದಲ್ಲ. ಧರ್ಮವನ್ನು ಪುಸ್ತಕದಿಂದ ಅಥವಾ ಪ್ರವಚನದಿಂದ ಪಡೆಯಲು ಸಾಧ್ಯವಿಲ್ಲ. ಬದಲಾಗಿ ಅದು ನಮ್ಮ ದೈನಂದಿನ ದಿನಗಳಲ್ಲಿ ಆಚರಣೆಗೆ ಬರಬೇಕು ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಎರಡನೆ ದಿನ ಶನಿವಾರ ನಡೆದ ‘ಧರ್ಮ ಮತ್ತು ರಾಜಕಾರಣ : ನಾಳೆಗಳ ನಿರ್ಮಾಣ ಎಂಬ ವಿಚಾರಗೋಷ್ಠಿ’ಯಲ್ಲಿ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಧರ್ಮಗಳಲ್ಲಿ ನಾಲ್ಕು ವಿಭಾಗಗಳಿವೆ. ಪ್ರಾಣಿ ಧರ್ಮ, ಪ್ರಕೃತಿ ಧರ್ಮ, ಸಸ್ಯ ಧರ್ಮ ಹಾಗೂ ಮಾನವ ಧರ್ಮವೆಂದು ಗುರುತಿಸಲಾಗುತ್ತದೆ. ಮಾನವ ಹೊರತು ಇತರ ಮೂರು ವಿಭಾಗದಲ್ಲಿಯೂ ಬದಲಾವಣೆ ಕಷ್ಟ. ಆದರೆ ಮಾನವನಿಗೆ ಅಲೋಚನಾ ಶಕ್ತಿ ಇದೆ. ಧರ್ಮದಿಂದ ಅಧರ್ಮದ ಕಡೆ ಅಥವಾ ಅಧರ್ಮದಿಂದ ಧರ್ಮದ ಕಡೆಗೆ ಪರಿವರ್ತನೆಯಾಗಲು ಸಾಧ್ಯವಿದೆ. ಸಮಾಜ ಅಂದರೆ ವ್ಯಕ್ತಿಗಳ ಸಮೂಹ ಅಲ್ಲ. ನಿಷ್ಠೆ ಸಾಂಸ್ಕೃತಿಕ ಹಿನ್ನಲೆಯಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿ ಸಮಾಜಕ್ಕೆ ಸಂಸ್ಕೃತಿಯನ್ನು ನೀಡುತ್ತಾನೆ. ಸಾಂಸ್ಕೃತಿಕ ನೆಲೆಯಲ್ಲಿ ಮನುಷ್ಯ ಬೆಳೆದರೆ ಆತ ಸುಸಂಸ್ಕೃತನಾಗುತ್ತಾನೆ. ಕೆಟ್ಟ ಸಮಾಜ ನಿರ್ಮಾಣವಾದರೆ ಮುಂದಿನ ಪೀಳಿಗೆ ಬಲಿಯಾಗಬಹುದು ಎಂದು ಆತಂಕ ವ್ಯಕ್ತ ಪಡಿಸಿದ ಧರ್ಮ ಎಂದರೆ ತಮ್ಮ ತಮ್ಮ ಕ್ಷೇತ್ರದಲ್ಲಿ ಯಾರು ನಿಷ್ಠೆಯಿಂದ ಕೆಲಸ ಮಾಡುತ್ತಾನೋ ಅದೇ ನಿಜವಾದ ಧರ್ಮ. ಮತ್ತು ಬಾಹ್ಯ ಆಚರಣೆಗಳನ್ನು ನಿರ್ಲಕ್ಷಿಸದೆ ಪ್ರೇಮ, ಸೌಹಾರ್ದ ಮತ್ತು ಸಹೋದರತೆಯಿಂದ ಬಾಳಿದರೆ ಸಭ್ಯರಾಗಲು ಸಾಧ್ಯವಿದೆ. ಹುಟ್ಟುವಾಗ ಪ್ರತಿಯೊಂದು ಜೀವವು ಮೃಗವಾಗಿರುತ್ತದೆ. ಆದರೆ ಸಂಸ್ಕಾರದಿಂದ ಮಾನವನಾಗುತ್ತಾನೆ, ಸಾಧನೆಯಿಂದ ಮತ್ತು ದೇವತಾ ಮನುಷ್ಯನಾಗುತ್ತಾನೆ. ಮಾನವ ದೇವರಾಗಲು ಧರ್ಮ ಬೇಕಾಗುತ್ತದೆ ಎಂದು ಹೇಳಿದರು.
