ಮಾ.18ರಂದು ಕೃತಿ ವಿಮರ್ಶೆ, ವಿಚಾರ ಸಂಕಿರಣ
ಪುತ್ತೂರು, ಮಾ.14: ಶಿವಳ್ಳಿ ಸಂಪದ ಪುತ್ತೂರು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಅರುಣಾಬ್ಜನ ಮಹಾಭಾರತೋ ಪಳಂತುಳು ಮಹಾಕಾವ್ಯದ ‘ಕೃತಿ ವಿಮರ್ಶೆ ಮತ್ತು ವಿಚಾರ ಸಂಕಿರಣ’ ಮಾ.18ರಂದು ಪುತ್ತೂರಿನ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ಬೋರ್ಡಿಂಗ್‌ನಲ್ಲಿ ನಡೆಯಲಿದೆ ಎಂದು ಶಿವಳ್ಳಿ ಸಂಪದದ ಅಧ್ಯಕ್ಷ ಟಿ. ರಂಗನಾಥ ಉಂಗ್ರುಪುಳಿತ್ತಾಯ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ತುಳು ಸಾಹಿತ್ಯ ಅಕಾಡಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಕಾಸರಗೋಡು ಸರಕಾರಿ ಕಾಲೇಜ್‌ನ ಪ್ರಾಧ್ಯಾಪಕ ರಾಧಾಕೃಷ್ಣ ಬೆಳ್ಳೂರು ವಿಷಯ ಮಂಡಿಸಲಿದ್ದಾರೆ. ಶಿವಳ್ಳಿ ಸಂಪದದ ಅಧ್ಯಕ್ಷ ಟಿ.ರಂಗನಾಥ ಉಂಗ್ರುಪುಳಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಾಜ್ಯ ತುಳು ಅಕಾಡಮಿಯ ರಿಜಿಸ್ಟ್ರಾರ್ ಬಿ. ಚಂದ್ರಹಾಸ ರೈ, ಶಿವಳ್ಳಿ ಸಂಪದದ ಗೌರವ ಅಧ್ಯಕ್ಷ ಎನ್.ಸುಬ್ರಹ್ಮಣ್ಯಂ ಕೊಳತ್ತಾಯ ಮತ್ತು ಕವಿತಾ ಅಡೂರು ಭಾಗವಹಿಸಲಿದ್ದಾರೆ ಎಂದರು. ವೆಂಕಟರಾಜ ಪುಣಿಚಿತ್ತಾಯರ ದೀರ್ಘ ಶ್ರಮದ ಸಂಶೋಧನೆಯಿಂದ ಪ್ರಕಾಶಗೊಂಡ ಈ ಪಳಂತುಳುವಿನ ಸಾಹಿತ್ಯ ಸಂಸ್ಕೃತಿ ಜನಸಾಮಾನ್ಯ ತುಳುವರಿಗೆ ಇನ್ನೂ ತಲುಪಿಲ್ಲ. ಈ ದಿಸೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ತುಳು ಸಂಪದದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಕೋಶಾಧಿಕಾರಿ ಶರತ್‌ಕುಮಾರ್ ಶಿಬರೂರು, ವಕ್ತಾರ ಭಾಸ್ಕರ ಬಾರ್ಯ ಮತ್ತು ಮಹಿಳಾ ಸಂಪದ ಅಧ್ಯಕ್ಷೆ ಪ್ರೇಮಲತಾ ರಾವ್ ಉಪಸ್ಥಿತರಿದ್ದರು.