ರಾಜ್ಯಮಟ್ಟದ ಪ.ಪೂ.ಕಾಲೇಜು ಹ್ಯಾಂಡ್‌ಬಾಲ್: ಉಡುಪಿ- ಬೆಳಗಾವಿ ತಂಡಗಳಿಗೆ ಅಗ್ರಪ್ರಶಸ್ತಿ
ಉಡುಪಿ, ಡಿ.3: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಹ್ಯಾಂಡ್‌ಬಾಲ್ ಟೂರ್ನಿ ಯ ಬಾಲಕರ ವಿಭಾಗದಲ್ಲಿ ಆತಿಥೇಯ ಉಡುಪಿ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಳಗಾಂ ಜಿಲ್ಲಾ ತಂಡಗಳು ಪ್ರಶಸ್ತಿಯನ್ನು ಗೆದ್ದುಕೊಂಡಿವೆ.
ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಮಂಡ್ಯ, ತೃತೀಯ ಬೆಂಗಳೂರು ಗ್ರಾಮಾಂತರ, ಚತುರ್ಥ ಸ್ಥಾನವನ್ನು ಬೆಳಗಾವಿ ತಂಡಗಳು ಪಡೆದರೆ, ಬಾಲಕಿಯರ ವಿಭಾಗದಲ್ಲಿ ದ.ಕ. ದ್ವಿತೀಯ, ಮೈಸೂರು ತೃತೀಯ ಮತ್ತು ಉಡುಪಿ ಚತುರ್ಥ ಸ್ಥಾನವನ್ನು ಪಡೆದುಕೊಂಡವು.
ವೈಯಕ್ತಿಕ ಪ್ರಶಸ್ತಿಯನ್ನು ಬಾಲಕರ ವಿಭಾಗದಲ್ಲಿ ಬೆಸ್ಟ್ ಗೋಲಿಂಗ್- ಉಡುಪಿಯ ಸೂರಜ್, ಬೆಸ್ಟ್ ಪಾಸಿವ್- ಉಡುಪಿಯ ಯಜ್ಞೇಶ್, ಬೆಸ್ಟ್ 45 ಪ್ಲೇಯರ್ಸ್- ಮಂಡ್ಯದ ಅಕ್ಷಿತ್, ಬೆಸ್ಟ್ ಪ್ಲೇ ಮೇಕರ್- ಮಂಡ್ಯದ ವನ್‌ಶೋ, ಬೆಸ್ಟ್ ವಿಂಗ್- ಉಡುಪಿಯ ಸಂತನ್ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಗೋಲಿಂಗ್- ಮೈಸೂರಿನ ಕೃಪಾ, ಬೆಸ್ಟ್ ಪಾಸಿವ್- ಬೆಳಗಾವಿಯ ವಿದ್ಯಾ, ಬೆಸ್ಟ್ 45 ಪ್ಲೇಯರ್ಸ್- ಬೆಳಗಾವಿಯ ಸಹನಾ, ಬೆಸ್ಟ್ ಪ್ಲೇ ಮೇಕರ್- ಬೆಳಗಾವಿಯ ಮೇಘಾ, ಬೆಸ್ಟ್ ವಿಂಗ್- ದ.ಕ. ಜಿಲ್ಲೆಯ ರಿಯಾ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿತರಿಸಿದರು.
ಪಂದ್ಯಾಕೂಟ ಸಮಿತಿಯ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್, ಉದ್ಯಮಿ ಗಳಾದ ಸಾಧು ಸಾಲಿಯಾನ್, ಕಿಶೋರ್ ಡಿ. ಸುವರ್ಣ, ನಗರಸಭೆ ಸದಸ್ಯೆ ಗೀತಾ ಶೇಟ್, ಪಿಪಿಸಿ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ. ನಾಯಕ್, ಕ್ರೀಡಾ ಸಂಯೋಜಕ ಶ್ರೀಧರ್ ಶೆಟ್ಟಿ ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ್ ಜೋಗಿ ವಂದಿಸಿ ದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.
ಭವಿಷ್ಯ ರೂಪಿಸುವ ಕ್ರೀಡಾ ನೀತಿ ರಚನೆ:
ಕ್ರೀಡಾ ಸಾಧಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮತ್ತು ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಸಿಗುವಂತಹ ರೀತಿಯಲ್ಲಿ ಕ್ರೀಡಾ ನೀತಿಯನ್ನು ರಚಿಸಲಾಗುವುದು. ಕ್ರೀಡೆ ಎಂಬುದು ಆಕರ್ಷಣೆಯಾಗಬೇಕೆ ಹೊರತು ಹೊರೆಯಾಗಬಾರದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.