ಎಡ-ಬಲ ಪಂಥವಲ್ಲದ ಮಧ್ಯಮ ಮಾರ್ಗ ಬಲಗೊಳ್ಳಲಿ: ಡಾ.ಗಿರಡ್ಡಿ ಗೋವಿಂದರಾಜ
ಮೂಡುಬಿದಿರೆ, ನ.20: ದೇಶದಲ್ಲಿ ಎಡ ಮತ್ತು ಬಲಪಂಥೀಯರ ಪ್ರಾಬಲ್ಯ ಹೆಚ್ಚುತ್ತಿವೆ. ಇದು ಅಸಹಿಷ್ಣುತೆಯ ವಾತಾವರಣ ಸೃಷ್ಟಿಸುತ್ತಿವೆ. ದೇಶಕ್ಕೆ ಮಾರಕವಾಗಿ ಪರಿಣಮಿಸಿರುವ ಎಡ ಮತ್ತು ಬಲಪಂಥೀಯರ ಚಿಂತನೆಗಳು ಅಪಾಯ ತಂದೊಡ್ಡುತ್ತಿವೆ. ಇವುಗಳನ್ನು ನಿಗ್ರಹಿಸಲು ಎಡ ಮತ್ತು ಬಲಪಂಥವಲ್ಲದ ಮೂರನೆ ಆಯಾಮವಾದ ಮಧ್ಯಮ ಮಾರ್ಗ ಬಲಗೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ. ಗಿರಡ್ಡಿ ಗೋವಿಂದ ರಾಜ ಹೇಳಿದರು.
ಆಳ್ವಾಸ್ ನುಡಿಸಿರಿಯ ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಅವರು, ಎಡ-ಬಲದಲ್ಲಿ ಪ್ರಜಾಪ್ರಭುತ್ವವಿಲ್ಲ. ಅಲ್ಲಿ ಏನಿದ್ದರೂ ಅದರದ್ದೇ ಆದ ಸಿದ್ಧಾಂತಗಳನ್ನು ಒಪ್ಪಿಕೊಳ್ಳಬೇಕಾಗಿದೆ. ಆ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕಾಗಿದೆ. ಆದರೆ, ಮಧ್ಯಮ ಮಾರ್ಗದಲ್ಲಿ ಆ ವಾತಾವರಣ, ಕಟ್ಟುಪಾಡುಗಳಿಲ್ಲ. ಅಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ತಮಗೆ ಬೇಕಾದುದನ್ನು ಒಪ್ಪಿಕೊಳ್ಳುವ, ಪ್ರಶ್ನಿಸುವ ಮನೋಭಾವ ಅಲ್ಲಿದೆ ಎಂದು ನುಡಿದರು.
ಬಲಪಂಥೀಯಕ್ಕೆ ಸಡ್ಡು ಹೊಡೆಯುವ ಭರದಲ್ಲಿ ಎಡಪಂಥೀಯವಾದ ಉಗ್ರರೂಪ ತಾಳುತ್ತಿವೆ. ಇದರಿಂದ ಗಂಡಾಂತರಕ್ಕೆ ಆಹ್ವಾನ ನೀಡಿದಂತಾಗುತ್ತದೆಯೇ ವಿನ: ಅಲ್ಲಿ ಶಾಂತಿ-ಸೌಹಾರ್ದಕ್ಕೆ ಅವಕಾಶವಿಲ್ಲ. ಈ ಎರಡೂ ಪಂಥದಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವಿಲ್ಲದ ಕಾರಣ ದೇಶದಲ್ಲಿ ಮಧ್ಯಮ ಮಾರ್ಗವು ಚಳವಳಿಯ ರೂಪು ತಾಳಬೇಕಾಗಿದೆ. ಪ್ರಜಾಪ್ರಭುತ್ವದ ಉಳಿವಿಗೆ ಈ ಮಧ್ಯಮ ಮಾರ್ಗದ ಆವಶ್ಯಕತೆ ಹಿಂದೆಂದಿಗಿಂತಲೂ ಈಗ ಪ್ರಸ್ತುತವಾಗಿದೆ ಎಂದು ಡಾ. ಗಿರಡ್ಡಿ ಗೋವಿಂದ ರಾಜ ಹೇಳಿದರು.