ಅಡುಗೆ ಎಂಬುದು ವಿಶಿಷ್ಟ ಕಲೆಯ ಜಾದೂ: ಡಾ.ನಬನೀತಾ ಸೇನ್
ಮಣಿಪಾಲ, ಫೆ.25: ಅಡುಗೆ ಮನೆ ಎಂಬುದು ರುಚಿ-ರಸವನ್ನು ಉತ್ಪಾದಿಸುವ ಒಂದು ಪ್ರಯೋಗಶಾಲೆ. ಇದು ಮಹಿಳೆಯೊಬ್ಬಳ ಸೃಷ್ಟಿಶೀಲತೆ, ಸೃಜನಶೀಲತೆಯನ್ನು ಬೆಳೆಸುವ ತಾಣ ಎಂದು ಬಂಗಾಳದ ಖ್ಯಾತನಾಮ ಸಾಹಿತಿ, ಕವಯಿತ್ರಿ ಡಾ.ನಬನೀತಾ ದೇವ್ ಸೇನ್ ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲ ವಿವಿಯ ಡಾ.ಟಿಎಂಎ ಪೈ ಭಾರತೀಯ ಸಾಹಿತ್ಯ ಪೀಠದ ವತಿಯಿಂದ ಮಣಿಪಾಲ ಡಾಟಿಎಂಎ ಪೈ ಪ್ಲಾನೆಟೋರಿಯಂ ಆವರಣದ ಲ್ಲಿರುವ ಎಂಸಿಪಿಎಚ್‌ನ ಡಾ.ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಇಂದು ಪ್ರಾರಂಭಗೊಂಡ ಎರಡು ದಿನಗಳ ವಿಶಿಷ್ಟವಾದ 'ಅಡುಗೆಮನೆ ಜಗತ್ತು-ವಿಚಾರ ಸಂಕಿರಣ; ವನ್ನು ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡುತಿದ್ದರು.
ಅಡುಗೆ ಮನೆ ಎಂಬುದು ಮಹಿಳೆಯ ಪಾಲಿಗೆ ಒಂದರ್ಥದಲ್ಲಿ ಸೆರೆಮನೆ ಯಾಗಿದೆ. ಆದರೆ ನಾವದನ್ನು ಸುಂದರವಾದ, ಸೃಜನಶೀಲತೆ ವಿಕಸಿಸುವ ಜೈಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದವರು ವಿವರಿಸಿದರು.
ನಮ್ಮ ಕೃಷಿ ಪ್ರಧಾನ ಸಮಾಜದಲ್ಲಿ ಅಡುಗೆಮನೆಗೆ ಗೌರವಯುತವಾದ ಸ್ಥಾನವಿದೆ. ಇಲ್ಲಿ ಇಡೀ ಕುಟುಂಬಕ್ಕೆ ಬೇಕಾದ ರುಚಿ ಹಾಗೂ ಪೌಷ್ಠಿಕತೆಗಳು ಉತ್ಪಾದನೆಯಾಗುತ್ತವೆ. ಅಡುಗೆಮನೆ ಆ ಕುಟುಂಬದ ಆರ್ಥಿಕ ಸ್ಥಿತಿ-ಗತಿ ಹಾಗೂ ಹಿನ್ನೋಟವನ್ನೂ ಸಹ ಪ್ರತಿಬಿಂಬಿಸುತ್ತದೆ ಎಂದರು.
ಅಡುಗೆ ಎಂಬುದು ವಿಶಿಷ್ಟ ಕಲೆಯ ಜಾದೂ ಆಗಿದೆ. ಇದನ್ನು ಸುಲಭದಲ್ಲಿ ವಿವರಿಸಲಾಗದು. ಅಡುಗೆ ಮನೆಯಲ್ಲಿ ಎಲ್ಲವೂ ಇವೆ. ಮಹಿಳೆಯೊಬ್ಬಳು ಇಲ್ಲಿ ತನ್ನ ಅನುಭವ, ಆಲೋಚನೆಗಳನ್ನು ಒರೆಗೆ ಹಚ್ಚಿ ರುಚಿಕರ ಆಹಾರ ತಯಾರಿಸುತ್ತಾಳೆ. ಅಡುಗೆ ಮನೆ ಒಂದು ಪ್ರಯೋಗಶಾಲೆಯೂ ಹೌದು. ತನಗೆ ಲಭ್ಯವಿರುವ ತರಕಾರಿ, ಸಾಂಬಾರ ಪದಾರ್ಥಗಳನ್ನು ಬಳಸಿ ಆಕೆ ಬಗೆ ಬಗೆಯ ಆಹಾರ ತಯಾರಿಸುತ್ತಾಳೆ ಎಂದರು.
