ಉಡುಪಿ: ಡಾ.ಚಿನ್ನಪ್ಪಗೌಡ, ಸಯ್ಯದ್ ಹಿದಾಯತುಲ್ಲ ಸಾಹೇಬ್ ಅವರಿಗೆ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ
ಉಡುಪಿ, ಫೆ.18: ಉಡುಪಿಯ ಕೆಮ್ಮಲಜೆ ಜಾನಪದ ಪ್ರಕಾಶನ ನೀಡುವ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು 2016-17ನೇ ಸಾಲಿಗೆ ಖ್ಯಾತ ಜಾನಪದ ವಿದ್ವಾಂಸರಾದ ಡಾ. ಚಿನ್ನಪ್ಪ ಗೌಡ ಅವರನ್ನು ಜಾನಪದ ವಿದ್ವಾಂಸ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಲ್ಲದೇ ಹಿರಿಯ ನಾಗಸ್ವರ ಸಂಗೀತ ಕಲಾವಿದ ಸಯ್ಯದ್ ಹಿದಾಯತುಲ್ಲ ಸಾಹೇಬ್ ಇವರನ್ನು ಜಾನಪದ ಕಲಾವಿದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೆಮ್ಮಲಜೆ ಪ್ರಕಾಶನದ ಪ್ರಕಟಣೆ ತಿಳಿಸಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿಗಳಾಗಿದ್ದ ಡಾ. ಕೆ.ಚಿನ್ನಪ್ಪಗೌಡ, ತುಳು-ಕನ್ನಡ ಜಾನಪದ ಅಧ್ಯಯನಕ್ಕೆ ನೀಡಿದ ಕೊಡುಗೆ ಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಅವರ ಭೂತಾರಾಧನೆ, ಜಾನಪದ ಅಧ್ಯಯನ, ಜಾಲಾಟ, ಸಂಸ್ಕೃತಿ ಸಿರಿ, ದ ಮಾಸ್ಕ್ ಆಂಡ್ ಮೆಸೇಜ್ ಕೃತಿಗಳು ತುಳು ಜಾನಪದ ಅಧ್ಯಯನಕ್ಕೆ ಮೌಲಿಕ ಕೊಡುಗೆಗಳಾಗಿವೆ.
ಡಾ.ಚಿನ್ನಪ್ಪ ಗೌಡ ಸಂಗ್ರಹಿಸಿದ ಱದ ಸಿರಿ ಎಪಿಕ್ಸ್ ಸಂಗ್ ಬೈ ಗೋಪಾಲ ನಾಯ್ಕೞಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಕೃತಿ. ಅವರ ಈ ಕೊಡುಗೆಗಳನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ನಲವತ್ತು ವರ್ಷಗಳಿಂದ ವಾದ್ಯಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಹಿದಾಯಿತುಲ್ಲಾ ಅವರು ದೇಶದ ವಿವಿಧ ಭಾಗಗಳಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿದ್ದಲ್ಲದೇ ಅಪಾರ ಶಿಷ್ಯವರ್ಗವನ್ನು ಹೊಂದಿದ್ದಾರೆ. ಭೂತಾರಾಧನೆ ಪ್ರದರ್ಶನ ಕಲೆಗೆ ಅವರ ನಾಗಸ್ವರವಾದನ ಅಪೂರ್ವ ಕಲಾವಂತಿಕೆಯನ್ನು ನೀಡಿದೆ. ಅವರ ಈ ಸಾಧನೆ ಗಾಗಿ ಬನ್ನಂಜೆ ಬಾಬು ಅಮೀನ್ ಜಾನಪದ ಕಲಾವಿದ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪ್ರತಿ ವರ್ಷ ಒಬ್ಬ ಹಿರಿಯ ಜಾನಪದ ವಿದ್ವಾಂಸ ಮತ್ತು ಹಿರಿಯ ಕಲಾವಿದರಿಗೆ ನೀಡುವ ಈ ಪ್ರಶಸ್ತಿ, 10,000ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಒಳಗೊಂಡಿದೆ. ಡಾ.ವೈ.ಎನ್.ಶೆಟ್ಟಿ ಅಧ್ಯಕ್ಷತೆಯ ಡಾ. ಗಣನಾಥ ಎಕ್ಕಾರು, ಎಸ್.ಎ.ಕೃಷ್ಣಯ್ಯ, ಡಾ.ದುಗ್ಗಪ್ಪ ಕಜೇಕಾರ್ ಅವನ್ನು ಒಳಗೊಂಡ ಸಮಿತಿ ಪ್ರಶಸ್ತಿಗೆ ಆಯ್ಕೆಯನ್ನು ಮಾಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಫೆ.25ರಂದು ಸಂಜೆ 6:00 ಗಂಟೆಗೆ ಹೋಟೆಲ್ ದುರ್ಗಾ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ಕವಿ ಡಾ.ಸಿದ್ಧಲಿಂಗಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕೆಮ್ಮಲಜೆ ಜಾನಪದ ಪ್ರಕಾಶನದ ಪ್ರಕಟಣೆ ತಿಳಿಸಿದೆ.