ಎತ್ತಿನ ಹೊಳೆ ಮೂರ್ಖರಿಂದ ಮೂರ್ಖರಿಗಾಗಿ ಮಾಡಿದ ಯೋಜನೆ: ಡಾ.ಟಿ.ವಿ.ರಾಮಚಂದ್ರ
ಮೂಡುಬಿದಿರೆ ,ನ.20: ಎತ್ತಿನ ಹೊಳೆ ಮೂರ್ಖರಿಂದ ಮೂರ್ಖರಿಗಾಗಿ ಮಾಡಿದ ಯೋಜನೆಯಾಗಿದೆ ಎಂದು ಡಾ.ಟಿ.ವಿ.ರಾಮಚಂದ್ರ ಟೀಕಿಸಿದ್ದಾರೆ.
ಆಳ್ವಾಸ್ ನುಡಿಸಿರಿಯ ಮೂರನೆ ದಿನ ವಿಚಾರಗೋಷ್ಠಿಯಲ್ಲಿ ಪರಿಸರ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು.
ಎತ್ತಿನ ಹೊಳೆಯ ಪ್ರದೇಶದಲ್ಲಿ ವಾರ್ಷಿಕ 3 ಸಾವಿರದಿಂದ ನಾಲ್ಕು ಸಾವಿರ ಮಿಲಿ ಮೀಟರ್ ಮಳೆ ಬೀಳುತ್ತದೆ. ಆ ಪ್ರಕಾರ ಎತ್ತಿನ ಹೊಳೆಯ ಜಲಾನಯನ ಪ್ರದೇಶದಲ್ಲಿ 24 ಟಿಎಂಸಿ ನೀರು ದೋರೆಯುವುದಿಲ್ಲ. ಅಲ್ಲಿ ವಾರ್ಷಿಕವಾಗಿ ಸುರಿಯುವ 3 ಸಾವಿರದಿಂದ 4 ಸಾವಿರ ಮಿ.ಮೀ. ಮಳೆಯಿಂದ ಒಟ್ಟು 9.85 ಟಿಎಂಸಿ ನೀರು ಮಾತ್ರ ದೊರೆಯಬಹುದು. ಈ ಪೈಕಿ ಸ್ಥಳೀಯರ ಬೇಡಿಕೆಗೆ ನೀರು ಪೂರೈಕೆಗೆ 6ಟಿಎಂಸಿ ಹಾಗೂ ಇತರ ಚಟುವಟಿಕೆಗೆ 2 ಟಿಎಂಸಿ ನೀರು ಬಳಕೆಯಾದರೆ ಉಳಿಯುವ ನೀರು ಕೇವಲ ಒಂದು ಟಿಎಂಸಿ! ಈ ರೀತಿ ಸರಕಾರಕ್ಕೆ ತಾನು ಸಲ್ಲಿಸಿದ ವರದಿ ಪರಿಗಣಿಸಲಾಗಿಲ್ಲ ಎಂದು ಡಾ.ಟಿ.ವಿ.ರಾಮಚಂದ್ರ ಟೀಕಿಸಿದ್ದಾರೆ.
ಈ ಒಂದು ಟಿಎಂಸಿ ನೀರನ್ನು ತೆಗೆದುಕೊಂಡು ಹೋಗಲು ಎತ್ತಿನಹೊಳೆ ಯೋಜನೆ ವಿಜ್ಞಾನಿಗಳು ಊಹಿಸಿ ಹೇಳಿಕೆ ನೀಡುತ್ತಾರೆ ಎನ್ನುವುದು ಸರಿಯಲ್ಲ. ಎಸಿ ರೂಂಗಳಲ್ಲಿ ಕುಳಿತು ಬ್ರಿಟೀಷರ ಕಾಲದ ಆಡಳಿತ ನೀತಿಯನ್ನು ಜಾರಿಗೆ ತರುತ್ತಿರುವ ಅಧಿಕಾರಿಗಳಿಂದ ಈ ರೀತಿಯ ಆವಾಂತರಗಳಾಗುತ್ತವೆ ಎಂದು ಪರಿಸರ ತಜ್ಞ ರಾಮಚಂದ್ರ ವಿವರಿಸಿದರು.
