'ಮನುಷ್ಯ ಬದಲಾಗಬೇಕಾದರೆ ನಂಬಿಕೆಗಳನ್ನು ಪ್ರಶ್ನಿಸಬೇಕು'
ಪ್ರೊ.ರಾಮದಾಸ್ ಅಭಿನಂದನಾ ಸಮಾರಂಭದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ
ಉಡುಪಿ, ಫೆ.26: ಒಳ್ಳೆಯ ಕಲೆಯು ನಮ್ಮನ್ನು ಪ್ರಶ್ನಾರ್ಹರನ್ನಾಗಿ ಮಾಡುತ್ತದೆ. ಇಲ್ಲದಿದ್ದರೆ ಮನುಷ್ಯ ಬದಲಾಗುವುದಿಲ್ಲ. ಮನುಷ್ಯ ಬದಲಾಗಬೇಕಾದರೆ ಹಾಗೂ ಕಲಾ ಪ್ರಯೋಗ ಮಾಡಬೇಕಾದರೆ ನಂಬಿಕೆಗಳನ್ನು ಪ್ರಶ್ನಿಸಲೇಬೇಕು. ಅದು ತಳಮಟ್ಟದಿಂದ ಆಗಬೇಕು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.
ಉಡುಪಿ ಪ್ರೊ.ರಾಮದಾಸ್ ಅಭಿನಂದನ ಸಮಿತಿ ವತಿಯಿಂದ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ರಂಗಕರ್ಮಿ, ಸಾಹಿತಿ, ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಮದಾಸ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರ 'ದಾಸಭಾರತ' ಕೃತಿಯ ಕುರಿತು ಅವಲೋಕನ ಮಾಡಿದರು.
ಜೀವನದ ಇನ್ನೊಂದು ರೂಪವಾಗಿ ಮಹಾಭಾರತ ಇದೆ. ಮಹಾಭಾರತ ಪ್ರತಿಯೊಂದು ಕಥೆಯು ಒಂದೊಂದು ಸಂದೇಶವನ್ನು ಸಾರುತ್ತದೆ. ದಾಸ ಭಾರತದ ಮೂಲಕ ವ್ಯಾಸರ ಸತ್ಯವನ್ನು ದಾಸರಾಗಿ ಹಿಡಿಯುವ ಪ್ರಯತ್ನ ವನ್ನು ರಾಮದಾಸರು ಮಾಡಿದ್ದಾರೆ ಎಂದು ಅವರು ತಿಳಿಸಿದರು.
ರಾಮದಾಸರು ವ್ಯಾಸ, ಕುಮಾರ ವ್ಯಾಸ, ಪಂಪರನ್ನು ತನ್ನ ಒಳಗೆ ಬರ ಮಾಡಿಕೊಂಡು ಮಹಾಭಾರತದ ಚಿತ್ರವನ್ನು ಈ ಪುಸ್ತಕದಲ್ಲಿ ಕೊಡುವ ಕೆಲಸ ಮಾಡಿದ್ದಾರೆ. ವ್ಯಾಖ್ಯಾನಗಳು ಎಂದಿಗೂ ಮೂಲ ಆಶಯಕ್ಕೆ ತೊಂದರೆ ಆಗದಂತೆ ಇರಬೇಕು. ದಾಸಭಾರತದಲ್ಲಿ ವಾಸ್ತವವಾದವೂ ಮುಖ್ಯವಾಗಿದೆ ಎಂದು ಅವರು ಹೇಳಿದರು.
ರಾಮ್ದಾಸರ 'ದಾಸಭಾರತ' ಕೃತಿಯನ್ನು ಅಂಬಲ ಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಬಿಡುಗಡೆ ಗೊಳಿಸಿದರು. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಡಾ.ಎಚ್. ಶಾಂತಾ ರಾಮ್ ವಹಿಸಿದ್ದರು.
ಸಮಾರಂಭದಲ್ಲಿ ಪ್ರೊ.ರಾಮ್ದಾಸ್ ಹಾಗೂ ಲಕ್ಷ್ಮಿ ರಾಮ್ದಾಸ್ರನ್ನು ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಅಭಿನವ ಪುಸ್ತಕ ಪ್ರಕಾಶನದ ನ.ರವಿಕುಮಾರ್, ಶ್ರೀನಿವಾಸ ಕುಡಂತಾಯ ಮಾತನಾಡಿದರು.
ಲೇಖಕ ಡಾ.ಮಹಾಬಲೇಶ್ವರ ರಾವ್ ಅಭಿನಂದನ ಭಾಷಣ ಮಾಡಿದರು. ಸಮಿತಿಯ ಕಾರ್ಯದರ್ಶಿ ಪ್ರೊ.ಸದಾಶಿವ ರಾವ್, ಉಪಾಧ್ಯಕ್ಷರಾದ ಪ್ರೊ.ರಾಧಾಕೃಷ್ಣ ಆಚಾರ್ಯ, ಎಸ್.ವಿ.ಭಟ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.