‘ರಾಜಕಾರಣದಲ್ಲಿ ಕರ್ನಾಟಕ ನಾಳೆಗಳ ನಿರ್ಮಾಣ’ದ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ತನ್ನ ಅಭಿಪ್ರಾಯಗಳನ್ನು ಮಂಡಿಸಿ, ಪ್ರಜಾಪ್ರುತ್ವದಲ್ಲಿ ಸರ್ವ ಶ್ರೇಷ್ಠರಾದವರು ಮತದಾರರು. ರಾಜಕಾರಣಿಗಳ ಬಗ್ಗೆ ಮತದಾರರಲ್ಲಿ ನಿರೀಕ್ಷೆಗಳು ಬದಲಾಗಬೇಕಾಗಿದೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಆಯಾಯ ಕ್ಷೇತ್ರದ ರಾಜಕರಣಿಗಳಿಗೆ ಮತ ಹಾಕಿ ಗೆಲ್ಲಿಸಿದರೆ ಮಾತ್ರ ಸಾಲದು, ತಮ್ಮ ಊರಿನಲ್ಲಿರುವ ಸಮಸ್ಯೆಗಳ ಬಗ್ಗೆ, ಮೂಲಭೂತ ಸೌಕರ್ಯಗಳ ಕೊರತೆಗಳ ಬಗ್ಗೆ ಚುನಾಯಿತ ಜನಪ್ರತಿನಿಧಿಗಳನ್ನು ಸದಾ ಎಚ್ಚರಿಸುತ್ತಿರಬೇಕೆಂದರು. ಜಾತಿ ರಾಜಕಾರಣಗಳು ಜಾಸ್ತಿಯಾಗುತ್ತಿದೆ. ಅಜ್ಜ ಹಾಕಿದ ಆಲದ ಮರಕ್ಕೆ ಇನ್ನು ಕೂಡಾ ನೇಣು ಹಾಕಿಕೊಳ್ಳುತ್ತಿದ್ದೇವೆ ಎಂಬ ಸಂಶಯ ಮೂಡುತ್ತಿದೆ. ಸೇವೆಯ ಜವಾಬ್ದಾರಿಯನ್ನು ಮರೆತು ಅಧಿಕಾರದ ಆಡಂಬರಗಳು ಮಿತಿಮೀರುತ್ತಿವೆ. ರಾಜ್ಯ ರಾಜಕಾರಣದ ನ್ಯಾಯ, ಆರ್ಥಿಕ ನ್ಯಾಯವಾಗುವ ಮೂಲಕ ಕರ್ನಾಟಕದ ರಾಜಕಾರಣ ಕುರುಡು ಕಾಂಚಾಣದ ನಾಡಾಗಬಹುದು ಎಂದು ಎಚ್ಚರಿಸಿದರು.
ರಾಜಕಾರಣಿಗಳು ಸುಂದರವಾದ ರಾಜ್ಯ ಕಟ್ಟುವ ಯೋಚನೆಯನ್ನು ಮಾಡುವ ಬದಲಾಗಿ ಒಂದೊಂದು ಓಟಿಗೂ ಒಂದೊಂದು ಉಂಗುರವನ್ನು ಕೊಡುವಂತಹ ರಾಜಕಾರಣವನ್ನು ಸೃಷ್ಠಿಸುತ್ತಿದ್ದಾರೆ. ಕರ್ನಾಟಕ ನಾಳೆಗಳ ನಿರ್ಮಾಣದ ಬಗ್ಗೆ ನಡೆಯಬೇಕಾಗಿರುವ ಚಳವಳಿಗಳು ಮರೆಯಾಗುತ್ತಿವೆ. ಧರ್ಮ ರಾಜಕಾರಣದಿಂದಾಗಿ ಧಾರ್ಮಿಕ ಚಳವಳಿಗಳು ಹಿಂದೆ ಸರಿಯುತ್ತಿವೆ. ಪ್ರತಿಯೊಂದು ಚುನಾವಣೆಗಳಲ್ಲಿಯೂ ರಾಜಕರಣಿಗಳಿಂದ ಕುಡುಕರು ಜಾಸ್ತಿಯಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ಕುಡುಕರ ರಾಜ್ಯವಾಗಬಹುದು ಎಂದು ಆತಂಕ ವ್ಯಕ್ತ ಪಡಿಸಿದರು.
ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.