ಏಕ ಜಾತಿಯ ಸಸ್ಯಗಳ ನೆಡು ತೋಪುಗಳಿಂದ ಅಪಾಯ
ಏಕ ಜಾತೀಯ ಸಸ್ಯಗಳ ನೆಡು ತೋಪುಗಳಿಂದ ಪರಿಸರಕ್ಕೆ ಅಪಾಯವಿದೆ. ನೈಸರ್ಗಿಕ ಕಾಡುಗಳಲ್ಲಿ ನೀರು ಭೂಮಿಗೆ ಇಂಗುವ ರೀತಿಯಲ್ಲಿ ನೆಡು ತೋಪುಗಳಲ್ಲಿ ನೀರು ಭೂಮಿ ಸೇರುವುದಿಲ್ಲ. ಜೀವ ವೈವಿಧ್ಯವನ್ನು ಏಕರೀತಿಯ ನೆಡು ತೋಪುಗಳಲ್ಲಿ ಕಾಣಲು ಸಾಧ್ಯವಿಲ್ಲ. ವೈವಿಧ್ಯತೆ ಈ ದೇಶದ ಬೆನ್ನೆಲುಬು. ಅದು ಪರಿಸರ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ವೈವಿಧ್ಯ ಸಸ್ಯಗಳ ಕಾಡು ಸಮಸ್ತ ಜೀವ ರಾಶಿಗಳಿಗೆ ತಾಣವಾಗುತ್ತದೆ ಎಂದು ರಾಮಚಂದ್ರ ತಿಳಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಯಬೇಕು
ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಯಬೇಕು. ಕಾವೇರಿ ಜಲಾನಯನ ಪ್ರದೇಶ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಮೂಲಕ ಹಂಚಿ ಹೋಗಿದೆ. ತಮಿಳು ನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರ್ಷಿಕ 500 ಮಿ.ಮೀ ಮಳೆಯಾದರೂ ನೀರಿನ ಸಮಸ್ಯೆ ಇದೆ. ನೈಸರ್ಗಿಕ ಸಂಪತ್ತಿನ ಸರಿಯಾದ ಬಳಕೆಯಾಗದೆ ಇರುವುದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಾಗಿದೆ ಎಂದು ರಾಮಚಂದ್ರ ತಿಳಿಸಿದರು.
ಬೆಂಗಳೂರಿನ ಪ್ರದೇಶದಲ್ಲಿ ಆಗಿರುವ ಹಸುರಿನ ನಾಶ ಹಾಗೂ ನೀರಿನ ಮಾಲಿನ್ಯದಿಂದ ನೀರಿನ ಮಟ್ಟ ಇಳಿಕೆಯಾಗಿದೆ. ನೀರಿನ ಮಟ್ಟ ನೂರಾರು ಅಡಿ ಕೆಳಗೆ ಇಳಿದಿದೆ. ಇದರಿಂದ ಆ ನೀರನ್ನು ಬಳಕೆ ಮಾಡಿದಾಗ ಅದರಲ್ಲಿ ಭೂಗರ್ಭದ ಲವಣಾಂಶ ಸೇರಿ ಕಿಡ್ನಿ ರೋಗ,ಕ್ಯಾನ್ಸರ್ ರೋಗ ಹೆಚ್ಚುವಂತೆ ಮಾಡಿದೆ. ಪ್ಲಾಸ್ಟಿಕ್ ಬಾಟಲ್‌ಗಳ ಮೂಲಕ ನಾವು ನೀರು ಸೇವಿಸುವುದರಿಂದ ಪ್ಲಾಸ್ಟಿಕ್ ಮೂಲಕ ಉಂಟಾಗುವ ವಿಷಕಾರಿ ಅಂಶ ನಮ್ಮ ದೇಹವನ್ನು ಸೇರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ದೇಶದಲ್ಲಿ 279 ಜಿಲ್ಲೆಗಳಲ್ಲಿ ಬರಗಾಲ ಬರಲು, ಮಳೆ ಕಡಿಮೆ ಬೀಳಲು ನೈಸರ್ಗಿಕ ಸಂಪತ್ತಿನ ದುರ್ಬಳಕೆ ಪ್ರಮುಖ ಕಾರಣ ಎಂದು ರಾಮಚಂದ್ರ ತಿಳಿಸಿದರು.