ಮಹಿಳೆಯರು ಸಾಮುದಾಯಿಕ ಚಿಂತನೆಯಲ್ಲಿ ತೊಡಗಲಿ: ಲೇಖಕಿ ಸುನೀತಾ ಶೆಟ್ಟಿ
ದ.ಕ.ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ
ಮಂಗಳೂರು, ಮಾ.25: ಸಾಮುದಾಯಿಕ ಚಿಂತನೆಯಲ್ಲಿ ಮಹಿಳೆಯರು ಸಾಮೂಹಿಕವಾಗಿ ಪಾಲ್ಗೊಳ್ಳಬೇಕು. ಇದೀಗ ಮಹಿಳೆಯರು ಹೋರಾಟ, ಚಳವಳಿಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳಾ ಸಮುದಾಯ ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದು ಕನ್ನಡ-ತುಳು ಲೇಖಕಿ ಸುನೀತಾ ಎಂ. ಶೆಟ್ಟಿ ಅಭಿಪ್ರಾಯಪಟ್ಟರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಉರ್ವಸ್ಟೋರ್‌ನ ತುಳುಭವನದ ಸಿರಿ ಚಾವಡಿ ವೇದಿಕೆಯಲ್ಲಿ ಶನಿವಾರ ನಡೆದ ದ.ಕ. ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ, ಪ್ರತಿಭೆ, ಸೃಜನಶೀಲ ಶಕ್ತಿ, ಹೊಸ ನದಿಯನ್ನು ಹುಟ್ಟು ಹಾಕುವ ಸಾಮರ್ಥ್ಯ ಮಹಿಳಾ ಸಮುದಾಯದಲ್ಲಿದೆ. ಮಹಿಳೆಯರಲ್ಲಿ ನಾರಿಮಣಿ ಹಾಗೂ ಮಾತಿನ ಮಲ್ಲಿ ಎಂಬ ಎರಡು ವರ್ಗಗಳಿವೆ. ಏನೂ ಮಾತನಾಡದಿದ್ದರೆ ನಾರಿಮಣಿ ಎನ್ನುವ ಜನರು, ಅತಿ ಹೆಚ್ಚು ಮಾತನಾಡಿದರೆ ಮಾತಿನ ಮಲ್ಲಿ ಎನ್ನುತ್ತಾರೆ. ಇವೆರಡೂ ವರ್ಗಗಳನ್ನು ದಾಟಿ ಮಹಿಳಾ ಸಮುದಾಯದ ಬರವಣಿಗೆ ಬರಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಮರ್ಶಕಿ, ಚಿಂತಕಿ ಡಾ. ಬಿ.ಎನ್. ಸುಮಿತ್ರಾಬಾಯಿ ಮಾತನಾಡಿ, ಯಾವುದೇ ಚಳವಳಿ, ಹೋರಾಟ, ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳೆಯರು ಮುಕ್ತವಾಗಿ ಭಾಗವಹಿಸಬೇಕು. ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕು. ಮಹಿಳೆಯರು ಎರಡನೆ ದರ್ಜೆಯ ಸಾಹಿತಿಗಳು ಎಂದು ಪುರುಷ ಪ್ರಧಾನ ವರ್ಗದವರು ತಿಳಿದಿದ್ದಾರೆ. ಇದನ್ನು ತೊಡೆದು ಹಾಕಲು ಮಹಿಳೆಯರು ಕಾವ್ಯ ವಿಶ್ಲೇಷಣೆ, ಚಿಂತನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಎಲ್ಲ ವೇದಿಕೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಭಾಗಿಯಾಗುವಂತೆ ಮಾಡಿದಾಗ ಮಾತ್ರ ಒಬ್ಬರಿಗೊಬ್ಬರು ತಿಳಿದುಕೊಳ್ಳುವ ಅವಕಾಶ ಉಂಟಾಗುತ್ತದೆ. ಇತ್ತೀಚೆಗೆ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಸ್ಥಾನಗಳಿಗೆ ರಾಜಕೀಯದ ಪ್ರಭಾವನ್ನು ಬಳಸಲಾಗುತ್ತಿರುವುದು ಬೇಸರದ ಸಂಗತಿ ಎಂದರು.
