ಯೋಗದ ಬದಲು ಕೃಷಿ ಕೆಲಸ ಮಾಡಿ: ವರ್ತೂರು ನಾರಾಯಣ ರೆಡ್ಡಿ
ಮೂಡುಬಿದಿರೆ, ನ.20: ದೇಹ, ಮನಸ್ಸು ಆರೋಗ್ಯವಾಗಿರಲು ನಮ್ಮನ್ನು ನಾವು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅಲ್ಲಿ ವಾಲುವುದು, ಬಾಗುವುದು ಎಲ್ಲಾ ಇದೆ. ಬೇರೆ ಯೋಗ ಚಟುವಟಿಕೆ ಬೇಕಾಗಿಲ್ಲ.ಆಡಂಬರದ ಹಬ್ಬ ಮಾಡಿ, ತಿರುಪತಿ ಬೆಟ್ಟ ಏರಿ ಕಾಲಹರಣ ಮಾಡುವ ಬದಲು ಒಂದು ಗಿಡ ನೆಟ್ಟು ಬೆಳೆಸೋಣ. ಭವಿಷ್ಯದ ಸಮಾಜಕ್ಕೆ ಒಳಿತಾಗುತ್ತದೆ ಎಂದು 90 ವರ್ಷದ ಹಿರಿಯ ಕೃಷಿಕ ನಾಡೋಜ ಎಲ್.ವರ್ತೂರು ನಾರಾಯಣ ರೆಡ್ಡಿ ಹೇಳಿದರು.
ಆಳ್ವಾಸ್ ನುಡಿಸಿರಿಯ ಮೂರನೆ ದಿನ ರವಿವಾರ ಕೃಷಿ ಮತ್ತು ಪರಿಸರ :ನಾಳೆಗಳ ನಿರ್ಮಾಣ ವಿಚಾರಗೋಷ್ಠಿಯಲ್ಲಿ ಕೃಷಿ ವಿಷಯದ ಬಗ್ಗೆ ಅವರು ತಮ್ಮ ಕೃಷಿಕ ಚಟುವಟಿಕೆಯ ಅನುಭವವನ್ನು ವಿವರಿಸಿದರು.
ಈ ಭೂಮಿಯನ್ನು ಅರ್ಥ ಮಾಡಿಕೊಂಡರೆ ನಮಗೆ ಬರಗಾಲ ಬಾಧಿಸದು. ನೈಸರ್ಗಿಕವಾಗಿ ಇರುವ ಕಾಡು ಸಕಲ ಜೀವ ರಾಶಿಗೂ ಅನುಕೂಲ ದೇಶದಲ್ಲಿ ಹಸಿರು ಕ್ರಾಂತಿಯ ಹೆಸರಿನಲ್ಲಿ ರಾಸಯನಿಕ ಕೀಟ ನಾಶಕಗಳ ಯಥೇಚ್ಛವಾದ ಬಳಕೆ ಪರಿಸರಕ್ಕೆ ಸಾಕಷ್ಟ ಹಾನಿಯುಂಟು ಮಾಡಿದೆ. ನನಗೆ ನಾಲ್ಕು ಎಕರೆ ಭೂಮಿ ಇದೆ. ಭೂಮಿಯಲ್ಲಿ ರಾಸಯನಿಕ ಬಳಸದೆ ಸಾವಯವ ವಸ್ತುಗಳನ್ನು ಬಳಸಿ ಕೃಷಿ ಮಾಡುತ್ತೇನೆ. ನನ್ನ ಜಮೀನಿನಲ್ಲಿ ಬೆಳೆಸಿದ ಒಂದು ಅಪ್ಪೆ ಮಿಡಿ ನನಗೆ ವಾರ್ಷಿಕ 11 ಸಾವಿರ ರೂ. ಇಳುವರಿಯನ್ನು ತಂದು ಕೊಟ್ಟಿದೆ. ಮಳೆ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡಿದೆ. ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಭೂಮಿಯಲ್ಲಿ ಬರುವ ಆದಾಯದಿಂದ ಬ್ಯಾಂಕಿನಲ್ಲಿ ಸಾಲ ಮಾಡುವ ಪರಿಸ್ಥಿತಿ ಬಂದಿಲ್ಲ. ರೈತರು ಬ್ಯಾಂಕ್ ಸಾಲಕ್ಕೆ ಕೈಚಾಚಿ ಸಾಲ ಮನ್ನಾ ಮಾಡಿ ಎಂದು ಕೇಳುವ ಸ್ಥಿತಿಗೆ ಬರಬಾರದು. ಸಾಲ ತೀರಿಸುವ ಶಕ್ತಿ ನೀಡಿ ಎಂದು ಕೇಳುವಂತಾಗ ಬೇಕು. ರೈತರು ಸರಳ ಜೀವನ ಮಾಡಲು ಕಲಿಯಬೇಕು. ಕಸ ಕಡ್ಡಿ ಉರಿಸುವ ಬದಲು ಭೂಮಿ ಸೇರಲಿ. ಎರೆಹುಳು, ಗೆದ್ದಲು, ಮರ-ಗಿಡಗಳು ನಮ್ಮ ಸುತ್ತ ಇದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನಾರಾಯಣ ರೆಡ್ಡಿ ತಿಳಿಸಿದರು.
ಎರೆಹುಳು, ಗೆದ್ದಲು ಮನುಷ್ಯನ ಮಿತ್ರ
ಕೀಟನಾಶವನ್ನು, ರಾಸಾಯನಿಕ ಗೊಬ್ಬರವನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಭೂಮಿಯಲ್ಲಿರುವ ಗೆದ್ದಲು, ಎರೆಹುಳವನ್ನು ಇಲ್ಲದಂತೆ ಮಾಡುವುದರಿಂದ ಮಣ್ಣಿನ ಸಾರ ನಷ್ಟವಾಗುತ್ತದೆ. ಗೆದ್ದಲನ್ನು ರೈತರ ಶತ್ರು ಎಂದೇ ಭಾವಿಸಲಾಗಿದೆ. ಆದರೆ ಗೆದ್ದಲು ಸತ್ತ ನಿರ್ಜೀವ ಗೊಂಡ ವಸ್ತುಗಳನ್ನು ತಿಂದು ಅರಗಿಸಿಕೊಂಡು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಒಂದು ರೀತಿಯಲ್ಲಿ ಸಸ್ಯಗಳಿಗೆ ದಯಾ ಮರಣವನ್ನು ನೀಡುವ ಪರೋಪಕಾರಿ ಜೀವಿ ಗೆದ್ದಲು ಎಂದು ನಾರಾಯಣ ರೆಡ್ಡಿ ವಿವರಿಸಿದರು.