ಕಾಂತಾವರ; ಸಮಾಜ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ವಚನಗಳು
ಬಸವಾದಿ ಶರಣರ ಕಾಲ ಕರ್ನಾಟಕಕ್ಕೆ ಪುಣ್ಯದ ಕಾಲ. ಪ್ರಭುತ್ವ ಮತ್ತು ಜನಪರ ಎರಡಕ್ಕೂ ಬೆಸುಗೆಯಾಗಿ ಬೆಳೆದ ಶರಣ ಚಳವಳಿ ಮತ್ತು ವಚನ ಸಾಹಿತ್ಯವು ಸಮಾಜ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು. ಇದರಲ್ಲಿ ಅಲ್ಲಮಪ್ರಭುಗಳ ಕಾರ್ಯ ಹಾಗೂ ವಚನಗಳು ಮಹತ್ವಪೂರ್ಣವಾದುದು ಎಂಬುದಾಗಿ ಸಾಹಿತಿ ಹಾಗೂ ಶಿಕ್ಷಣತಜ್ಞರಾದ ಪ್ರೊ.ಕೆ.ಇ.ರಾಧಾಕೃಷ್ಣರವರು ಇಲ್ಲಿ ಮತನಾಡುತ್ತಾ ತಿಳಿಸಿದರು. ಕಾಂತಾವರದ ಅಲ್ಲಮಪ್ರಭು ಪೀಠದ ಅನುಭವದ ನಡೆ ಅನುಭಾವದ ನುಡಿ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಅಲ್ಲಮನ ಅಂತರಂಗಎಂಬ ವಿಷಯದ ಬಗ್ಗೆ ಮಾತನಾಡಿದರು.
ಅಲ್ಲಮನು ಧರ್ಮವಿರೋಧಿಯಲ್ಲದಿದ್ದರೂ ಧರ್ಮವನ್ನೇ ಅಲುಗಾಡಿಸುವಂತೆ ಸಮಾಜದ ಅಂಕುಡೊಂಕುಗಳನ್ನು ಟೀಕಿಸುತ್ತಾ ಬಂದವನು. ವೇದಗಳನ್ನು ಮಡಿಬಟ್ಟೆಯಲ್ಲಿ ಕಟ್ಟಿಟ್ಟು ಪೂಜಿಸುವುದರ ವಿರುದ್ಧ ಹೋರಾಡಿದ ಅಲ್ಲಮನು ವೇದಪುರಾಣಗಳ ಸಾರವನ್ನೇ ಬಳಸಿಕೊಂಡು ಪ್ರಜಾಸಾಹಿತ್ಯದ ರೂಪವಾದ ವಚನಗಳನ್ನು ರಚಿಸಿದನು. ಆತನಿಗೆ ಸಹಪಾಠಿಗಳಾಗಿ ಸಿಕ್ಕಿದ ಮುಕ್ತಾಯಕ್ಕ, ಸಿದ್ಧರಾಮಯ್ಯ, ಡೋಹರ ಕಕ್ಕಯ್ಯರ ಜೊತೆ ಸೇರಿ ಮತ್ತಷ್ಟು ಪಕ್ವಗೊಳ್ಳುತ್ತಾ ಭಾಷೆಯನ್ನು ಸೆಗಣಿಯ ಅಂಗಳದಿಂದ ಹೆಕ್ಕಿ ತೆಗೆದಂತೆ ಅದ್ಭುತ ವಚನಗಳನ್ನು ರಚಿಸಿದನು.
ಸಾಮಾನ್ಯರಿಗೆ ಅಲ್ಲಮ ಒದಗುವುದು ಕಷ್ಟ ಎಂದರೂ ಬಸವಣ್ಣನವರು ಅದನ್ನೇ ಸರಳವಾಗಿ ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಸಿದ್ಧ, ಅತಿಸಿದ್ಧ,ಮಹಾಸಿದ್ಧನೆಂದು ಅಲ್ಲಮನನ್ನು ಕರೆಯಲಾಗುತ್ತಿದ್ದರೂ ಅಲ್ಲಮನು ತನ್ನ ಆತ್ಮೋನ್ನತಿಯನ್ನು ಮಾತ್ರ ಬಯಸದೆ ಸಾಮಾಜಿಕ ಆತ್ಮದ ಉದ್ಧಾರಕ್ಕೆ ಶ್ರಮಿಸಿದ ದಾರ್ಶನಿಕನೂ ಆಗಿದ್ದ ಎಂದರು.
ಡಾ.ನಾ.ಮೊಗಸಾಲೆಯವರ ವಚನಗಳ ಪರಿಕಲ್ಪನೆಗಳ ಲೇಖನ ಸಂಗ್ರಹ ಅರಿವಿನೊಡನೆ ಅನುಸಂಧಾನಕೃತಿಯನ್ನು ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಅನಾವರಣಗೊಳಿಸಿದರು ಮತ್ತು ಮುಖ್ಯ ಅತಿಥಿಗಳನ್ನು ಗೌರವಪೂರ್ವಕವಾಗಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪೀಠದ ಗೌರವಾಧ್ಯಕ್ಷರಾದ ಯಶೋಧರ್. ಪಿ. ಕರ್ಕೇರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಕಲ್ಲೂರು ನಾಗೇಶ್‌ರವರು ಕಾರ್ಯಕ್ರಮ ನಿರ್ವಹಿಸಿ ಡಾ.ನಾ.ಮೊಗಸಾಲೆಯವರು ಸ್ವಾಗತಿಸಿ ವಂದಿಸಿದರು.