ಮಹಿಳಾ ಸಾಹಿತ್ಯವೆಂದರೆ ಈಗ ಯಾರೂ ಮೂಗು ಮುರಿಯುವುದಿಲ್ಲ. ಏನು ಬರೆದಿದ್ದಾರೆ ನೋಡೋಣವೆಂದು ಬುದ್ಧಿವಂತ ಜನರು ಕುತೂಹಲದಿಂದ ಗೌರವಿಸುತ್ತಿದ್ದಾರೆ. ಮಹಿಳಾ ಸಾಹಿತ್ಯದಲ್ಲಿನ ಸೊಗಸುಗಾರಿಕೆಯನ್ನು ಹುಡುಕಿ ಹೊಗಳುವಂತಹ ಮನಸ್ಥಿಯು ಅನೇಕ ವಿಮರ್ಶಕರಲ್ಲಿ ಕಾಣ ಸಿಗುತ್ತಿದೆ. ಇದು ಮಹಿಳೆಯರ ಸಾಹಿತ್ಯ ಚಳವಳಿಗಳಿಗೆ ಸಂದ ಜಯವಾಗಿದೆ ಎಂದು ಬಣ್ಣಿಸಿದರು.
ಸಮ್ಮೇಳನಾಧ್ಯಕ್ಷೆ ಬಿ.ಎಂ. ರೋಹಿಣಿ ಮಾತನಾಡಿ, ಸಾಹಿತ್ಯದಲ್ಲಿ ಬರಹದ ಮೂಲಕ ಸಂದೇಶ ಹಾಗೂ ಚಳವಳಿಯ ಮೂಲಕ ಸಂದೇಶಗಳನ್ನು ನೀಡಬಹುದಾಗಿದೆ. ಸಂಚಿ ಹೊನ್ನಮ್ಮ, ಅಕ್ಕಮಹಾದೇವಿ ಅದ್ಭುತವಾದ ವಚನಗಳನ್ನು ಬರೆದರು. ಅವು ಇಂದಿಗೂ ಪ್ರಸ್ತುತವಾಗಿವೆ. ಆದರೆ ತಂದೆ, ಅಣ್ಣ, ಗಂಡ ಪುರುಷ ಪ್ರಧಾನ ಸಮಾಜ ಹಣ್ಣಿನ ಬಾಯಿ ಮುಚ್ಚುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಾ ಬಂದಿವೆ. ಈಗಲೂ ಏನು ಭಿನ್ನವಾಗಿಲ್ಲ. ಪರಿಸ್ಥಿತಿ ಹಾಗೆಯೇ ಇದೆ. ಇಂದಿನ ಆಧುನಿಕ ಯುಗದಲ್ಲಿ ಎಲ್ಲ ಮಹಿಳೆಯರೂ ಶಿಕ್ಷಣ ಪಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಕುರಿತ 'ತಿರಿ', ಇಂದಿರಾ ಹಾಲಂಬಿ ಅವರ 'ಅವ್ಯಕ್ತ ಅಲೆಗಳು', ಜಾನಕಿ ಬ್ರಹ್ಮಾವರ ಅವರ ಪ್ರವಾಸ ಕಥನ 'ನೈಲ್ ನದಿಯ ನಾಡಿನಲ್ಲಿ', ಶಶಿಕಲಾ ಬಾಯಾರು ಅವರ 'ಪತ್ರಾರ್ಜಿತ' ಕೃತಿಗಳನ್ನು ಅನಾವರಣಗೊಳಿಸಲಾಯಿತು.
ರೂಪಶ್ರೀ ನಾಗರಾಜ ತಂಡ ಪ್ರಾರ್ಥಿಸಿತು. ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಶೈಲಾ ಯು. ಸ್ವಾಗತಿಸಿದರು. ಕಾರ್ಯದರ್ಶಿ ಜ್ಯೋತಿ ಚೇಳ್ಯಾರು ವಂದಿಸಿದರು.