ಈ ಅಡುಗೆಮನೆಯಲ್ಲೇ ಕ್ರಿಯಾಶೀಲ ಆಲೋಚನೆಗಳಿಂದ ನವನವೀನ ಹೊಸ ರುಚಿಗಳು ಜನ್ಮತಾಳುತ್ತವೆ. ಗ್ರಾಮೀಣ ಮಹಿಳೆಯರಿಗಂತೂ ಅಡುಗೆ ಮನೆ ಅವರದೇ ಆದ ಪ್ರಪಂಚವಾಗಿರುತ್ತದೆ. ಗುಟ್ಟಾಗಿಯಾದರೂ ಇಲ್ಲಿ ಆಕೆಯ ಪ್ರತಿಭೆಗಳು ಇಲ್ಲಿ ಪ್ರದರ್ಶನಗೊಳ್ಳುತ್ತವೆ ಎಂದು ಡಾ.ಸೇನ್ ನುಡಿದರು.
ಅಷ್ಟೇ ಅಲ್ಲ ಅಡುಗೆಮನೆ ಮಹಿಳೆಗೆ ಖಿನ್ನತೆಯ ತಾಣವೂ ಆಗುವುದಿದೆ. ಇಲ್ಲಿ ಆಘಾತಕಾರಿ ಅವಘಡಗಳು, ಆತ್ಮಹತ್ಯೆಗಳೂ ಘಟಿಸುತ್ತವೆ. ಇದು ಮಹಿಳೆಯ ಶಕ್ತಿ-ಸಾಮರ್ಥ್ಯಗಳನ್ನೆಲ್ಲಾ ಹೀರುವ, ಆಕೆ ಬಸವಳಿಯುವಂತೆ ಮಾಡುವ ಸ್ಥಳವೂ ಆಗಿರುತ್ತದೆ. ಆದರೆ ಕುಟುಂಬಕ್ಕಾಗಿ ಆಕೆ ಇವನ್ನೆಲ್ಲಾ ಸಹಿಸಿಕೊಳ್ಳಬೇಕಾಗುತ್ತದೆ ಎಂದರು.
ಆದರೆ ಆಧುನಿಕ ಅಡುಗೆಮನೆಗಳು ತನ್ನ ಮೂಲರೂಪವನ್ನು ಬದಲಿಸಿಕೊಳ್ಳುತ್ತಿವೆ. ಇಲ್ಲಿ ಅತ್ಯಾಧುನಿಕ ಉಪಕರಣಗಳು ಸ್ಥಾನ ಪಡೆದಿರುವಂತೆ, ಇಂದು ಗಂಡು-ಹೆಣ್ಣು ಇಬ್ಬರೂ ಅಡುಗೆಮನೆಯನ್ನು ಹಂಚಿಕೊಳ್ಳುತಿದ್ದಾರೆ. ಅಡುಗೆ ಕಲೆ ಎಂಬುದು ಇಂದು ಪ್ರತಿಷ್ಠೆಯ ವಿಷಯ.ವೆನಿಸಿಕೊಳ್ಳುತ್ತಿದೆ ಎಂದು ಡಾ.ಸೇನ್ ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡದ ಖ್ಯಾತ ರಂಗಕರ್ಮಿ, ಬಹುಭಾಷಾ ನಟಿ, ರಂಗಶಂಕರದ ಅರುಂಧತಿ ನಾಗ್ ಮಾತನಾಡಿ, ತನ್ನ ಬದುಕಿನ ಅತ್ಯಂತ ದು:ಖದ ಘಳಿಗೆಯಲ್ಲಿ ಅಡುಗೆಮನೆಯೇ ನನಗೆ ಶಾಂತಿಯನ್ನು ಅರಸುವ ತಾಣವಾಗಿತ್ತು. ಅಂಥ ಕ್ಷಣದಲ್ಲಿ ಜೀವನವನ್ನು ಎದುರಿಸಲು ನಾನು ಕಲಿತಿದ್ದೇ ಅಡುಗೆ ಮನೆಯ ಮೂಲಕ ಎಂದರು.
ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ವರದೇಶ ಹಿರೆಗಂಗೆ ಅತಿಥಿಗಳನ್ನು ಸ್ವಾಗತಿಸಿದರೆ, ಸಾಹಿತ್ಯ ಪೀಠದ ಅಧ್ಯಕ್ಷೆ ಸಾಹಿತಿ ವೈದೇಹಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಿತಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.