ಕತೆ ಅನುಭವದ ಅವತಾರ: ಸುನಂದಾ ಪ್ರಕಾಶ್ ಕಡಮೆ
ಮಂಗಳೂರು, ಮಾ.25: ಕತೆಗಳು ನಮ್ಮ ಅನುಭವದ ಅವತಾರವಾಗಿದೆ. ಕತೆ ಕೇವಲ ಸಾಹಿತ್ಯದ ಪ್ರಕಾರವಾಗಿ ಉಳಿದಿಲ್ಲ, ಎಲ್ಲೆಡೆಯೂ ವಿಸ್ತರಿಸಿದೆ. ಕತೆಗಾರ್ತಿ ಸಮಾಜದ ಕೈ ಕೂಸು ಎಂದು ಲೇಖಕಿ ಸುನಂದಾ ಕಡಮೆ ಅಭಿಪ್ರಾಯಿಸಿದರು.
ದ.ಕ. ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ '21ನೆ ಶತಮಾನದ ಮಹಿಳಾ ಸಾಹಿತ್ಯದ ನೆಲೆಗಳು' ಎಂಬ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಧುನಿಕತೆಗೆ ಹೆಣ್ಣು ತೆರೆದುಕೊಂಡಿದ್ದಾಳೆ. ದಲಿತ, ದಮನಿತರ, ಸ್ತ್ರೀ ಸಮಾನತೆಯ ಕಾಳಜಿಯನ್ನು ಒಳಗೊಂಡಂತಹ ಸಾಹಿತ್ಯ ಹೊರಬರಲಿ. ನೈಜತೆಯಲ್ಲಿ ಸುಂದರ ಬದುಕನ್ನು ನೋಡುವ ಪರಿ ಬದಲಾಗಬೇಕಿದೆ. ಮಹಿಳೆಗೆ ಕೇವಲ ಹೆರಿಗೆ, ಮೈಲಿಗೆ, ಅಡುಗೆ ಮನೆಯ ಬದುಕೇ ಬದುಕಲ್ಲ. ಅದನ್ನು ಹೊರತುಪಡಿಸಿ ಇನ್ನೂ ದೊಡ್ಡ ಜಗತ್ತಿದೆ. ಮಹಿಳೆ ತನ್ನ ಅಸ್ಮಿತೆ, ಬಿಡುಗಡೆಯ ಹಾದಿಯನ್ನು ಕಂಡುಕೊಳ್ಳುವ ಆವಶ್ಯಕತೆಯಿದೆ. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದು ಕೇವಲ ಪುರುಷ ನಿರ್ಮಿತ ವಾಸ್ತವವಾಗಿದೆ ಎಂದು ಹೇಳಿದರು.
ಕಾದಂಬರಿಯ ಬಗ್ಗೆ ಡಾ.ಲತಾ ಜಿ.ಎಸ್., ಕಾವ್ಯದ ಬಗ್ಗೆ ಡಾ.ಮಮತಾ ತಿಲಕ್ ರಾವ್, ಮಾತನಾಡಿದರು.
ಗೋಷ್ಠಿಯಲ್ಲಿ ಕಾರ್ಪೊರೇಟರ್ ರಾಧಾಕೃಷ್ಣ, ಮಂಜುಳಾ ಸುಕುಮಾರ್ ಉಪಸ್ಥಿತರಿದ್ದರು.